ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿನಿಂದನೆ ದೂರು–ಶಾಸಕ ಪ್ರತಿತಂತ್ರ: ಜೀವರಾಜ್‌ ಆರೋಪ

ಭಾರತ್‌ ಬಂದ್‌ ಸಂದರ್ಭದಲ್ಲಿ ಅಂಗಡಿಗೆ ನುಗ್ಗಿ ದಾಂದಲೆ; ದೂರು ದಾಖಲು
Last Updated 11 ಸೆಪ್ಟೆಂಬರ್ 2018, 13:13 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಕಾಂಗ್ರೆಸ್‌, ಇತರ ವಿರೋಧ ಪಕ್ಷಗಳು ಭಾರತ್‌ ಬಂದ್‌ ಸಂದರ್ಭದಲ್ಲಿ ಬಾಳೆಹೊನ್ನೂರಿನಲ್ಲಿ ಪ್ರತಿಭಟನಾಕಾರರು ವಿಲಾಸ್‌ ಕುಡ್ವ ಅಂಗಡಿಗೆ ನುಗ್ಗಿ ದಾಂದಲೆ ಮಾಡಿದ ಬಗ್ಗೆ ದೂರು ದಾಖಲಾಗಿದೆ. ಇದಕ್ಕೆ ಪ್ರತಿಯಾಗಿ ಕುಡ್ವ ವಿರುದ್ಧ ಜಾತಿನಿಂದನೆ ದೂರು ದಾಖಲಿಸುವ ಪ್ರತಿತಂತ್ರವನ್ನು ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಹೆಣೆದಿದ್ದಾರೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಎನ್‌.ಜೀವರಾಜ್‌ ಆರೋಪಿಸಿದರು.

‘ರಾಜೇಗೌಡ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಗಮನಹರಿಸಬೇಕಿತ್ತು. ಬದಲಾಗಿ ಅವರೇ ಪ್ರತಿತಂತ್ರ ರೂಪಿಸಿದ್ದಾರೆ. ಶಾಸಕರ ಈ ನಡೆ ಸರಿಯಲ್ಲ’ ಎಂದು ಪತ್ರಿಕಾಗೋಷ್ಠಿಯಲ್ಲಿ ದೂಷಿಸಿದರು.

‘ಕುಡ್ವ ಅವರ ಅಂಗಡಿಗೆ ನುಗ್ಗಿ ದಾಂದಲೆ ಮಾಡಿರುವುದು, ಸಾಮಾನುಗಳನ್ನು ಕಟ್ಟುವುದಕ್ಕೆ ಅಡ್ಡಿಪಡಿಸಿರುವುದು, ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿರುವುದು ಸಿ.ಸಿ ಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಪೊಲೀಸರು ಸಂಜೆ 6 ಗಂಟೆವರೆಗೂ ದೂರು ದಾಖಲಿಸಿಕೊಂಡಿರಲಿಲ್ಲ. ನಾವು ಪ್ರತಿಭಟನೆ ಮಾಡಿದ ನಂತರ ದಾಖಲಿಸಿಕೊಂಡರು’ ಎಂದರು.

‘ಪ್ರತಿಭಟನಕಾರರು ಬಾಳೆಹೊನ್ನೂರಿನ ಅಪೂರ್ವ ಸೌಹಾರ್ದ ಸಹಕಾರಿ ಸಂಘದೊಳಕ್ಕೂ ನುಗ್ಗಿ ದಾಂದಲೆ ಮಾಡಿದ್ದಾರೆ. ಈ ಬಗ್ಗೆಯೂ ದೂರು ದಾಖಲಾಗಿದೆ. ದಾಂದಲೆ ಮಾಡಿದವರ ಮೇಲೆ ಕ್ರಮ ಜರುಗಿಸದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಸಿದರು.

‘ಶಾಸಕ ರಾಜೇಗೌಡ ಅವರು ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಬೇಕು. ಅತಿವೃಷ್ಟಿ ಹಾನಿ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು’ ಎಂದು ಒತ್ತಾಯಿಸಿದರು.

ವಿಧಾನಪರಿಷತ್ತಿನ ಸದಸ್ಯ ಎಂ.ಕೆ.ಪ್ರಾಣೇಶ್‌ ಮಾತನಾಡಿ, ‘ಅತಿವೃಷ್ಟಿ ಹಾನಿ ಪರಿಶೀಲಿಸಲು ಜಿಲ್ಲೆಗೆ ಬರುವುದಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದರು. ಆದರೆ, ಇವರೆಗೂ ಬಂದಿಲ್ಲ. ಅತಿವೃಷ್ಟಿ ಹಾನಿ ನಿರ್ವಹಣೆಗೆ ಜಿಲ್ಲೆಗೆ ₹ 25 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರ ಹೇಳಿದೆ. ಅನುದಾನ ಬಿಡುಗೆಯಾಗಿಲ್ಲ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ಅಂದಾಜು ₹ 500 ಕೋಟಿ ಹಾನಿ ಸಂಭವಿಸಿದೆ. ಹಾನಿ ಪರಿಹಾರಕ್ಕೆ ತಕ್ಷಣವೇ ₹ 100 ಕೋಟಿ ಬಿಡುಗಡೆ ಮಾಡಬೇಕು. ಶೃಂಗೇರಿ, ಕೊಪ್ಪ, ಎನ್‌.ಆರ್‌.ಪುರ, ಮೂಡಿಗೆರೆ ತಾಲ್ಲೂಕುಗಳನ್ನು ಅತಿವೃಷ್ಟಿ ಪ್ರದೇಶಗಳು ಎಂದು ಘೋಷಿಸಬೇಕು. ಸಾಲಮನ್ನಾ ಬಾಬ್ತಿಗೆ ಅನುದಾನ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದರು.

‘ಗುರುದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾದಲ್ಲಿ ಅರ್ಚಕರ ನೇಮಕ ನಿಟ್ಟಿನಲ್ಲಿ ಪರಿಶೀಲನೆ ಮಾಡಿ ವರದಿ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್‌ ಸೂಚಿಸಿದೆ. ಸರ್ಕಾರವು ಈ ನಿಟ್ಟಿನಲ್ಲಿ ಗಮನಹರಿಸಬೇಕು’ ಎಂದರು.

‘ಕೇಂದ್ರ ಸರ್ಕಾರವು ಕೇಂದ್ರ ರಸ್ತೆ ನಿಧಿ ಯೋಜನೆಯಡಿ (ಸಿಆರ್‌ಎಫ್‌) ಅನುದಾನ ಮಂಜೂರು ಮಾಡಿದ್ದರೂ ಬಳಕೆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಸಿಆರ್‌ಎಫ್‌ ಯೋಜನೆಯಡಿ ಜಿಲ್ಲೆಗೆ ₹ 130 ಕೋಟಿ ಅನುದಾನ ಮಂಜೂರಾಗಿದೆ. ತಕ್ಷಣವೇ ಟೆಂಡರ್‌ ಆಹ್ವಾನಿಸಿ, ಕಾಮಗಾರಿ ಆರಂಭಿಸಲು ಕ್ರಮ ವಹಿಸಬೇಕು’ ಎಂದು ಒತ್ತಾಯಿಸಿದರು.

ಬಿಜೆಪಿ ಮುಖಂಡರಾದ ಸಿ.ಎಚ್‌.ಲೋಕೇಶ್‌, ರಮೇಶ್‌, ಉಮೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT