ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

8ರಂದು ಕುಂದುಕೊರತೆ ಪರಿಹಾರ ಸಭೆ: ಡಾ.ರಾಜೇಂದ್ರ

ಪತ್ರಕರ್ತರಿಗೆ ‘ಆಯುಷ್ಮಾನ್ ಭಾರತ್‌’ ಆರೋಗ್ಯ ಕಾರ್ಡ್‌ ವಿತರಣೆ
Last Updated 4 ಮಾರ್ಚ್ 2021, 14:35 IST
ಅಕ್ಷರ ಗಾತ್ರ

ಮಂಗಳೂರು: ‘ಆಯುಷ್ಮಾನ್ ಭಾರತ್– ಆರೋಗ್ಯ ಕರ್ನಾಟಕ’ ಯೋಜನೆ ಕುರಿತು ಜನರ ದೂರಿನ ಮೇರೆಗೆ ಚರ್ಚಿಸಲು ಇದೇ 8ರಂದು ಆಸ್ಪತ್ರೆಗಳ ಮುಖ್ಯಸ್ಥರನ್ನು ಒಳಗೊಂಡ ಕುಂದುಕೊರತೆ ಪರಿಹಾರ ಸಭೆಯನ್ನು ಕರೆಯಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಶ್ರಯದಲ್ಲಿ ಪತ್ರಕರ್ತರಿಗೆ ‘ಆಯುಷ್ಮಾನ್ ಭಾರತ್‌’ ಆರೋಗ್ಯ ಕಾರ್ಡ್‌ ಅನ್ನು ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸಾಂಕೇತಿಕವಾಗಿ ವಿತರಿಸಿ ಮಾತನಾಡಿದರು.

‘ಆಯುಷ್ಮಾನ್ ಯೋಜನೆಯಡಿ ರೋಗಿ ಆಸ್ಪತ್ರೆಗೆ ದಾಖಲಾದ 24 ಗಂಟೆವರೆಗಿನ ಹಾಗೂ ಆಯುಷ್ಮಾನ್ ಕಾರ್ಡ್‌ನಡಿ ಚಿಕಿತ್ಸೆಗೆ ಸಮ್ಮತಿ ದೊರಕುವ ವರೆಗಿನ ವೆಚ್ಚವನ್ನು ರೋಗಿಯೇ ಭರಿಸಬೇಕಾಗುತ್ತದೆ. ರೋಗ ಪತ್ತೆಹಚ್ಚುವ ಸಂದರ್ಭದಲ್ಲಿ ಮಾಡುವ ಎಂಆರ್‌ಐ, ಸಿಟಿ ಸ್ಕಾನ್‌ನ ದರವು ಬಡ ರೋಗಿಗಳಿಗೆ ದುಬಾರಿಯಾಗುತ್ತಿರುವ ದೂರುಗಳು ಬಂದಿವೆ. ಈ ಕುರಿತು ಆಸ್ಪತ್ರೆಗಳ ಮುಖ್ಯಸ್ಥರ ಜತೆ ಚರ್ಚಿಸಿ, ಈ ಸಮಸ್ಯೆಯನ್ನು ಬಗೆಹರಿಸಲಾಗುವುದು’ ಎಂದು ಅವರು ಹೇಳಿದರು.

ಯೋಜನೆಯ ಜಿಲ್ಲಾ ನೋಡಲ್ ಅಧಿಕಾರಿ ಡಾ.ರತ್ನಾಕರ್ ಮಾತನಾಡಿ, ‘ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ 1,650 ವಿಧದ ಚಿಕಿತ್ಸೆಗಳು ಜಿಲ್ಲೆಯ 32 ಆಸ್ಪತ್ರೆಗಳಲ್ಲಿ ಗರಿಷ್ಠ 5 ಲಕ್ಷದವರೆಗಿನ ಚಿಕಿತ್ಸೆ ಉಚಿತವಾಗಿರುತ್ತದೆ. ಎಪಿಎಲ್ ಕಾರ್ಡ್‌ನವರಿಗೆ ಶೇ 30ರಷ್ಟು ಚಿಕಿತ್ಸಾ ವೆಚ್ಚವನ್ನು ಆಯುಷ್ಮಾನ್ ಕಾರ್ಡ್‌ನಡಿ ಅನ್ವಯವಾಗುತ್ತದೆ. ರೋಗಿ ಆಸ್ಪತ್ರೆಗೆ ದಾಖಲಾಗಿ 24 ಗಂಟೆಯೊಳಗೆ ಮರಣ ಹೊಂದಿದ್ದಲ್ಲಿ ಆಯುಷ್ಮಾನ್ ಕಾರ್ಡ್ ಅನ್ವಯವಾಗುವುದಿಲ್ಲ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾದರೆ ವೆನ್ಲಾಕ್‌ ಆಸ್ಪತ್ರೆಯಿಂದ ಶಿಫಾರಸ್ಸು ಪತ್ರ ಪಡೆಯುವುದು ಕಡ್ಡಾಯ. ಅಪಘಾತದ ತುರ್ತು ಸಂದರ್ಭದಲ್ಲಿ ಶಿಫಾರಸ್ಸು ಪತ್ರ ಬೇಕಿಲ್ಲ’ ಎಂದು ಹೇಳಿದರು.

ಜಿಲ್ಲಾ ಕಾರ್ಯನಿರತರ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಉಪಸ್ಥಿತರಿದ್ದರು. ಪತ್ರಕರ್ತ ಹರೀಶ್ ಮೋಟುಕಾನ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT