ಮಂಗಳವಾರ, ಮಾರ್ಚ್ 28, 2023
22 °C
ಶಾಂತಿನಿಕೇತನ ಚಿತ್ರಕಲಾ ವಿದ್ಯಾಲಯದಲ್ಲಿ ಉದಯೋನ್ಮುಖ ಕಲಾವಿದರ ಕೈಚಳಕ-

ಚಿಕ್ಕಮಗಳೂರು: ನಾಡು–ನುಡಿ, ಪ್ರಕೃತಿ–ಸಂಸ್ಕೃತಿ ಚಿತ್ತಾರ, ಕಲಾವಿದರ ಕೈಚಳಕ

ಬಿ.ಜೆ.ಧನ್ಯಪ್ರಸಾದ್‌ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ನಗರದ ಶಾಂತಿನಿಕೇತನ ಚಿತ್ರಕಲಾ ವಿದ್ಯಾಲಯದಲ್ಲಿ ಯುವ ಕಲಾವಿದರ ಕುಂಚದಲ್ಲಿ ವೈವಿಧ್ಯಮಯ ಕಲಾಕೃತಿಗಳು ಅರಳಿವೆ. ನಾಡು, ನುಡಿ, ಪ್ರಕೃತಿ, ಸಂಸ್ಕೃತಿ, ಯುದ್ಧ , ಗ್ರಾಮೀಣ ಸೊಗಡು ಮೊದಲಾದ ಪರಿಕಲ್ಪನೆಗಳ ಚಿತ್ತಾರ ಇವೆ.

ರಾಜ್ಯೋತ್ಸವ ಅಂಗವಾಗಿ ಏರ್ಪಡಿಸಿದ್ದ ‘ವರ್ಣೋತ್ಸವ - 2021 ಕನ್ನಡಕ್ಕಾಗಿ ನಾವು’ ಚಿತ್ರಕಲಾ ಶಿಬಿರದಲ್ಲಿ 30 ಉದಯೋನ್ಮುಖ ಕಲಾವಿದರು ಚಿತ್ರಗಳನ್ನು ರಚಿಸಿದ್ದಾರೆ. ವಿದ್ಯಾಲಯದಲ್ಲಿ ಪ್ರದರ್ಶನ ಏರ್ಪಡಿಸಿದ್ದು, ಕಲಾಕೃತಿಗಳು ಕಲಾಸಕ್ತರನ್ನು ಆಕರ್ಷಿಸುತ್ತಿವೆ. 

ಭಾವಕೋಶದ ಲಹರಿಯನ್ನು ವರ್ಣ, ಗೆರೆಗಳಲ್ಲಿ ಮೂಡಿಸಿದ್ದಾರೆ. ಚಿತ್ರಗಳಲ್ಲಿ ಸೌಂದರ್ಯ, ಸಂದೇಶ ಇವೆ. ಚಿತ್ರಣಗಳು ಚಿಂತನೆಗೆ ಹಚ್ಚುತ್ತವೆ.

‘ಭುವನೇಶ್ವರಿ(ಕನ್ನಡಮ್ಮ) ಒಡಲೊಳಗಿನ ಅದ್ಭುತಗಳು’, ‘ಗದ್ದೆ, ಬಯಲು, ಚಕ್ಕಡಿ – ಗ್ರಾಮೀಣ ಸೊಗಡು’, ‘ಕನ್ನಡವೇ ಸತ್ಯ ಕನ್ನಡವೇ ನಿತ್ಯ’, ‘ನರನಾಡಿಗಳಲ್ಲಿ ಕನ್ನಡ ಹೊಮ್ಮಲಿ’, ‘ಹಚ್ಚೇವು ಕನ್ನಡದ ದೀಪ...’, ಕೊವೀಡ್‌ ಕಾಲಘಟ್ಟದ ಕನ್ನಡ ಗಟ್ಟಿಗಿತ್ತಿ’, ‘ಅಕ್ಷರ ವೃಕ್ಷ’, ‘ಅಕ್ಷರ ದಾಸೋಹ’, ‘ನಿಸರ್ಗ ಸೊಬಗು’, ‘ಸಾಮಾಜಿಕ ಮಾಧ್ಯಮಗಳ ಯುಗ’, ‘ಯುದ್ಧದ ಭೀಕರತೆ’, ‘ದೋಣಿ ಯಾನ’ ಮೊದಲಾದ ಪರಿಕಲ್ಪನೆಗಳ ಚಿತ್ರಗಳು ಇವೆ. ಗಾಜಿನ ಮೇಲೆ ರಚಿಸಿರುವ ಕಲಾಕೃತಿಯು (ಕೇರಳ ಶೈಲಿಯ ರೇಖಾ ಪ್ರಧಾನ ಚಿತ್ರ) ಗಮನ ಸೆಳೆಯುತ್ತಿದೆ.

‘ವಾಕ್‌ – ಶ್ರವಣ ದೋಷ’, ‘ಖಿನ್ನತೆ’ ಸಮಸ್ಯೆ ಇರುವ ನಾಲ್ವರು ವಿದ್ಯಾರ್ಥಿಗಳು ಕೆಲ ಕಲಾಕೃತಿಗಳನ್ನು ರಚಿಸಿದ್ದಾರೆ. ಸಾಧನೆಯ ಕಡೆಗೆ ಮುಖ ಮಾಡಿದ್ದಾರೆ.

‘ಚಿತ್ರಕಲಾ ವಿದ್ಯಾಲಯಕ್ಕೆ ದಾಖಲಾಗಿ ಎರಡು ತಿಂಗಳಾಗಿದೆ. ‘ದೋಣಿಯಾನ’ ಚಿತ್ರ ರಚಿಸಿದ್ದೇನೆ. ಚಿತ್ರಕಲೆ ಚೆನ್ನಾಗಿ ಕಲಿತು ಕಲಾವಿದ ಆಗಬೇಕು ಎಂಬ ಕನಸು ಕಟ್ಟಿದ್ದೇನೆ’ ಎಂದು ಖಿನ್ನತೆ ಸಮಸ್ಯೆಯ ವಿದ್ಯಾರ್ಥಿಯೊಬ್ಬರು ಮನದಾಳ ಹಂಚಿಕೊಂಡರು.

‘ಮಗನಿಗೆ ಖಿನ್ನತೆ ಸಮಸ್ಯೆ ಇದೆ. ಕಲೆ ಕಲಿಕೆಯಲ್ಲಿ ತೊಡಗಿಸುವಂತೆ ನರರೋಗ ತಜ್ಞರು ತಿಳಿಸಿದ್ದರು. ಚಿತ್ರಕಲಾ ವಿದ್ಯಾಲಯಕ್ಕೆ ಸೇರಿಸಿದಾಗಿನಿಂದ ಮಗನ ನಡವಳಿಕೆಯಲ್ಲಿ ಬದಲಾವಣೆ ಆಗಿದೆ. ಆರೋಗ್ಯ ಸುಧಾರಿಸಿದೆ, ಏಕಾಗ್ರತೆ ಮೂಡಿದೆ. ತಾನೊಬ್ಬ ಕಲಾವಿದನಾಗಬೇಕು ಎಂಬ ಆಸಕ್ತಿ ತಳೆದಿದ್ದಾನೆ’ ಎಂದು ಯೋಗ ತರಬೇತುದಾರರಾದ ಲತಾ ತಿಳಿಸಿದರು.

‘ಲಲಿತಕಲೆ – ಚಿಕಿತ್ಸಕ ಗುಣ’

ಲಲಿತಕಲೆಗಳಿಗೆ ಚಿಕಿತ್ಸಕ ಗುಣ ಇದೆ. ರೋಗವನ್ನು ಮರೆಸಿ ಏಕಾಗ್ರತೆ, ಉಲ್ಲಾಸ, ಹುಮ್ಮಸ್ಸು ಮೈಗೂಡಿಸುವ ಶಕ್ತಿ ಈ ಕಲೆಗೆ ಇದೆ. ಖಿನ್ನತೆ ಮೊದಲಾದ ಸಮಸ್ಯೆಗಳಿರುವ ಮಕ್ಕಳಿಗೆ ಗುಳಿಗೆ, ಟಾನಿಕ್‌ ಮಾತ್ರವೇ ಮದ್ದಲ್ಲ, ಲಲಿತ ಕಲೆಗಳ (ಚಿತ್ರಕಲೆ...) ಕಲಿಕೆಯಲ್ಲಿ ತೊಡಗಿಸುವಂತೆ ತಜ್ಞರೇ ಪೋಷಕರಿಗೆ ತಿಳಿಸುತ್ತಾರೆ’ ಎಂದು ಶಾಂತಿನಿಕೇತನ ಚಿತ್ರಕಲಾ ವಿದ್ಯಾಲಯದ ಪ್ರಾಚಾರ್ಯ ವಿಶ್ವಕರ್ಮ ತಿಳಿಸಿದರು.

ಖಿನ್ನತೆ, ವಾಕ್‌– ಶ್ರವಣ ದೋಷ ಸಮಸ್ಯೆಗಳಿರುವ ಹಲವು ವಿದ್ಯಾರ್ಥಿಗಳು ನಮ್ಮ ವಿದ್ಯಾಲಯದಲ್ಲಿ ಕಲಿಕೆಯಲ್ಲಿ ತೊಡಗಿದ್ದಾರೆ. ಕಲೆಯಲ್ಲಿ ತೊಡಗಿಕೊಳ್ಳುವುದರಿಂದ ಆರೋಗ್ಯದಲ್ಲಿ ಸುಧಾರಣೆಯಾಗುತ್ತದೆ. ತಾನು ಇತರರಂತೆ ಸಾಧನೆ ಮಾಡಬೇಕು ಎಂಬ ಛಲ ಮೈಗೂಡುತ್ತದೆ. ಹಲವರು ಚಿತ್ರಕಲೆ ಕಲಿತು ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು