ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಳೆಹೊನ್ನೂರು: ಕುವೈತ್ ಉದ್ಯಮಿಯಿಂದ ವಾರ್ಡ್‌ ಸ್ವಚ್ಛತೆ

Published 14 ಜೂನ್ 2024, 12:45 IST
Last Updated 14 ಜೂನ್ 2024, 12:45 IST
ಅಕ್ಷರ ಗಾತ್ರ

ಬಾಳೆಹೊನ್ನೂರು: ಕುವೈತ್‍ನಲ್ಲಿ ಉದ್ಯಮಿಯಾಗಿರುವ ಕ್ಲಿಫರ್ಡ್ ಲಾರೆನ್ಸ್ ಸಿಕ್ವೇರಾ ಅವರು ಸ್ವಂತ ವೆಚ್ಚದಲ್ಲಿ ಪಟ್ಟಣದ ಬಿ.ಕಣಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರು ವಾರ್ಡ್‌ಗಳ ವಿವಿಧ ಭಾಗಗಳನ್ನು ಸ್ವಚ್ಛಗೊಳಿಸುವ ಮೂಲಕ ಗಮನ ಸೆಳೆದಿದ್ದಾರೆ.

ಮಲೆಯಾಳಿ ಕಾಲೊನಿ, ಐಟಿಐ ರಸ್ತೆ ಮುಂತಾದ ಕಡೆಗಳಲ್ಲಿ ಚರಂಡಿಗಳಲ್ಲಿ ಮಣ್ಣು, ಕಸ ಕಡ್ಡಿ ತುಂಬಿ ಮಳೆ ಬಂದಾಗ ನೀರು ರಸ್ತೆ ಮೇಲೆ ಹರಿದುಹೋಗುತ್ತಿತ್ತು. ಅಲ್ಲಲ್ಲಿ ಮಳೆನೀರು ನಿಂತು ಸಾಂಕ್ರಾಮಿಕ ರೋಗ ಹರಡುವ ಆತಂಕ ಎದುರಾಗಿತ್ತು. ಇದರೊಂದಿಗೆ ವಾರ್ಡ್‍ನ ಹಲವು ರಸ್ತೆಗಳ ಎರಡೂ ಬದಿಗಳಲ್ಲಿ ಗಿಡಗಂಟಿ ಬೆಳೆದಿತ್ತು. ಈ ಬಗ್ಗೆ ಸ್ಥಳೀಯರು ಗ್ರಾಮ ಪಂಚಾಯಿತಿಗೆ ಹಲವು ಬಾರಿ ಮನವಿ ಮಾಡಿದರೂ  ಸಮಸ್ಯೆ ಪರಿಹಾರ ಆಗಿರಲಿಲ್ಲ.

ಸಮಸ್ಯೆಗಳನ್ನು ಕ್ಲಿಫರ್ಡ್ ಅವರ ಗಮನಕ್ಕೆ ತಂದಾಗ ಜೆಸಿಬಿ ಬಳಿಸಿ ಸ್ವಚ್ಛ ಮಾಡಿಸಿ ಗಿಡಗಂಟಿಗಳನ್ನು ಕಾರ್ಮಿಕರ ಮೂಲಕ  ತೆರವುಗೊಳಿಸಿದ್ದಾರೆ. ಈಗ ಜನರ ಓಡಾಟ ಸುಲಭವಾಗಿದ್ದು  ವಾಹನ ಸಂಚಾರಕ್ಕೂ ಅನುಕೂಲ ಆಗಿದೆ. ಮಳೆನೀರು ಸರಾಗವಾಗಿ ಹರಿಯುತ್ತಿದೆ.

‘ಸ್ಥಳೀಯರು ಸಮಸ್ಯೆಗಳ ಬಗ್ಗೆ ಗಮನ ಸೆಳೆದಿದ್ದರು. ಸ್ವಚ್ಛ ಭಾರತ್ ಪರಿಕಲ್ಪನೆಯಲ್ಲಿ ಸ್ವಚ್ಛತಾ ಕಾರ್ಯ ಮಾಡಿದ್ದೇನೆ. ಈಗ ಹಲವು ವಾರ್ಡ್‌ಗಳಿಂದ ಕರೆ ಬರುತ್ತಿದೆ. ಪಂಚಾಯಿತಿ ಸದಸ್ಯರು ಸಮರ್ಪಕವಾಗಿ ಕಾರ್ಯನಿರ್ವಹಿಸದ ಕಾರಣ ಈ ರೀತಿ ಆಗಿದೆ ಎಂದು ಕುವೈತ್‌ನಿಂದ ಕ್ಲಿಫರ್ಡ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕೋವಿಡ್‌–19ರ ಸಂದರ್ಭದಲ್ಲಿ ದಿನಸಿ, ಆರೋಗ್ಯ ಕಿಟ್ ವಿತರಣೆ, ನೆರೆ ಸಂದರ್ಭದಲ್ಲಿ ಸಂತ್ರಸ್ಥರಿಗೆ ಸಾಮಾಗ್ರಿಗಳ ವಿತರಣೆ, ಕೂಲಿ ಕಾರ್ಮಿಕರ ಚಿಕಿತ್ಸೆಗೆ ಸಹಾಯಹಸ್ತ, ಕ್ರೀಡಾಪಟುಗಳಿಗೆ ಪ್ರೋತ್ಸಾಹ ಸೇರಿದಂತೆ ವಿವಿಧ ಕಾರ್ಯಗಳನ್ನು ಕ್ಲಿಫರ್ಡ್ ಈ ಹಿಂದೆ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT