ಚಿಕ್ಕಮಗಳೂರು: ಐತಿಹಾಸಿಕ ಅಯ್ಯನಕೆರೆಯ ಕೋಡಿಯಿಂದ ಹರಿಯುವ ನೀರನ್ನು ಹುಲಿಕೆರೆ ಗ್ರಾಮ ಬೆರಟಿಕೆರೆಗೆ ತುಂಬಿಸುವ ಏತ ನೀರಾವರಿ ಯೋಜನೆಯ ಕಾಮಗಾರಿ ಆರಂಭಿಸಲು ಸಣ್ಣ ನೀರಾವರಿ ಇಲಾಖೆ ಸಿದ್ಧತೆ ನಡೆಸಿದೆ. ಗುತ್ತಿಗೆದಾರರಿಗೆ ಕಾರ್ಯಾದೇಶವನ್ನೂ ನೀಡಲಾಗಿದ್ದು, ಸದ್ಯದಲ್ಲೇ ಕಾಮಗಾರಿ ಆರಂಭವಾಗಲಿದೆ.
ಕಡೂರು ತಾಲ್ಲೂಕಿನ ಜೀವನಾಡಿ ಕೆರೆಗಳಲ್ಲಿ ಅಯ್ಯನಕೆರೆ ಕೂಡ ಒಂದು. ಬಯಲುಸೀಮೆ ಮತ್ತು ಮಲೆನಾಡ ಅಂಚಿನ ಸಖರಾಯಪಟ್ಟಣದ ಹೊರವಲಯದಲ್ಲಿ ಇರುವ ಈ ಕೆರೆಗೆ ಪಶ್ಚಿಮಘಟ್ಟದ ಗಿರಿಶ್ರೇಣಿಯಿಂದ ನೀರು ಹರಿದು ಬರಲಿದೆ. ಈ ಕೆರೆ ತುಂಬಿದ ಬಳಿಕ ಕೋಡಿಯಿಂದ ಹರಿಯುವ ನೀರನ್ನು ಮತ್ತೊಂದು ಕೆರೆಗೆ ತುಂಬಿಸುವ ಏತ ನೀರಾವರಿ ಯೋಜನೆ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು.
ಕಾಮಗಾರಿ ಆರಂಭಿಸಲು ಬೇಕಿರುವ ಎಲ್ಲಾ ಪೂರ್ವ ಸಿದ್ಧತೆಗಳನ್ನೂ ಸಣ್ಣ ನೀರಾವರಿ ಇಲಾಖೆ ಪೂರ್ಣಗೊಳಿಸಿದೆ. ₹9.90 ಕೋಟಿ ಮೊತ್ತದ ಯೋಜನೆಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಕಾಮಗಾರಿ ಆರಂಭಿಸಲು ಗುತ್ತಿಗೆದಾರರಿಗೆ ಕಾರ್ಯಾದೇಶವನ್ನೂ ನೀಡಲಾಗಿದೆ. ಆದರೆ, ರಾಜ್ಯ ಸರ್ಕಾರ ಹೊಸ ಕಾಮಗಾರಿಗಳನ್ನು ಆರಂಭಿಸಲು ಇನ್ನೂ ಅನುಮತಿ ನೀಡಿಲ್ಲ. ಅನುಮತಿ ನೀಡಿದ ಕೂಡಲೇ ಕಾಮಗಾರಿ ಆರಂಭವಾಗಲಿದೆ. ಕಾರ್ಯಾದೇಶ ದೊರೆತಿದ್ದು ಕಾಮಗಾರಿ ಆರಂಭಿಸಲು ಗುತ್ತಿಗೆದಾರರು ಸರ್ಕಾರದ ಹಸಿರು ನಿಶಾನೆಗೆ ಕಾದಿದ್ದಾರೆ. ಕಾಮಗಾರಿ ಆರಂಭಗೊಂಡು ನಿಗದಿತ ವೇಳೆಯಲ್ಲೇ ಪೂರ್ಣಗೊಂಡರೆ ಕೆಲವೇ ವರ್ಷಗಳಲ್ಲಿ ಹುಲಿಕೆರೆಯ ಬಿರಟಿಕೆರೆಗೆ ಅಯ್ಯನಕೆರೆ ನೀರು ಸೇರಲಿದೆ.
ಅಯ್ಯನಕೆರೆ ತುಂಬಿದ ನಂತರ ಕೋಡಿಯಿಂದ ನೀರು ನಾಗೇನಹಳ್ಳಿ ಬಳಿ ಇರುವ ಚೆಕ್ ಡ್ಯಾಂ ಸೇರಲಿದೆ. ಅಲ್ಲಿಂದ ನೀರನ್ನು ಎತ್ತಿ ಹುಲಿಕೆರೆಯ ಬಿರಟಿಕೆರೆಗೆ ಹರಿಸುವುದು ಯೋಜನೆಯ ಉದ್ದೇಶ. ನಾಗೇನಹಳ್ಳಿ ಚೆಕ್ ಡ್ಯಾಂನಿಂದ 6.5 ಕಿಲೋ ಮೀಟರ್ ದೂರ ಇರುವ ಬಿರಟಿಕೆರೆಗೆ ನೀರು ಕೊಂಡೊಯ್ಯಲಾಗುತ್ತದೆ.
ಬಿರಟಿಕೆರೆ, ಸ್ವಾಮಿಕಟ್ಟೆ ಸೇರಿ ಸುತ್ತಮುತ್ತಲ ಸಣ್ಣ–ಪುಟ್ಟ ಕೆರೆಗಳಿಗೂ ನೀರು ಹರಿಸಲಾಗುತ್ತದೆ. ಈ ಭಾಗದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರಕಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ಯೋಜನೆ ಸಾಕಾರಗೊಂಡರೆ ಈ ಭಾಗದ ಹಳ್ಳಿಗಳ ಅಂತರ್ಜಲ ಮಟ್ಟವೂ ವೃದ್ಧಿಯಾಗಲಿದೆ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.