ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಕೋಟೆ ಛಿದ್ರಗೊಳಿಸಿದ್ದ ಹುಚ್ಚೇಗೌಡ

Published 9 ಏಪ್ರಿಲ್ 2024, 7:25 IST
Last Updated 9 ಏಪ್ರಿಲ್ 2024, 7:25 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಕಾಂಗ್ರೆಸ್ ಭದ್ರ ಕೋಟಿಯನ್ನು ಬೇಧಿಸಿದ್ದ ಮೊಟ್ಟ ಮೊದಲ ಜಿಲ್ಲೆಯ ಸಂಸದ ಎಂದರೆ ಎಂ.ಹುಚ್ಚೇಗೌಡ. 1967ರ ಚುನಾವಣೆಯಲ್ಲಿ ಪ್ರಜಾ ಸೋಷಿಯಲಿಸ್ಟ್ ಪಕ್ಷದಿಂದ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿ ಇತಿಹಾಸ ದಾಖಲಿಸಿದ್ದರು.

ಮೊದಲ ಲೋಕಸಭೆ ಚುನಾವಣೆ 1952ರಲ್ಲಿ ನಡೆದಿದ್ದು, ಅಲ್ಲಿಂದ ಮೂರು ಅವಧಿ ಹಾಸನ–ಚಿಕ್ಕಮಗಳೂರು ಜಿಲ್ಲೆಯನ್ನು ಒಳಗೊಂಡ ಕ್ಷೇತ್ರವಾಗಿತ್ತು. ಕಾಂಗ್ರೆಸ್‌ ಎಚ್‌.ಸಿದ್ಧನಂಜಪ್ಪ ಅವರೇ ಪ್ರತಿನಿಧಿಸಿದ್ದರು.

ನಾಲ್ಕನೇ ಚುನಾವಣೆ ನಡೆದ 1967ರ ವೇಳೆಗೆ ಹಾಸನ ಜಿಲ್ಲೆಯಿಂದ ಬೇರ್ಪಟ್ಟು ಸ್ವತಂತ್ರ ಲೋಕಸಭಾ ಕ್ಷೇತ್ರವಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮತ್ತು ಕಾರ್ಕಳ ವಿಧಾನಸಭಾ ಕ್ಷೇತ್ರಗಳನ್ನು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಸೇರಿಸಲಾಗಿತ್ತು.

ಅಷ್ಟರಲ್ಲಿ ಜಯಪ್ರಕಾಶ್ ನಾರಾಯಣ ನೇತೃತ್ವದ ಪ್ರಜಾ ಸೋಷಿಯಲಿಸ್ಟ್ ಪಕ್ಷ ಮುನ್ನೆಲೆಗೆ ಬಂದಿತ್ತು. ಜೆ.ಪಿ ಬಗ್ಗೆ ಜನರ ವಿಶ್ವಾಸ ಹೆಚ್ಚಾಗಿತ್ತು. ಜಿಲ್ಲೆಯಲ್ಲೂ ಪಕ್ಷದ ಅಲೆ ಹೆಚ್ಚಾಗಿತ್ತು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿಯ ಎಂ.ಹುಚ್ಚೇಗೌಡ ಅವರಿಗೆ ಪಿಎಸ್‌ಪಿಯಿಂದ ಸ್ಪರ್ಧೆಗೆ ಇಳಿದಿದ್ದರು.

4,07,267 ಮತದಾರರು ನೋಂದಣಿಯಾಗಿದ್ದರು. 2,60,483 ಮತಗಳು ಚಲಾವಣೆಗೊಂಡಿದ್ದವು. ಕಾಂಗ್ರೆಸ್ ಪಕ್ಷದಿಂದ ಎ.ಎಂ ಬಸವೇಗೌಡ, ಪಕ್ಷೇತರ ಅಭ್ಯರ್ಥಿಗಳಾಗಿ ಕೆ. ಶ್ಯಾಮಣ್ಣ, ಟಿ.ರುದ್ರಪ್ಪ ಚುನಾವಣಾ ಕಣದಲ್ಲಿದ್ದರು. ಕಾಂಗ್ರೆಸ್ ಮತ್ತು ಪ್ರಜಾ ಸೋಷಿಯಲಿಸ್ಟ್ ಪಕ್ಷದ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. 

ಕಾಂಗ್ರೆಸ್ ವಿರೋಧಿ ಅಲೆಯಲ್ಲಿ ಬಸವೇಗೌಡ ಕೂಡ ಸೋಲು ಕಾಣಬೇಕಾಯಿತು. ಪಿಎಸ್‌ಪಿಯ ಎಂ.ಹುಚ್ಚೇಗೌಡ 1,06,812 ಮತಗಳನ್ನು ಪಡೆದಿದ್ದರು. ಸಮೀಪ ಸ್ಪರ್ಧಿಯಾಗಿದ್ದ ಕಾಂಗ್ರೆಸ್‌ನ ಎ.ಎಂ.ಬಸವೇಗೌಡ ಅವರನ್ನು 18,223 ಮತಗಳ ಅಂತರದಿಂದ ಸೋಲಿಸಿದ್ದರು. ಬಸವೇಗೌಡ ಅವರು 88,589 ಮತಗಳನ್ನು ಪಡೆಯಲಷ್ಟೇ ಸಾಧ್ಯವಾಗಿತ್ತು. ಇನ್ನೊಂದು ವಿಶೇಷ ಎಂದರೆ ಪಕ್ಷೇತರ ಅಭ್ಯರ್ಥಿಯಾಗಿದ್ದ ಕೆ.ಶ್ಯಾಮಣ್ಣ 44,170 ಮತಗಳನ್ನು ಪಡೆದಿದ್ದರು. ಇದು ಕೂಡ ಕಾಂಗ್ರೆಸ್‌ ಸೋಲಿಗೆ ಕಾರಣ ಆಗಿರಬಹುದು. 

ಆ ಮೂಲಕ 15 ವರ್ಷಗಳ ಕಾಂಗ್ರೆಸ್ ಭದ್ರಕೋಟೆಯನ್ನು ಎಂ.ಹುಚ್ಚೇಗೌಡ ಅವರು ಮೊದಲ ಬಾರಿಗೆ ಛಿದ್ರಗೊಳಿಸಿದ್ದರು. 1971ರ ಚುನಾವಣೆಗೆ ಅವರು ಮತ್ತೆ ಸ್ಪರ್ಧಿಸುವುದಿಲ್ಲ. ಒಮ್ಮೆ ಮಾತ್ರ ಸಂಸದರಾಗಿ ಈ ಕ್ಷೇತ್ರವನ್ನು ಅವರು ಪ್ರತಿನಿಧಿಸಿದ್ದಾರೆ. 

Cut-off box - ಅಭ್ಯರ್ಥಿಗಳು ಪಡೆದ ಮತಗಳು ಎಂ.ಹುಚ್ಚೇಗೌಡ; 106812 ಎ.ಎಂ ಬಸವೇಗೌಡ(ಕಾಂಗ್ರೆಸ್); 88589 ಕೆ.ಶ್ಯಾಮಣ್ಣ(ಪಕ್ಷೇತರ); 44170 ಟಿ.ರುದ್ರಪ್ಪ(ಪಕ್ಷೇತರ); 7518

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT