ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರಿನಲ್ಲಿ ಕೇಂದ್ರ ಬಜೆಟ್‌‌ಗೆ ಮಿಶ್ರ ಪ್ರತಿಕ್ರಿಯೆ

ಅತಿವೃಷ್ಟಿ: ಕಾಫಿನಾಡಿಗೆ ‘ವಿಶೇಷ ಪ್ಯಾಕೇಜ್’ ನಿರೀಕ್ಷೆ ಹುಸಿ
Last Updated 1 ಫೆಬ್ರುವರಿ 2020, 14:37 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಕೇಂದ್ರ ಬಜೆಟ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದಾಯ ತೆರಿಗೆ ಇಳಿಕೆ ಮಾಡಿರುವುದು ಸಹಿತ ಕೆಲ ಅಂಶಗಳು ಖುಷಿ ವ್ಯಕ್ತವಾಗಿದೆ, ಅತಿವೃಷ್ಟಿಯಿಂದ ನುಲುಗಿರುವ ಕಾಫಿನಾಡಿಗೆ ‘ವಿಶೇಷ ಪ್ಯಾಕೇಜ್’ ಘೋಷಿಸದಿರುವುದು ಬೆಳೆಗಾರರಿಗೆ ಬೇಸರ ಮೂಡಿಸಿದೆ.

ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್‌ ಅವರು ಶನಿವಾರ ಮಂಡಿಸಿದ ಬಜೆಟ್‌ನಲ್ಲಿ ಜಿಲ್ಲೆಯ ಜನರ ಕೆಲ ನಿರೀಕ್ಷೆಗಳು ಈಡೇರಿದ್ದರೆ ಮತ್ತೆ ಕೆಲವು ನಿರೀಕ್ಷೆಯಾಗಿಯೇ ಉಳಿದಿವೆ.ಸಿಬಿಲ್‌ ರದ್ದು, ಕಾಫಿ ಬೆಳೆಗಾರರ ಸಾಲ, ಬಡ್ಡಿ ಮನ್ನಾ, ಹೊಸ ಸಾಲ ಸೌಲಭ್ಯಕ್ಕೆ ವ್ಯವಸ್ಥೆ, ಜಿಲ್ಲೆಯಲ್ಲಿ ಸ್ಪೈಸ್‌ ಪಾರ್ಕ್‌ ಸ್ಥಾಪನೆ, ಕಾಫಿ ಸಂಶೋಧನಾ ಸಂಸ್ಥೆಗೆ ಹೊಸ ಸ್ಪರ್ಶ, ಬೆಂಗಳೂರು– ಚಿಕ್ಕಮಗಳೂರು ಎಕ್ಸ್‌ಪ್ರೆಸ್‌ ರೈಲು ಮೊದಲಾದ ನಿರೀಕ್ಷೆಗಳು ಜನರಲ್ಲಿದ್ದವು.

‘ಸಿಬಿಲ್‌ ರದ್ದು ಪಡಿಸಬೇಕು. ವಾರ್ಷಿಕ ಶೇ 3 ಬಡ್ಡಿದರದಲ್ಲಿ ಹೊಸ ಸಾಲ ನೀಡಬೇಕು. ಅತಿವೃಷ್ಟಿಯಿಂದ ತೋಟಗಳು ಹಾಳಾಗಿ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ, ಸಮಗ್ರ ವಿಶೇಷ ಪ್ಯಾಕೇಜ್‌ ಘೋಷಿಸಬೇಕು ಎಂದು ಮನವಿ ಮಾಡಿದ್ದೆವು. ಮನವಿಗೆ ಸ್ಪಂದಿಸಿಲ್ಲ’ ಎಂದು ಕರ್ನಾಟಕ ಬೆಳೆಗಾರರು ಒಕ್ಕೂಟದ ಅಧ್ಯಕ್ಷ ಯು.ಎಂ.ತೀರ್ಥಮಲ್ಲೇಶ್‌ ಬೇಸರ ವ್ಯಕ್ತಪಡಿಸಿದರು.

‘ಚಿಕ್ಕಮಗಳೂರು– ಬೆಂಗಳೂರು ಎಕ್ಸ್‌ಪ್ರೆಸ್‌ ರೈಲಿಗೆ ಪ್ರಸ್ತಾವ ಸಲ್ಲಿಸಿದ್ದೆವು. ಹಲವು ವರ್ಷಗಳಿಂದ ಕೇಳಿದರೂ ಸ್ಪಂದಿಸುತ್ತಿಲ್ಲ’ ಎಂದು ರೈಲ್ವೆ ಬಳಕೆದಾರರ ಸಂಘದ ಸದಸ್ಯ ಕೆ.ವಿನಯ್‌ ಹೇಳಿದರು.

‘ಕೃಷಿ ವಿಮಾನ, ಕೃಷಿ ರೈಲು, ಕಿಸಾನ್‌ ಕ್ರೆಡಿಟ್‌ ಕಾರ್ಡ್, ಧಾನ್ಯಲಕ್ಷ್ಮಿ ಮೊದಲಾದವನ್ನು ಘೋಷಿಸಿ ಕೃಷಿಗೆ ಪ್ರಾಧಾನ್ಯ ನೀಡಲಾಗಿದೆ. ಹೊಸ ಶಿಕ್ಷಣ ನೀತಿ, ಕೌಶಲ ತರಬೇತಿಗೆ ಗಮನಹರಿಸಲಾಗಿದೆ. ಒಂದು ಲಕ್ಷ ಗ್ರಾಮ ಪಂಚಾಯಿತಿ ಇಂಟರ್‌ನೆಟ್‌ ಸೌಲಭ್ಯ, ಅಂಗನವಾಡಿಯವರಿಗೆ ಸ್ಮಾರ್ಟ್‌ಫೋನ್‌ ನೀಡುವುದಾಗಿ ಘೋಷಿಸಲಾಗಿದೆ. ಇದು ಜನಸ್ನೇಹಿ ಬಜೆಟ್‌’ ಎಂದು ಬಿಜೆಪಿ ಮುಖಂಡ ದೀಪಕ್‌ ದೊಡ್ಡಯ್ಯ ಹೇಳಿದ್ದಾರೆ.

‘ರೈತರ ಸಾಲಮನ್ನಾ ನೀರಿಕ್ಷೆ ಹುಸಿಯಾಗಿದೆ. ಉದ್ಯೋಗ ಸೃಷ್ಟಿಗೆ ಯೋಜನೆ ಘೋಷಣೆ ಮಾಡಿಲ್ಲ. ಗೃಹ ನಿರ್ಮಾಣ ಸಹಿತ ನಿತ್ಯ ಬಳಕೆ ಗೃಹೋಪಯೋಗಿ ವಸ್ತುಗಳ ಬೆಲೆ ಏರಿಕೆ ಮಾಡಿದ್ದು ಜನಸಾಮಾನ್ಯರಿಗೆ ಬರೆ ಎಳೆದಂತಾಗಿದೆ. ಇದು ನಿರಾಶಾದಾಯಕ ಬಜೆಟ್’ ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಹೊಲದಗದ್ದೆ ಗಿರೀಶ್ ಹೇಳಿದ್ದಾರೆ.

ರೈತರ ಬೆಳೆಗಳಿಗೆ ಬೆಲೆ ನಿಗದಿ ಬಗ್ಗೆಯೂ ಪ್ರಸ್ತಾಪ ಇಲ್ಲ. ಏರ್ ಇಂಡಿಯಾ ಮಾರಾಟ ಮಾಡಲು ಹೊರಟಿರುವ ಸರ್ಕಾರ ನೂರು ವಿಮಾನ ನಿಲ್ದಾಣ ನಿರ್ಮಾಣದ ಘೋಷಿಸಿದರುವುದು ಹಾಸ್ಯಾಸ್ಪದ. ಇದು ದೂರದೃಷ್ಟಿ ಇಲ್ಲದ ಬಜೆಟ್‌ ಎಂದು ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್ ಹೇಳಿದ್ದಾರೆ.

‘ರೈತರಿಗೆ 16 ಅಂಶಗಳ ಕಾರ್ಯಕ್ರಮ ಘೋಷಣೆ ಮಾಡಲಾಗಿದೆ. ರೈತರಿಗೆ ನೀರು, ಕಡಿಮೆ ದರದಲ್ಲಿ ಬಿತ್ತನೆ ಬೀಜ, ಗೊಬ್ಬರ ಲಭ್ಯತೆ, ಬೆಳೆಗಳಿಗೆ ಉತ್ತಮ ಬೆಲೆ ಪ್ರಮುಖವಾಗಿ ಬೇಕು. ಆದರೆ, ಈ ಕಾರ್ಯಕ್ರಮದಲ್ಲಿ ಅವು ಇಲ್ಲ, ಘೋಷಣೆಗೆ ಸೀಮಿತವಾಗಲಿದೆ. ಆದಾಯ ತೆರಿಗೆ ಕಡಿಮೆ ಮಾಡಿರುವುದು ಸ್ವಾಗತಾರ್ಹ. ಉಕ್ಕು, ಕಬ್ಬಿಣ ಉಪಕರಣಗಳ ಬೆಲೆ ಜಾಸ್ತಿ ಮಾಡಿರುವುದು ಜನಸಾಮಾನ್ಯರಿಗೆ ಬರೆ’ ಎಂದು ಮಾಜಿ ಸಚಿವೆ ಡಿ.ಕೆ.ತಾರಾದೇವಿ ಸಿದ್ದಾರ್ಥ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT