ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತಂಬಾಕು ವಿರುದ್ಧ ಗುಲಾಬಿ ಅಭಿಯಾನ

ಜಾಥಾಕ್ಕೆ ಸಿವಿಲ್ ನ್ಯಾಯಾಧೀಶ ಎ.ಎಸ್‌.ಸೋಮ ಚಾಲನೆ
Published 7 ಫೆಬ್ರುವರಿ 2024, 14:53 IST
Last Updated 7 ಫೆಬ್ರುವರಿ 2024, 14:53 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಸದೃಢ ದೇಶ ಕಟ್ಟುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ. ಆದರೆ, ತಂಬಾಕು ಸೇವನೆ ದುಶ್ಚಟಗಳಿಗೆ ಯುವ ಜನತೆ ಬಲಿಯಾಗುತ್ತಿದ್ದಾರೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಎಸ್‌.ಸೋಮ ಬೇಸರ ವ್ಯಕ್ತಪಡಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ಬುಧವಾರ ಆಯೋಜಿಸಿದ್ದ ಗುಲಾಬಿ ಅಭಿಯಾನ ಜಾಥಾಗೆ ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ಶಾಲಾ–ಕಾಲೇಜು, ಶಿಕ್ಷಣ ಸಂಸ್ಥೆಗಳ ಬಳಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡದಂತೆ ಜಾಗೃತಿ ಮೂಡಿಸಬೇಕಿದೆ. ದೇಶದ ಅಭಿವೃದ್ಧಿ ಜತೆಗೆ ಸದೃಢ ದೇಶ ಕಟ್ಟುವಲ್ಲಿ ಯುವಜನತೆ ಪಾತ್ರ ಮಹತ್ವದ್ದಾಗಿದೆ ಎಂದರು.

ಪ್ರತಿ ಅಂಗಡಿ, ಮಳಿಗೆ ಬಳಿ ತೆರಳಿ ಕೆಂಪು ಗುಲಾಬಿ ನೀಡುವ ಮೂಲಕ ಸಾರ್ವಜನಿಕರಲ್ಲಿ ತಂಬಾಕು ಮಾರಾಟ ಮಾಡದಂತೆ ಜಾಗೃತಿ ಮೂಡಿಸಲು ಈ ಆಂದೋಲನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾತನಾಡಿ, ‘ಶಾಲಾ–ಕಾಲೇಜು ಶಿಕ್ಷಣ ಸಂಸ್ಥೆಗಳ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮಾಡುವುದು ಅಪರಾಧ. ಇದರ ತಡೆಗೆ ಜಾಗೃತಿ ಅಗತ್ಯವಿದೆ. ತಂಬಾಕು ಉತ್ಪನ್ನಗಳನ್ನು ಮಕ್ಕಳಿಗೆ ಮಾರಾಟ ಮಾಡದಂತೆ ಕೆಂಪು ಗುಲಾಬಿ ನೀಡಿ ಅರಿವು ಮೂಡಿಸಿ ಉತ್ತಮ ಸಂದೇಶ ನೀಡಲಾಗುತ್ತಿದೆ’ ಎಂದರು.

ಜಗತ್ತಿನಲ್ಲಿ ಶ್ವಾಸಕೋಶ ಕ್ಯಾನ್ಸರ್ ಸಂಬಂಧಿತ ಕಾಯಿಲೆ ಪ್ರಕರಣಗಳಿಗೆ ಧೂಮಪಾನ. ತಂಬಾಕು ಸೇವನೆಯೇ ಮುಖ್ಯ ಕಾರಣ. ಇದರ ತಡೆಗೆ ಎಲ್ಲರೂ ಕೈಜೋಡಿಸಬೇಕು.
–ಬಿ.ಗೋಪಾಲಕೃಷ್ಣ, ಜಿಲ್ಲಾ ಪಂಚಾಯಿತಿ ಸಿಇಒ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವತ್ಥಬಾಬು ಮಾತನಾಡಿ, ‘ತಂಬಾಕು ಸೇವನೆಯಿಂದ ಆಗುವ ದುಷ್ಪಾರಿಣಾಮಗಳ ಕುರಿತು ಆರೋಗ್ಯ ಇಲಾಖೆಯಿಂದ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗಿದೆ. ಮಕ್ಕಳಿಗೆ ಬೀಡಿ, ಸಿಗರೇಟು, ತಂಬಾಕು ಸಂಬಂಧಿತ ಉತ್ಪನ್ನ ಮಾರಾಟ ಮಾಡುವಂತಿಲ್ಲ. ತಂಬಾಕು ನಿಯಂತ್ರಣ ಕೋಶದ ಅಧಿಕಾರಿಗಳು ದಾಳಿ ನಡೆಸಿ ದಂಡ ವಿಧಿಸಲಿದ್ದಾರೆ’ ಎಂದು ಎಚ್ಚರಿಸಿದರು.

ಜಾಥಾ ವೇಳೆ ವಿದ್ಯಾರ್ಥಿಗಳು ಅಂಗಡಿಗಳಿಗೆ ತೆರಳಿ ಮಾಲೀಕರಿಗೆ ಕೆಂಪು ಗುಲಾಬಿ ನೀಡಿ ಜಾಗೃತಿ ಮೂಡಿಸಿದರು. ವಿವಿಧ ಶಾಲಾ ಕಾಲೇಜು, ನರ್ಸಿಂಗ್, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಜಾಥಾದಲ್ಲಿ ಪಾಲ್ಗೊಂಡಿದ್ದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಭರತ್‌ಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸೀಮಾ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಮಂಜುನಾಥ್‌, ಮಲೇರಿಯಾ ನಿಯಂತ್ರಣಾಧಿಕಾರಿ ಬಾಲಕೃಷ್ಣ, ಡಾ. ಹರೀಶ್‌ಕುಮಾರ್, ತಂಬಾಕು ನಿಯಂತ್ರಣ ಕೋಶ ಜಿಲ್ಲಾ ಸಲಹೆಗಾರ ದಿನೇಶ್‌, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಲಜಾಕ್ಷಿ, ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT