ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ಕಸದ ತೊಟ್ಟಿಗಳಾದ ನಿವೇಶನಗಳು

ಚಿಕ್ಕಮಗಳೂರು ನಗರದಲ್ಲಿ ವಿವಿಧೆಡೆ 8 ಸಾವಿರ ನಿವೇಶನ
Last Updated 3 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ನಿವೇಶನಗಳಲ್ಲಿ ತ್ಯಾಜ್ಯ ಎಸೆಯುವ ಪರಿಪಾಟ ಸಮಸ್ಯೆಯಾಗಿ ಪರಿಣಮಿಸಿದೆ. ಬಹಳಷ್ಟು ನಿವೇಶನಗಳು ಕಳೆ ಸಸ್ಯಗಳು, ಪ್ಲಾಸ್ಟಿಕ್‌, ತ್ಯಾಜ್ಯಮಯವಾಗಿವೆ.

ಹಳೆಯ ಟೈರುಗಳು, ಹರಿದ ಬಟ್ಟೆಗಳು, ಚಪ್ಪಲಿಗಳು, ಪ್ಲಾಸ್ಟಿಕ್ ವಸ್ತುಗಳು, ಬಲ್ಬ್‌ಗಳು, ಗಾಜು, ಮದ್ಯ, ನೀರಿನ ಖಾಲಿ ಬಾಟಲಿಗಳು, ಪ್ಲಾಸ್ಟಿಕ್‌ ಪೊಟ್ಟಣಗಳು, ಮೊಟ್ಟೆ, ಮಾಂಸ ತ್ಯಾಜ್ಯ, ಕೊಳೆತ ಹಣ್ಣು–ತರಕಾರಿ, ಬೆಕ್ಕು, ಹೆಗ್ಗಣಗಳ ಕಳೇಬರಗಳು, ಹಳೆಯ ಕಟ್ಟಡ ಅವಶೇಷಗಳು ಮೊದಲಾದವನ್ನು ಹಲವರು ನಿವೇಶನಗಳಿಗೆ ಸುರಿಯುತ್ತಾರೆ. ಇದು ನಿವೇಶನಗಳ ನೆರೆಹೊರೆಯ ಮನೆಗಳವರಿಗೆ ಕಿರಿಕಿರಿಯಾಗಿದೆ.

ನಗರದಲ್ಲಿ 35 ವಾರ್ಡ್‌ಗಳಿದ್ದು, ಹಲವಾರು ಬಡಾವಣೆಗಳು ಇವೆ. ಈ ಬಡಾವಣೆಗಳಲ್ಲಿನ ಬಹುತೇಕ ನಿವೇಶನಗಳು ಕಸದ ತಿಪ್ಪೆಗಳಾಗಿ ಮಾರ್ಪಟ್ಟಿವೆ.

ಬಡಾವಣೆಗಳು ನಿರ್ಮಾಣವಾದಾಗ ನಿವೇಶನ ಖರೀದಿಸಿದ ಅನೇಕರು ಇನ್ನು ಕಟ್ಟಡಗಳನ್ನು ನಿರ್ಮಿಸಿಲ್ಲ. ನಿವೇಶನಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ನಗರಸಭೆ ನೀಡಿದ ಸೂಚನೆ ಪಾಲಿಸಲು ಆಸಕ್ತಿ ತೋರುವವರು ವಿರಳ. ಕೆಲ ನಿವೇಶನ ಮಾಲೀಕರು ಹಲವರು ಹೊರ ಊರುಗಳಲ್ಲಿ ನೆಲೆಸಿದ್ದಾರೆ. ಯಾವಾಗಲೋ ಒಮ್ಮೆ ನಿವೇಶನ ಜಾಗಕ್ಕೆ ಭೇಟಿ ನೀಡುತ್ತಾರೆ, ನಿವೇಶನದ ಸ್ವಚ್ಛತೆಗೆ ಗಮನ ನೀಡುವುದು ಕಡಿಮೆ.

ಬಿಡಾಡಿಗಳ ಹಾವಳಿ: ಹಲವು ನಿವೇಶನಗಳಲ್ಲಿ ಗಿಡಗಂಟಿಗಳು ಆಳೆತ್ತರಕ್ಕೆ ಬೆಳೆದಿವೆ. ಹಂದಿಗಳು, ನಾಯಿಗಳು, ಕೋಳಿಗಳು, ರಾಸುಗಳು ನಿವೇಶನಗಳಲ್ಲಿನ ಕಸದ ಗುಡ್ಡೆಗಳನ್ನು ಎಳೆದಾಡುತ್ತವೆ.

ಬಿಡಾಡಿಗಳು ಕಸವನ್ನು ಎಳೆದಾಡಿ ರಾಡಿ ಮಾಡುತ್ತವೆ. ದುರ್ನಾತದ ನಡುವೆ ಸುತ್ತಲಿನವರು ಬದುಕು ಸವೆಸಬೇಕಾಗಿದೆ. ಕೆಲವು ಕಡೆ ಹಂದಿಗಳು ಮತ್ತು ನಾಯಿಗಳು ಅರಚಾಡಿ ರಾತ್ರಿ ವೇಳೆ ಜನರ ನಿದ್ದೆ ಕೆಡಿಸುತ್ತವೆ.
ನಿವೇಶನಗಳ ಪೊದೆಗಳಲ್ಲಿ ಹಾವು, ಚೇಳು, ಸೊಳ್ಳೆ, ಹುಳುಹುಪ್ಪಟೆ, ವಿಷಜಂತುಗಳು ಇವೆ. ಸುತ್ತಲಿನ ಮನೆಗಳಿಗೂ ಒಮ್ಮೊಮ್ಮೆ ಹರಿದುಬರುತ್ತವೆ. ಹೀಗಾಗಿ, ಸುತ್ತಲಿನ ನಿವಾಸಿಗಳು ಆತಂಕದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ.

ಚರಂಡಿ ಸೇರುವ ತ್ಯಾಜ್ಯ: ಮಲ್ಲಂದೂರು ರಸ್ತೆ, ಬಸವನಹಳ್ಳಿ ಮುಖ್ಯ ರಸ್ತೆ, ರಾಮನಹಳ್ಳಿ, ಗೌರಿ ಕಾಲುವೆ, ವಿಜಯಪುರ ಬಡಾವಣೆ, ಟಿಪ್ಪು ನಗರ ಸಹಿತ ವಿವಿಧೆಡೆಗಳಲ್ಲಿ ನಿವೇಶನಗಳಲ್ಲಿ ಎಸೆಯುವ ತ್ಯಾಜ್ಯವು ಮೋರಿ, ಚರಂಡಿ ಸೇರುತ್ತಿದೆ. ಪ್ಲಾಸ್ಟಿಕ್‌, ಗಾಜು, ಮೊದಲಾದವು ಕಟ್ಟಿಕೊಂಡು ಹಲವೆಡೆ ಮೋರಿ ನೀರು ರಸ್ತೆಯಲ್ಲಿ ಹರಿಯುತ್ತದೆ.

ಮಳೆ ರಭಸವಾಗಿ ಸುರಿದಾಗ ಮಲ್ಲಂದೂರು ರಸ್ತೆ, ವಿಜಯಪುರ ಮೊದಲಾದ ಕಡೆಗಳಲ್ಲಿ ಚರಂಡಿ ಕೊಳಚೆ ನೀರು ರಸ್ತೆಯಲ್ಲಿ ಹರಿಯುವುದು ಮಾಮೂಲಿಯಾಗಿದೆ. ದುರ್ನಾತ, ಕೊಳಚೆಯಿಂದಾಗಿ ರೋಗರುಜಿನಗಳು ಹರಡುವ
ಸಾಧ್ಯತೆ ಇದೆ.

‘ರಾತ್ರಿ ಹೊತ್ತಿನಲ್ಲಿ ಕಸವನ್ನು ನಿವೇಶನಕ್ಕೆ ಎಸೆಯುತ್ತಾರೆ. ಮದ್ಯದ ಖಾಲಿ ಬಾಟಲಿ, ಉಂಡು ಮಿಕ್ಕ ಆಹಾರ ಮೊದಲಾದವನ್ನು ಪ್ಲಾಸ್ಟಿಕ್‌ ಕವರ್‌ನಲ್ಲಿ ಕಟ್ಟಿ ನಿವೇಶನದೊಳಕ್ಕೆ ಎಸೆಯುತ್ತಾರೆ. ನಿವೇಶನದಲ್ಲಿ ಕಸದ ಸಮಸ್ಯೆ ನಮಗೆ ನಿತ್ಯ ನರಕದ ಅನುಭವವಾಗಿದೆ’ ಎಂದು ಬಸವನಹಳ್ಳಿ ಮುಖ್ಯರಸ್ತೆ ನಿವಾಸಿ ಮೋಹನ್‌ರಾಜ್‌ ಅಳಲು ತೋಡಿಕೊಂಡರು.

ನಗರದ ಎಲ್ಲ ಬಡಾವಣೆಗಳಲ್ಲಿ ಸ್ವಚ್ಛವಾಹಿನಿ ವಾಹನಗಳು ಕಸ ಸಂಗ್ರಹಣೆ ಮಾಡುತ್ತವೆ. ಮನೆ ಬಾಗಿಲಿಗೆ ತೆರಳಿ ಕಸ ಸಂಗ್ರಹಕ್ಕೆ ನಗರಸಭೆ ವ್ಯವಸ್ಥೆ ಮಾಡಿದೆ. ನಿವೇಶನಗಳಲ್ಲಿ ಕಸ ಎಸೆಯದಂತೆ ನಗರಸಭೆ ಸೂಚನೆ ನೀಡಿದೆ.
ಆದರೆ, ಹಲವರು ತಮ್ಮ ‘ಚಾಳಿ’ ಬಿಟ್ಟಿಲ್ಲ. ನಿವೇಶನಗಳಲ್ಲಿ ಬಿಸಾಕಿದ ಕಸವನ್ನು ಯಾರೂ ವಿಲೇವಾರಿ ಮಾಡಲ್ಲ.

ಮೋಜುಮಸ್ತಿ ತಾಣಗಳು: ನಗರದ ಹೊರವಲಯದ ನಿವೇಶನಗಳಲ್ಲಿ ಪುಂಡರು ಮೋಜುಮಸ್ತಿಗಳು ನಡೆಸುವ ಪರಿಪಾಟವೂ ಇದೆ. ಇಳಿಸಂಜೆಯಲ್ಲಿ ಪುಂಡರು ಗುಂಪಾಗಿ ನಿವೇಶನ, ವಾಹನದಲ್ಲಿ ಕುಳಿತು ಮದ್ಯಪಾನ ‘ಗೋಷ್ಠಿ’ ಮಾಡುತ್ತಾರೆ. ಪಡ್ಡೆ ಹುಡುಗರು ಗಾಂಜಾ, ಮಾದಕ ಪದಾರ್ಥಗಳನ್ನು ಸೇವಿಸಿ ನಶೆಯಲ್ಲಿ ತೇಲಲು ಹೊರವಲಯದ ನಿವೇಶನಗಳೇ ಅಡ್ಡೆಗಳು.

ಖಾಲಿ ಬಾಟಲಿಗಳು, ಸಿಗರೇಟ್‌ ಖಾಲಿ ಪೊಟ್ಟಣ, ಪ್ಲಾಸ್ಟಿಕ್‌ ಲೋಟ, ತಟ್ಟೆ ಮೊದಲಾದವನ್ನು ನಿವೇಶನದಲ್ಲಿ ಬಿಸಾಕುತ್ತಾರೆ. ನಿವೇಶನಗಳಲ್ಲಿ ತ್ಯಾಜ್ಯಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತವೆ.

‘ನಿವೇಶನಗಳ ಶುಚಿ ನಿಟ್ಟಿನಲ್ಲಿ ನಗರಸಭೆಯವರು ಆದ್ಯ ಕಟ್ಟುನಿಟ್ಟಾಗಿ ಗಮನಹರಿಸಬೇಕು. ನಿವೇಶನ ಸ್ವಚ್ಛವಾಗಿಟ್ಟುಕೊಳ್ಳದ ಮಾಲೀಕರ ವಿರುದ್ಧ ಕ್ರಮ ಜರುಗಿಸಬೇಕು, ದಂಡ ವಿಧಿಸಬೇಕು. ಸರ್ಕಾರಿ ಒಡೆತನದ ಜಾಗಗಳನ್ನು ಸ್ವಚ್ಛವಾಗಿಡುವುದು ನಗರಸಭೆಯ ಜವಾಬ್ದಾರಿ’ ಎನ್ನುತ್ತಾರೆ ವಿಜಯಪುರ ನಿವಾಸಿ, ವರ್ತಕ ರಾಮಣ್ಣ.

‘ದಂಡ– ಎಚ್ಚರಿಕೆ’

ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳದ ಮಾಲೀಕರಿಗೆ ದಂಡ ವಿಧಿಸಲಾಗುವುದು ಎಂದು ನಗರಸಭೆ ಆಯುಕ್ತ ಬಿ.ಸಿ.ಬಸವರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಿವೇಶನ ಸ್ವಚ್ಛವಾಗಿಟ್ಟುಕೊಳ್ಳದ ಹಲವರಿಗೆ ಈ ಹಿಂದೆ ದಂಡ ವಿಧಿಸಿದ್ದೆವು. ದಂಡ ಪ್ರಯೋಗವನ್ನು ಮತ್ತೆ ಆರಂಭಿಸುತ್ತೇವೆ’ ಎಂದರು.

‘ನಗರ ವ್ಯಾಪ್ತಿಯಲ್ಲಿ ಸುಮಾರು 24 ಸಾವಿರ ಮನೆಗಳು ಇವೆ. ಎಂಟು ಸಾವಿರ ನಿವೇಶನಗಳು ಇವೆ. ನಗರಸಭೆಯಿಂದಲೇ ನಿವೇಶನ ಸ್ವಚ್ಛ ಮಾಡಿಸಿ ಮಾಲೀಕರಿಗೆ ದಂಡ ವಸೂಲಿ ಮಾಡುತ್ತೇವೆ’ ಎಂದರು.

‘ತ್ಯಾಜ್ಯವನ್ನು ಕಡ್ಡಾಯವಾಗಿ ಕಸದ ಗಾಡಿಗೆ ನೀಡಬೇಕು ಎಂದು ಜನರಿಗೆ ಅರಿವು ಮೂಡಿಸುತ್ತಿದ್ದೇವೆ. ಕಸವನ್ನು ನಿವೇಶನದೊಳಕ್ಕೆ ಎಸೆಯಬಾರದು ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕು. ನಗರವನ್ನು ಸ್ವಚ್ಛವಾಗಿಡಲು ನಗರಸಭೆಯೊಂದಿಗೆ ಕೈಜೋಡಿಸಬೇಕು’ ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT