ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಮಗಳೂರು: ಆನೆ ಹಾವಳಿ ತಡೆಗೆ 90 ಕಿ.ಮೀ ಟೆಂಟೆಕಲ್ ಬೇಲಿ

Published 19 ಜೂನ್ 2024, 5:43 IST
Last Updated 19 ಜೂನ್ 2024, 5:43 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಕಾಡಾನೆ ಮತ್ತು ಮಾನವ ಸಂಘರ್ಷ ತಡೆಗೆ ಕಾಡಂಚಿನಲ್ಲಿ ಟೆಂಟಿಕಲ್‌ ಬೇಲಿ ನಿರ್ಮಿಸಲು ಅರಣ್ಯ ಇಲಾಖೆ ಮುಂದಾಗಿದೆ. ಆಲ್ದೂರು ಮತ್ತು ಸಾರಗೋಡು ವಲಯದಲ್ಲಿ 80 ಕಿಲೋ ಮೀಟರ್‌ ಬೇಲಿ ನಿರ್ಮಾಣವಾಗಲಿದೆ.

ಆಲ್ದೂರು ವಲಯದಲ್ಲಿ ಮಾಚಗೊಂಡನಹಳ್ಳಿ-ಕೆಸವಿನಹಕ್ಲು, ಕಂಚಿಕಲ್‌ ದುರ್ಗ ಭಾಗದ ಕಾಡಂಚಿನಲ್ಲಿ‌ 40 ಕಿಲೋ ಮೀಟರ್ ಉದ್ದಕ್ಕೆ ಈ ಬೇಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಮತ್ತೊಂದೆಡೆ ಸಾರಗೋಡು ವಲಯದ ಕುಂದೂರು ಮತ್ತು ದರ್ಶನ ಭಾಗದಲ್ಲಿ 40 ಕಿ.ಮೀ ಬೇಲಿ ನಿರ್ಮಿಸಲು ಅರಣ್ಯ ಇಲಾಖೆ ಯೋಜನೆ ರೂಪಿಸಿದೆ.

ಕಳೆದ ವರ್ಷವೇ ಈ ಬೇಲಿ ನಿರ್ಮಿಸಲು ಸರ್ಕಾರ ನಿರ್ಧರಿಸಿತ್ತು. ಕೆಲ ತಾಂತ್ರಿಕ ಕಾರಣಗಳಿಂದ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಈಗ ಹೊಸದಾಗಿ ದರ ನಿಗದಿ ಮಾಡಿ ಟೆಂಡರ್‌ ಪ್ರಕ್ರಿಯೆ ಆರಂಭಿಸಲು ಸಿದ್ಧತೆ ನಡೆಸಲಾಗಿದೆ. ಸರ್ಕಾರದ ಸೂಚನೆಗಾಗಿ ಕಾಯಲಾಗುತ್ತಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ವಿವರಿಸುತ್ತಾರೆ.

ಎಸ್ಟೇಟ್‌ ಕುಂದೂರು ಮತ್ತು ಬಿ.ಹೊಸಹಳ್ಳಿ ನಡುವಿನ ಕಾಡಂಚಿನಲ್ಲಿ ಈ ರೀತಿಯ ಬೇಲಿ ಈಗಾಗಲೇ ನಿರ್ಮಾಣವಾಗಿದೆ. ಈ ಬೇಲಿ ನಿರ್ಮಾಣವಾದ ಬಳಿಕ ಆ ಭಾಗದ ಕಾಡಂಚಿನ ಹಳ್ಳಿಗಳಿಗೆ ಆನೆಗಳ ಹಾವಳಿ ಇಲ್ಲವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯ ಕಾಡಿನಿಂದ ಬರುತ್ತಿದ್ದ ಆನೆಗಳು ಈಗ ಬೇಲಿ ದಾಟುವ ಸಾಹಸ ಮಾಡುತ್ತಿಲ್ಲ ಎಂದು ಅವರು ಹೇಳಿದರು.

ಈಗ ಟೆಂಟಿಕಲ್‌ ಬೇಲಿ ನಿರ್ಮಿಸಲು ಉದ್ದೇಶಿಸಿರುವ ಜಾಗ ಕಣಿವೆ ಪ್ರದೇಶಗಳಿಂದ ಕೂಡಿದೆ. ಈ ಭಾಗದಲ್ಲಿ ರೈಲ್ವೆ ಬ್ಯಾರಿಕೇಡ್‌ ಅಥವಾ ಬೇರೆ ಯಾವುದೇ ಬೇಲಿ ನಿರ್ಮಿಸುವುದು ಕಷ್ಟ. ಟೆಂಟಿಕಲ್‌ ಬೇಲಿ ನಿರ್ಮಾಣವೇ ಪರಿಹಾರ ಎಂದರು.

ಒಂದೂವರೆ ಕಿಲೋ ಮೀಟರ್‌ ಬೇಲಿ ನಿರ್ಮಾಣಕ್ಕೆ ₹6.06 ಲಕ್ಷ ವೆಚ್ಚವಾಗುವ ಅಂದಾಜಿದೆ. ಆನೆ-ಮಾನವ ಸಂಘರ್ಷದಿಂದ ಪ್ರಾಣಹಾನಿ ಮತ್ತು ಬೆಳೆಹಾನಿ ಆಗುತ್ತಿದೆ. ಬೆಳೆಹಾನಿ ಪರಿಹಾರವನ್ನು ಪ್ರತಿವರ್ಷ ನೀಡಲಾಗುತ್ತಿದೆ. ಈ ಬೇಲಿ ನಿರ್ಮಾಣಕ್ಕೆ ಆಗುವ ವೆಚ್ಚಕ್ಕಿಂತ ಬೆಳೆಹಾನಿ ಪರಿಹಾರವೇ ಹೆಚ್ಚು. ಅಲ್ಲದೇ ಸಂಘರ್ಷಕ್ಕೆ ಶಾಶ್ವತ ಪರಿಹಾರವೂ ದೊರಕಿದಂತೆ ಆಗಲಿದೆ ಎಂದು ಅವರು ವಿವರಿಸಿದರು.

ಏನಿದು ಟೆಂಟಿಕಲ್ ಬೇಲಿ?

ಸೌರಶಕ್ತಿ ಆಧರಿತ 18 ಅಡಿ ಎತ್ತರದ ತೂಗು ಬೇಲಿ ನಿರ್ಮಿಸಲಾಗುತ್ತದೆ. ಸೌರಶಕ್ತಿ ಆಧರಿಸಿ 12 ವೊಲ್ಟ್‌ ಮಾತ್ರ ವಿದ್ಯುತ್‌ ಹರಿಸಲಾಗುತ್ತದೆ. ಈ ಬೇಲಿ ತಾಕಿದರೆ ಸಣ್ಣದಾಗಿ ವಿದ್ಯುತ್‌ ಸ್ಪರ್ಶದ ಅನುಭವ ಆಗಲಿದೆ. ಆದರೆ, ಯಾವುದೇ ಪ್ರಾಣಿಗಳ ಪ್ರಾಣಕ್ಕೆ ಅಪಾಯ ಆಗುವುದಿಲ್ಲ.

ವಿದ್ಯುತ್‌ ಸ್ಪರ್ಶದ ಅನುಭವವಾದ ಕೂಡಲೇ ಆನೆ ಅಥವಾ ಬೇರೆ ಕಾಡು ಪ್ರಾಣಿಗಳು ಹಿಂದಕ್ಕೆ ಹೋಗುತ್ತವೆ. ಇದರಿಂದ ಜನವಸತಿ ಪ್ರದೇಶಗಳಿಗೆ ಆನೆಗಳು ಬರುವುದು ತಪ್ಪಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT