ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೃಹಲಕ್ಷ್ಮಿ ಯೋಜನೆ: ಅರ್ಜಿ ಸಲ್ಲಿಸಲು ಮಹಿಳೆಯರ ದಂಡು

Published 20 ಜುಲೈ 2023, 8:21 IST
Last Updated 20 ಜುಲೈ 2023, 8:21 IST
ಅಕ್ಷರ ಗಾತ್ರ

ಬೀರೂರು: ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮಿ ಯೋಜನೆ ಬುಧವಾರದಿಂದ ಆರಂಭವಾಗುತ್ತದೆ ಎನ್ನುವ ಮಾಹಿತಿ ಅರಿತು, ಅರ್ಜಿ ಸಲ್ಲಿಸಲು ಮಹಿಳೆಯರು ಗ್ರಾಮ ಒನ್, ಕರ್ನಾಟಕ ಒನ್ ಸೇರಿದಂತೆ ಕಂಪ್ಯೂಟರ್ ಕೇಂದ್ರಗಳಿಗೆ ಮುಗಿಬಿದ್ದಿದ್ದಾರೆ.

ಸರ್ಕಾರ ನೀಡಿರುವ ಮಾಹಿತಿ ಮತ್ತು ಜಾಹೀರಾತು ಆಧರಿಸಿ ಸಾಕಷ್ಟು ಮಹಿಳೆಯರು ಗ್ರಾಮ ಒನ್ ಕೇಂದ್ರಗಳಿಗೆ ಧಾವಿಸಿದ್ದರು. ಆದರೆ ಬೆಳಗಿನಿಂದ ಕಾದರೂ ಯಾವುದೇ ವೆಬ್‍ಸೈಟ್ ಮೂಲಕ ಅರ್ಜಿ ಸಲ್ಲಿಕೆಗೆ ಚಾಲನೆ ದೊರೆಯದ ಕಾರಣ ಅರ್ಜಿ ಸಲ್ಲಿಕೆ ಸಾಧ್ಯವಾಗಲಿಲ್ಲ.

ಗೃಹಲಕ್ಷ್ಮಿ ಯೋಜನೆಯಲ್ಲಿ ಬಿಪಿಎಲ್ ಪಡಿತರ ಚೀಟಿ ಹೊಂದಿದ್ದು, ಮನೆಯ ಯಜಮಾನಿಯ ಖಾತೆಗೆ ಹಣ ಸಂದಾಯವಾಗಲಿದೆ. ಇದಕ್ಕಾಗಿ ಆಧಾರ್ ಜತೆಗೆ ಜೋಡಿಸಲಾಗಿರುವ ಮೊಬೈಲ್‍ಗೆ ತಾನಾಗಿಯೇ ಸಂದೇಶ ಬರಲಿದೆ. ಸಂದೇಶದಲ್ಲಿ ಎಂದು ಮತ್ತು ಯಾವಾಗ ನೀವು ಅರ್ಜಿ ಸಲ್ಲಿಸಬೇಕು ಎನ್ನುವ ಮಾಹಿತಿ ಇರಲಿದೆ.

ಫಲಾನುಭವಿಯು ತನ್ನ ಮೊಬೈಲ್ ರೀಚಾರ್ಜ್ ಮಾಡಿಸಿ, ಮೆಸೇಜ್ ತುಂಬಿದ್ದರೆ ಅದನ್ನು ತೆರವುಗೊಳಿಸಿ ಯೋಜನೆಗೆ ಅರ್ಜಿ ಸಲ್ಲಿಸುವ ನಿಗದಿತ ಸಮಯಕ್ಕೆ ಗ್ರಾಮ ಒನ್, ಬಾಪೂಜಿ ಸೇವಾಕೇಂದ್ರ, ಕರ್ನಾಟಕ ಒನ್ ಸೆಂಟರ್‌ಗಳಲ್ಲಿ ಅರ್ಜಿ ಸಲ್ಲಿಸಬೇಕು ಅಥವಾ ಸರ್ಕಾರ ನೇಮಿಸಿದ ಪ್ರಜಾಪ್ರತಿನಿಧಿಯ ಮೂಲಕ ಅರ್ಜಿ ಸಲ್ಲಿಸಿ ಮಂಜೂರಾತಿ ಪತ್ರ ಪಡೆಯಬೇಕು. ಆಗಸ್ಟ್ ತಿಂಗಳಿನಿಂದ ಅರ್ಜಿದಾರರ ಖಾತೆಗೆ ನೇರವಾಗಿ ಹಣ ಜಮೆಯಾಗಲಿದೆ ಎನ್ನುವ ಮಾಹಿತಿ ನೀಡಲಾಯಿತು.

ಇದೇ ಸಮಯದಲ್ಲಿ ಪಡಿತರ ಚೀಟಿ ಹೊಂದಿರುವವರು ‘ಅನ್ನಭಾಗ್ಯ’ದ 5 ಕೆ.ಜಿ. ಅಕ್ಕಿಯ ಬದಲಿಗೆ ತಲಾ ₹170 ಹಣವನ್ನು ಪಾವತಿಸುವ ಯೋಜನೆಗೆ ತಮ್ಮ ಪಡಿತರ ಅರ್ಹವಾಗಿದೆಯೇ? ರೇಷನ್ ಕಾರ್ಡ್‍ಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆಯೋ ಇಲ್ಲವೋ, ಬ್ಯಾಂಕ್ ಪಾಸ್‍ಬುಕ್‍ಗೆ ಆಧಾರ್ ಲಿಂಕ್ ಆಗಿದೆಯೋ ಇಲ್ಲವೋ ಎಂಬ ಮಾಹಿತಿ ಪಡೆಯಲು ಸಾಲುಗಟ್ಟಿ ನಿಂತರು.

ಕೆಲವೊಬ್ಬರಿಗೆ ಪಾಸ್‍ಬುಕ್‍ಗೆ ಆಧಾರ್ ಕಾರ್ಡ್ ಲಿಂಕ್ ಆಗಿಲ್ಲ ಎಂಬ ಮಾಹಿತಿ ತಿಳಿಸಿದಾಗ ಅದಕ್ಕೆ ಪರಿಹಾರವೇನು ಎನ್ನುವ ಪ್ರಶ್ನೆಗೆ ಉತ್ತರ ನೀಡುವಲ್ಲಿ ಸೈಬರ್ ನಿರ್ವಾಹಕರಿಗೆ ಸಾಕು ಬೇಕಾಯಿತು. ಇನ್ನೂ ಕೆಲವರಿಗೆ ಅವರಿಗೆ ತಿಳಿಯದ ಪಟ್ಟಣ ವ್ಯಾಪ್ತಿಯಲ್ಲಿ ಇಲ್ಲದ ಬ್ಯಾಂಕ್‍ಗೆ ಆಧಾರ್‌ಲಿಂಕ್‌ ಆಗಿರುವುದು ಕಂಡುಬಂತು.

ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್‍ಬುಕ್ ಲಿಂಕ್ ಕಡ್ಡಾಯವಾಗಿದ್ದು, ಎನ್‍ಪಿಸಿಐ ಆಗದಿದ್ದರೆ ಪಡಿತರ ಅಕ್ಕಿಯ ಬದಲಿನ ಹಣ ಸಂದಾಯವಾಗುವುದಿಲ್ಲ. ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸಬೇಕು. ಖಾತೆ ಇಲ್ಲದಿದ್ದರೆ ರಾಷ್ಟ್ರೀಕೃತ ಬ್ಯಾಂಕ್ ಇಲ್ಲವೇ ಅಂಚೆ ಕಚೇರಿಯಲ್ಲಿ ಹೊಸದಾಗಿ ಖಾತೆ ತೆರದು ಆಹಾರ ಇಲಾಖೆಗೆ ನ್ಯಾಯಬೆಲೆ ಅಂಗಡಿಯವರ ಮೂಲಕ ಮಾಹಿತಿ ಒದಗಿಸುವಂತೆ ತಿಳಿವಳಿಕೆ ನೀಡಲಾಯಿತು.

ಅನ್ನಭಾಗ್ಯ ಯೋಜನೆ ಅಡಿ ಪಿಎಚ್‍ಎಚ್ ಪಡಿತರ ಚೀಟಿಯ ಪ್ರತಿ ವ್ಯಕ್ತಿಗೆ ತಲಾ ₹170 ಹಣ ಪಾವತಿಯಾದರೆ, ಎನ್‍ಪಿಎಚ್‍ಎಚ್ (ಆದ್ಯತೇತರ ಕುಟುಂಬ) ಕಾರ್ಡ್‍ದಾರರಿಗೆ ಯಾವುದೇ ಹಣ ಸಂದಾಯವಾಗುವುದಿಲ್ಲ. ಅಂತ್ಯೋದಯ ಕಾರ್ಡ್‍ನಲ್ಲಿ 4 ಜನ ಸದಸ್ಯರಿದ್ದರೆ ಅವರಿಗೆ ಈಗಾಗಲೇ 35 ಕಿಲೋ ಆಹಾರ ಧಾನ್ಯ ವಿತರಿಸುತ್ತಿರುವುದರಿಂದ ಕೇವಲ ಒಬ್ಬರಿಗೆ ಮಾತ್ರ ₹170 ಸಂದಾಯವಾಗುತ್ತದೆ. ನಾಲ್ಕಕ್ಕಿಂತ ಹೆಚ್ಚು ಸದಸ್ಯರು ಇದ್ದರೆ 3ಕ್ಕಿಂತ ಮೇಲಿನ ಸದಸ್ಯರಿಗೆ ಹಣ ಪಾವತಿಯಾಗಲಿದೆ ಎನ್ನುವ ಮಾಹಿತಿ ಕಂಪ್ಯೂಟರ್ ಕೇಂದ್ರಗಳಲ್ಲಿ ಮಾಹಿತಿ ಸಂಗ್ರಹಿಸಿ ಜನರು ಬ್ಯಾಂಕ್‍ಗಳಿಗೆ ತೆರಳಿ ತಮಗೆ ಹಣ ಸಂದಾಯವಾಗಿದೆಯೇ ಎನ್ನುವುದನ್ನು ಖಚಿತ ಪಡಿಸಿಕೊಳ್ಳುತ್ತಿರುವುದು ಕಂಡುಬಂತು.

ಪಟ್ಟಣದ ರೈಲ್ವೆ ಸ್ಟೇಷನ್ ರಸ್ತೆ, ಬಿ.ಎಚ್.ರಸ್ತೆ, ಮಾರ್ಕೆಟ್ ರಸ್ತೆ ಮತ್ತು ಹಲವು ಕಂಪ್ಯೂಟರ್ ಕೇಂದ್ರಗಳಲ್ಲಿ ಅರ್ಜಿಗಳನ್ನು ಸಲ್ಲಿಸಲು ಮಹಿಳೆಯರು ಮತ್ತು ಪುರುಷರು ಕೈಯಲ್ಲಿ ಆಧಾರ್ ಕಾರ್ಡ್, ಪಡಿತರ ಚೀಟಿ, ಮೊಬೈಲ್ ಫೋನ್ ಹಿಡಿದು ಕಾಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT