ಮಂಗಳವಾರ, ಜುಲೈ 5, 2022
21 °C
ಬೆಳಗಾವಿಯ ಉಪಗುತ್ತಿಗೆದಾರ ಬಸವರಾಜ ಆತ್ಮಹತ್ಯೆ

ಸಾಲ ಬಾಧೆಯಿಂದ ಬೆಳಗಾವಿ ಉಪಗುತ್ತಿಗೆದಾರ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು/ಬಾಳೆಹೊನ್ನೂರು: ಪಟ್ಟಣದ ಲಾಡ್ಜ್‌ನಲ್ಲಿ ಉಪ ಗುತ್ತಿಗೆದಾರ ಬಸವರಾಜ ನಿಂಗಪ್ಪ ಮರದಬುಡುಕಿನ (46) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣದ ತನಿಖೆಗೆ ಪೊಲೀಸರು ತಂಡ ರಚಿಸಿದ್ದಾರೆ.

ಬಸವರಾಜ ಅವರು ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಮುನವಳ್ಳಿಯವರು. ಕಾಮಗಾರಿಗಳ ಉಪ ಗುತ್ತಿಗೆ ಪಡೆದು, ಸಾಲ ಮಾಡಿ ನಿರ್ವಹಿಸಿದ್ದರು. ಅವರಿಗೆ ಬೆಂಗಳೂರಿನ ಐಶ್ವರ್ಯಗಿರಿ ಕನ್‌ಸ್ಟ್ರಕ್ಷನ್‌ ಪ್ರೈವೆಟ್‌ ಲಿಮಿಟೆಡ್‌ನ ಮಾಲಿಕ, ಗುತ್ತಿಗೆದಾರ ಜಯರಾಮ ಅವರು ₹1.20 ಕೋಟಿ ಬಾಕಿ ಕೊಡಬೇಕಿತ್ತು. ಬಾಕಿ ಕೊಡದೆ ಸತಾಯಿಸಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬಸವರಾಜ ಅವರ ಮಾವ ಈರಣ್ಣ ಕರಡಿಕೊಪ್ಪ ಬಾಳೆಹೊನ್ನೂರು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಬಾಳೆಹೊನ್ನೂರಿನ ಲಾಡ್ಜ್‌ನಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಬುಧವಾರ ಶವ ಪತ್ತೆಯಾಗಿದ್ದು, ಗುರುವಾರ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ಬಸವರಾಜ ಆರು ತಿಂಗಳಿನಿಂದ ಬಾಳೆಹೊನ್ನೂರು ಭಾಗದಲ್ಲಿ ಜಲ ಜೀವನ್‌ ಮಿಷನ್‌ ಕಾಮಗಾರಿ ನಿರ್ವಹಿಸುತ್ತಿದ್ದರು.

ದೂರಿನ ಸಾರಾಂಶ: ‘ಅಳಿಯ ಬಸವರಾಜ ಅವರು ಜಯರಾಮ ಅವರಿಂದ ಕಾಮಗಾರಿ ಉಪಗುತ್ತಿಗೆ ಪಡೆದು ಕೆಲಸ ಮಾಡಿಸುತ್ತಿದ್ದರು. ವಿವಿಧೆಡೆ ₹7.5 ಕೋಟಿ ಸಾಲ ಮಾಡಿ ಕಾಮಗಾರಿ ನಿರ್ವಹಿಸಿದ್ದರು. ಜಯರಾಮ ಅವರು ಎರಡು ಚೆಕ್‌ ನೀಡಿದ್ದರು. ಆದರೆ, ಜಯರಾಮ ಅವರಿಗೆ ಕಾಮಗಾರಿ ಬಿಲ್‌ ಸರ್ಕಾರದಿಂದ ಪಾವತಿಯಾಗಿದ್ದರೂ, ಕಾಮಗಾರಿ ಬಾಬ್ತು ಬಾಕಿ ಕೊಟ್ಟಿರಲಿಲ್ಲ’ ಎಂದು ಈರಣ್ಣ ಕರಡಿಕೊಪ್ಪ ದೂರಿನಲ್ಲಿ ತಿಳಿಸಿದ್ದಾರೆ. 

‘ಜಯರಾಮ ಅವರು ಹಣ ಕೊಟ್ಟಿಲ್ಲ, ಫೋನ್‌ ಮಾಡಿದರೂ ಕರೆ ಸ್ವೀಕರಿಸಲ್ಲ. ಸಾಯುವುದು ಬಿಟ್ಟು ವಿಧಿ ಇಲ್ಲ’ ಎಂದು ಬಸವರಾಜ ಅವರು ಏ.26ರಂದು ರಾತ್ರಿ 10 ಗಂಟೆ ಸಮಯದಲ್ಲಿ ಫೋನ್‌ನಲ್ಲಿ ಬೇಸರದಿಂದ ಮಾತಾಡಿದ್ದರೆಂದು ನನ್ನ ಪುತ್ರಿ ರತ್ನಾ ತಿಳಿಸಿದ್ದಳು’ ಎಂದು ಉಲ್ಲೇಖಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು