ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪೆಕ್ಸ್ ಬ್ಯಾಂಕನ್ನು‌ ಪ್ರಗತಿಪಥದಲ್ಲಿ ಒಯ್ಯಲು ಶ್ರಮಿಸುವೆ: ಬೆಳ್ಳಿ ಪ್ರಕಾಶ್‌

‘ಅಪೆಕ್ಸ್‌’ ಬ್ಯಾಂಕ್‌ ಅಧ್ಯಕ್ಷರಾಗಿ ಬೆಳ್ಳಿ ಪ್ರಕಾಶ್‌ ಆಯ್ಕೆ
Last Updated 5 ಜನವರಿ 2021, 15:20 IST
ಅಕ್ಷರ ಗಾತ್ರ

ಚಿಕ್ಕಮಗಳೂರು/ ಕಡೂರು: ರಾಜ್ಯ ‘ಅಪೆಕ್ಸ್‌’ ಬ್ಯಾಂಕ್‌ ಅಧ್ಯಕ್ಷರಾಗಿ ಶಾಸಕ ಬೆಳ್ಳಿ ಪ್ರಕಾಶ್‌ ಅವರು ಮಂಗಳವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬೆಳ್ಳಿ ಪ್ರಕಾಶ್‌ ಅವರು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ (ಡಿಸಿಸಿ) ಬ್ಯಾಂಕ್‌ ಆಡಳಿತ ಮಂಡಳಿಗೆ ಈಚೆಗೆ ಚುನಾವಣೆ ನಡೆದಿತ್ತು. ಬ್ಯಾಂಕ್‌ ಆಡಳಿತ ಚುಕ್ಕಾಣಿ ಜೆಡಿಎಸ್‌ ಬೆಂಲಿತರ ತೆಕ್ಕೆಯಿಂದ ಬಿಜೆಪಿ ಬೆಂಬಲಿತರ ಮಡಿಲಿಗೆ ಬಿದ್ದಿತ್ತು.

ನಿರ್ದೇಶಕರಾಗಿ ಆಯ್ಕೆಯಾಗಿದ್ದ ಬೆಳ್ಳಿಪ್ರಕಾಶ್‌ ಅವರು ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು, ಕಾರಣಾಂತರಗಳಿಂದ ಅದು ಕೈತಪ್ಪಿತ್ತು. ಅವರದೇ ಸಮುದಾಯದ (ಲಿಂಗಾಯತ) ತರೀಕೆರೆ ಕ್ಷೇತ್ರದ ಶಾಸಕ ಡಿ.ಎಸ್‌.ಸುರೇಶ್‌ ಅವರಿಗೆ ಒಲಿದಿತ್ತು.

ಬೆಳ್ಳಿ ಪ್ರಕಾಶ್‌ ಅವರನ್ನು ರಾಜ್ಯ ಅಪೆಕ್ಸ್‌ ಬ್ಯಾಂಕ್‌ ನಿರ್ದೇಶಕರಾಗಿ ಆಗ ಆಯ್ಕೆ ಮಾಡಲಾಗಿತ್ತು. ಈಗ ಅಧ್ಯಕ್ಷ ಗಾದಿಗೆ ಏರಿದ್ದಾರೆ.

ನಡೆದು ಬಂದ ಹಾದಿ: ಬೆಳ್ಳಿ ಪ್ರಕಾಶ್‌ ಅವರು ಕಡೂರು ತಾಲ್ಲೂಕಿನ ಸಿಂಗಟಗೆರೆ ಹೋಬಳಿಯ ಕುಂದೂರು ಗ್ರಾಮದ ಶ್ರೀಕಂಠಪ್ಪ ಮತ್ತು ಗೌರಮ್ಮ ದಂಪತಿ ಪುತ್ರ. ಬಿ.ಇ, ಎಲ್‌ಎಲ್‌ಬಿ ವ್ಯಾಸಂಗ ಮಾಡಿದ್ದಾರೆ.

ವಕೀಲರಾಗಿ ಕೆಲದಿನ ಕಾರ್ಯನಿರ್ವಹಿಸಿ ರಾಜಕೀಯಕ್ಕೆ ಪದಾರ್ಪಣೆ ಮಾಡಿದರು.ಕಾಂಗ್ರೆಸ್‌ನಿಂದ ಯಾನ ಆರಂಭಿಸಿ ಜೆಡಿಎಸ್‌, ಬಿಜೆಪಿ, ಕೆಜೆಪಿ ಸೇರಿ ಹಾಲಿ ಬಿಜೆಪಿಯಲ್ಲಿ ಪಯಣ ಮುಂದುವರಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಸದಸ್ಯ, ಅಧ್ಯಕ್ಷ, ಕುಂದೂರು ಹಾಲು ಘಟಕದ ಅಧ್ಯಕ್ಷ, ಸಿಂಗಟಗೆರೆ ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಅವಿರೋಧ ಆಯ್ಕೆಗೆ ಸಂತಸ

ಬೆಳ್ಳಿ ಪ್ರಕಾಶ್ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಅವಿರೋಧವಾಗಿ ಆಯ್ಕೆಯಾಗಿರುವುದು ಸಂತೋಷ ತಂದಿದೆ. ಸರ್ವರ ಸಹಕಾರದೊಂದಿಗೆ ಬ್ಯಾಂಕ್‌ ಅನ್ನು ಪ್ರಗತಿ ಪಥದಲ್ಲಿ ಒಯ್ಯಲು ಶ್ರಮಿಸುತ್ತೇನೆ. ಸಹಕಾರಿ ಕ್ಷೇತ್ರದ ಸಮಗ್ರ ಚಿಂತನೆ ಅಳವಡಿಸಿಕೊಂಡು ಮುನ್ನಡೆಸುತ್ತೇನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT