ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ಹರ್ಷ ತಂದ ಅಶ್ವಿನಿ ಮಳೆ: ಮುಂಗಾರು ಪೂರ್ವ ಬಿತ್ತನೆಗೆ ತಯಾರಿ

Published 22 ಏಪ್ರಿಲ್ 2024, 7:24 IST
Last Updated 22 ಏಪ್ರಿಲ್ 2024, 7:24 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಮಳೆ ಕೊರತೆಯಿಂದ ಬರಗಾಲ ಎದುರಿಸಿದ ಜಿಲ್ಲೆಯ ಜನ ಕಳೆದ ವಾರ ಅಲ್ಲಲ್ಲಿ ಸುರಿದ ಮಳೆಯಿಂದ ಹೊಸ ನಿರೀಕ್ಷೆ ಕಟ್ಟಿಕೊಟ್ಟಿದ್ದಾರೆ. ಮುಂಗಾರು ಪೂರ್ವ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಕೃಷಿ ಇಲಾಖೆ ಕೂಡ ಸಜ್ಜಾಗಿದೆ.

ಕಳೆದ ವರ್ಷ ಮುಂಗಾರು ತಡವಾಗಿ ಆರಂಭವಾಗಿತ್ತು. ಹಿಂಗಾರು ಕೂಡ ಕೈಕೊಟ್ಟಿತ್ತು. ಇದರಿಂದ ಮಲೆನಾಡಿನಲ್ಲೂ ಬರಗಾಲದ ಸ್ಥಿತಿ ಇತ್ತು. ಬೆಳೆ ಉಳಿಸಿಕೊಳ್ಳಲು ಜನ ಪರದಾಡಿದರು. ಬಿಸಿಲು ಹೆಚ್ಚಾಗಿ ದಾಖಲೆಯ ಉಷ್ಣಾಂಶ ಕೂಡ ದಾಖಲಾಗಿತ್ತು. 

ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಆರಂಭವಾಗಿದ್ದು, ಅಶ್ವಿನಿ ಮಳೆ ರೈತರಲ್ಲಿ ಹರ್ಷ ತಂದಿದೆ. ಮಳೆ ನಡುವೆ ಮೋಡ ಕವಿದ ವಾತಾವರಣ ಇರುವುದರಿಂದ ಮಳೆಯಾಗುವ ನಿರೀಕ್ಷೆಯಲ್ಲಿದ್ದಾರೆ. ಮುಂಗಾರು ಪೂರ್ವ ಬಿತ್ತನೆಗೆ ಬಗ್ಗೆ ಆಸಕ್ತಿ ತೋರಿಸಿದ್ದಾರೆ. 

ಬಯಲುಸೀಮೆ ಪ್ರದೇಶಗಳಾದ ಕಡೂರು, ಅಜ್ಜಂಪುರ, ತರೀಕೆರೆ ಮತ್ತು ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಮುಂಗಾರು ಪೂರ್ವದಲ್ಲಿ ಎಳ್ಳು, ಹೆಸರು, ಅಲಸಂದೆ, ಉದ್ದು, ನೆಲಗಡಲೆ, ಸೂರ್ಯಕಾಂತಿ ಬಿತ್ತನೆ ಮಾಡಲಾಗುತ್ತದೆ. ಅದಕ್ಕಾಗಿ ಭೂಮಿ ಹದಗೊಳಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಮಂತ್ತೊದು ಸುತ್ತಿನ ಮಳೆಗೆ ಕಾಯುತ್ತಿದ್ದಾರೆ.

1,150 ಹೆಕ್ಟೇರ್‌ ಪ್ರದೇಶದಲ್ಲಿ ಅಲಸಂದೆ, 800 ಹೆಕ್ಟೇರ್ ಉದ್ದು, 1,900 ಹೆಕ್ಟೇರ್ ಹೆಸರು, 2,300 ಹೆಕ್ಟೇರ್ ನೆಲಗಡಲೆ, 2,700 ಹೆಕ್ಟೇರ್ ಎಳ್ಳು, 1,500 ಹೆಕ್ಟೇರ್ ಸೂರ್ಯಕಾಂತಿ ಬಿತ್ತನೆಯ ಗುರಿ ಇಟ್ಟುಕೊಂಡಿದೆ.‌ ಕರ್ನಾಟಕ ರಾಜ್ಯ ಬೀಜ ನಿಗಮ, ರಾಷ್ಟ್ರೀಯ ಬೀಜ ನಿಗಮ ಹಾಗೂ ಅರುಣೋದಯ ಖಾಸಗಿ ಬಿತ್ತನೆ ಬೀಜ ಸಂಸ್ಥೆಗೆ ಒಟ್ಟು 1,108 ಟನ್ ಬಿತ್ತನೆ ಬೀಜಕ್ಕೆ ಕೃಷಿ ಇಲಾಖೆ ಕೋರಿಕೆ ಸಲ್ಲಿಸಿದೆ. ಅದರಲ್ಲಿ ನೆಲಗಡಲೆ 875 ಟನ್, ಹೆಸರು 55, ತೊಗರಿ 24, ಉದ್ದು 6, ಅಲಸಂದೆ 79, ಸೂರ್ಯಕಾಂತಿ 69 ಟನ್‍ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಮುಂಗಾರು ಪೂರ್ವ ಬಿತ್ತನಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲಸಂದೆ ಬಿತ್ತನೆ ಬೀಜ ಈಗಾಗಲೇ ದಾಸ್ತಾನಿದೆ. ಸೋಮವಾರದ ವೇಳೆ ಉಳಿದ ಬಿತ್ತನೆ ಬೀಜವೂ ಬರಲಿದೆ. ರೈತ ಸಂಪರ್ಕ ಕೇಂದ್ರಗಳ ಮೂಲಕ ಪೂರೈಕೆ ಮಾಡಲಾಗುವುದು.
–ಎಚ್.ಎಲ್.ಸುಜಾತಾ ಜಂಟಿ ಕೃಷಿ ನಿರ್ದೇಶಕರು ಕೃಷಿ ಇಲಾಖೆ
ಅಶ್ವಿನಿ ಮಳೆ: ಕಾಫಿಗೂ ಅನುಕೂಲ
ಅಶ್ವಿನಿ ಮಳೆ ತಡವಾಗಿಯಾದರೂ ಸುರಿದಿರುವುದು ಕಾಫಿ ಬೆಳೆಗಾರರಲ್ಲೂ ಉತ್ಸಾಹ ಹೆಚ್ಚಿಸಿದೆ. ಮಳೆ ಇಲ್ಲದೆ ಕಂಗಟ್ಟಿದ್ದ ಬೆಳೆಗಾರರ ಸಂತಸಕ್ಕೆ ಕಾರಣವಾಗಿದೆ. ಅಶ್ವಿನಿಯನ್ನು ‘ಬ್ಲಾಸಮ್ ಶವರ್’ ಎಂದೆ ಕರೆಯಲಾಗುತ್ತದೆ. ಕಾಫಿ ಹೂವಾಗುವ ಸಂದರ್ಭದಲ್ಲಿ ಈ ಮಳೆ ಬಂದರೆ ಹೂವು ಅರಳಲು ಅನುಕೂಲ ಆಗಲಿದೆ. ಆದ್ದರಿದ ಬೆಳೆಗಾರರು ಈ ಮಳೆಯನ್ನೇ ಕಾದಿದ್ದರು. ಏ.13ಕ್ಕೆ ಆರಂಭವಾದ ಮಳೆ ತಡವಾಗಿಯಾದರೂ ಸುರಿದಿದೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ. ‘ಕಾಫಿ ಗಿಡದಲ್ಲಿ ಈಗ ಮೊಗ್ಗುಗಳಿದ್ದು ಮಳೆ ಬಂದಿರುವುದಿರಿಂದ ಒಂದೆರಡು ದಿನಗಳಲ್ಲಿ ಹೂವು ಅರಳಲಿದೆ. ಇದೇ ಮಳೆಗಾಗಿ ಬೆಳೆಗಾರರು ಕಾದಿದ್ದೆವು’ ಎಂದು ಬೆಳೆಗಾರರ ಹಿತರಕ್ಷಣಾ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಲದಗದ್ದೆ ಗಿರೀಶ್ ಹೇಳಿದರು.
ರಸಗೊಬ್ಬರ ಕೊರತೆ ಇಲ್ಲ
2024-25ನೇ ಸಾಲಿನ ಮುಂಗಾರು ಹಂಗಾಮಿಗೆ ಜಿಲ್ಲೆಗೆ ಒಟ್ಟು 117749 ಟನ್ ರಸಗೊಬ್ಬರ ಬೇಕಾಗುವ ಅಂದಾಜಿದೆ. ಮುಂಗಾರು ಪೂರ್ವ ಏಪ್ರಿಲ್ ತಿಂಗಳಿಗೆ 17087 ಟನ್ ಬೇಡಿಕೆ ಇದ್ದು ಈಗಾಗಲೇ ಡಿಎಪಿ ಕಾಂಪ್ಲೆಕ್ಸ್ ಯೂರಿಯಾ ಎಸ್‍ಎಸ್‍ಪಿ ಸೇರಿ ಒಟ್ಟು 42677 ಟನ್ ರಸಗೊಬ್ಬರವನ್ನು ಪೂರೈಕೆ ಮಾಡಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡುತ್ತಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT