ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಾಮ ಸೇನೆಯಿಂದ ಕೋಮುಭಾವನೆ ಪ್ರಚೋದನೆ: ಬಾಬಾ ಬುಡನ್ ದರ್ಗಾ ಸಂರಕ್ಷಣಾ ಸಮಿತಿ

Published 4 ನವೆಂಬರ್ 2023, 16:11 IST
Last Updated 4 ನವೆಂಬರ್ 2023, 16:11 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಶ್ರೀರಾಮ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಗಂಗಾಧರ ಕುಲಕರ್ಣಿ ಅವರು ಕೋಮುಭಾವನೆ ಕೆರಳಿಸುವ ಪ್ರಚೋದನಕಾರಿ ಹೇಳಿಕೆ ನೀಡಿದ್ದು, ಅವರ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಬಾಬಾ ಬುಡನ್ ದರ್ಗಾ ಸಂರಕ್ಷಣಾ ಸಮಿತಿ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಸಮಿತಿ ಅಧ್ಯಕ್ಷ ಹಾಜಿ ಯೂಸೆಫ್‌, ಉಪಾಧ್ಯಕ್ಷ ಹಾಜಿ ಯೂಸೆಫ್, ಕಾರ್ಯದರ್ಶಿ ಸಯ್ಯದ್ ಮುಗ್ದುಮ್ ಪಾಷಾ, ‘ಶ್ರೀಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾವನ್ನು ಸಂಪೂರ್ಣ ಹಿಂದೂ ಧಾರ್ಮಿಕ ಕ್ಷೇತ್ರವಾಗಬೇಕು. ಗೋರಿಗಳನ್ನು ಸ್ಥಳಾಂತರ ಮಾಡಬೇಕು. ಸರ್ಕಾರ ಈ ಕೆಲಸ ಮಾಡದಿದ್ದರೆ ಶ್ರೀರಾಮ ಸೇನೆಯಿಂದಲೇ ಮಾಡಲಾಗುವುದು ಎಂದು ಹೇಳಿದ್ದಾರೆ. ಈ ಸ್ಥಳ ಎರಡೂ ಸಮುದಾಯಕ್ಕೆ ಸೇರಿದ್ದು ಎಂದು ಕೋರ್ಟ್‌ ಹೇಳಿದ್ದರೂ ಸಮಾಜದಲ್ಲಿ ಹುಳಿ ಹಿಂಡುವ, ಶಾಂತಿ ಕದಡುವ ಕೆಲಸ ಮಾಡಲಾಗುತ್ತಿದೆ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ಈ ಸಂಬಂಧ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದ್ದು, ಪೊಲೀಸ್ ಠಾಣೆಗೂ ದೂರು ನೀಡಿ ಎಫ್ಐಆರ್ ದಾಖಲಿಸಲಾಗುವುದು’ ಎಂದು ಹೇಳಿದರು.

ಎರಡೂ ಸಮುದಾಯದವರ ಧಾರ್ಮಿಕ ಕಾರ್ಯಕ್ರಮಗಳ ಮೇಲ್ವಿಚಾರಣೆಗೆ ವ್ಯವಸ್ಥಾಪನಾ ಸಮಿತಿ ರಚಿಸಲಾಗಿದೆ. ಇದರಲ್ಲಿ ಎರಡೂ ಸಮುದಾಯದವರಿಗೆ ಸಮಾನ ಅವಕಾಶ ದೊರಕಬೇಕು. ಆದರೆ, ಮುಸ್ಲಿಂ ಸಮುದಾಯದ ಒಬ್ಬರು ಮಾತ್ರ ಇದ್ದಾರೆ. ಈ ಸಮಿತಿಯನ್ನು ರದ್ದುಪಡಿಸಿ ಹೊಸ ಸಮಿತಿ ರಚಿಸಬೇಕು ಎಂದು ಮನವಿ ಮಾಡಿದರು.

ನ್ಯಾಯಾಲಯದ ಆದೇಶ ಉಲ್ಲಂಘಿಸಿ ಹಲವು ಕಾರ್ಯಕ್ರಮಗಳು ನಡೆಯುತ್ತಿವೆ. ಗವಿಯೊಳಗೆ ಒಂದೇ ನಂದಾದೀಪಕ್ಕೆ ಅವಕಾಶ ಇದ್ದರೂ ಹಲವು ನಂದಾದೀಪಗಳನ್ನು ಹಾಕಲಾಗಿದೆ. ದರ್ಗಾದ ಒಳಗೆ ಕುಂಕುಮ ಮತ್ತು ಕರ್ಪೂರ ಹಾಕಲಾಗುತ್ತಿದೆ. ಭಕ್ತಾದಿಗಳ ಹರಕೆ ಹಣ ಹಾಕಲು ಮುಜರಾಯಿ ಇಲಾಖೆಯಿಂದ ಸೀಲ್ ಮಾಡಿದ ಡಬ್ಬಗಳಿದ್ದರೂ, ಅರ್ಚಕರು ಪ್ರತ್ಯೇಕ ತಟ್ಟೆ ಇಟ್ಟು ಹಣವನ್ನು ತಾವೆ ಎತ್ತಿಕೊಳ್ಳುತ್ತಿದ್ದಾರೆ. ಇಲ್ಲಿಗೆ ಬರುವ ಭಕ್ತರಿಗೆ ನಮಾಜ್ ಮಾಡಲು ಅವಕಾಶ ಇಲ್ಲವಾಗಿದೆ. ಭಕ್ತರಿಗೆ ನೀಡುತ್ತಿದ್ದ ನೀರು ಮತ್ತು ಗಂಧ(ಪ್ರಸಾದ) ನಿಲ್ಲಿಸಲಾಗಿದೆ ಎಂದು ವಿವರಿಸಿದರು.

‘ಈ ಎಲ್ಲಾ ನ್ಯೂನತೆಗಳನ್ನು ಸರಿಪಡಿಸಬೇಕು. ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದರೆ ಸಮಿತಿಯಿಂದ ನ್ಯಾಯಾಲಯದ ಮೆಟ್ಟಿಲೇರಲು ನಿರ್ಧರಿಲಾಗಿದೆ’ ಎಂದರು.

ಸಿರಾಜ್ ಹುಸೇನ್ ಅಹಮ್ಮದ್, ನಜೀರ್ ಅಹಮದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT