ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ಲಾಂಛನ, ಫೇಸ್‌ಬುಕ್ ಪೇಜ್‌ ಬಿಡುಗಡೆ

28ರಿಂದ ಮೂರು ದಿನ ‘ಚಿಕ್ಕಮಗಳೂರು ಹಬ್ಬ’
Last Updated 3 ಫೆಬ್ರುವರಿ 2020, 14:21 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಕಲೆ, ಸಂಸ್ಕೃತಿ ಅನಾವರಣಗೊಳಿಸುವ ‘ಚಿಕ್ಕಮಗಳೂರು ಹಬ್ಬ’ವನ್ನು (ಜಿಲ್ಲಾ ಉತ್ಸವ) ವ್ಯವಸ್ಥಿತವಾಗಿ ಆಯೋಜಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ ರವಿ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಚಿಕ್ಕಮಗಳೂರು ಹಬ್ಬದ ಲಾಂಛನ(ಲೊಗೊ) ಹಾಗೂ ಫೇಸ್‌ಬುಕ್ ಪೇಜ್‌ ಬಿಡುಗಡೆಗೊಳಿಸಿ ಜಿಲ್ಲಾ ಉತ್ಸವದ ವಿವಿಧ ಸಮಿತಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಫೆ. 28, 29 ಮತ್ತು ಮಾರ್ಚ್ 1 ರಂದು ಹಬ್ಬ ಏರ್ಪಡಿಸಲಾಗಿದೆ. ನೇತಾಜಿ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನ, ಕುವೆಂಪು ಕಲಾ ಮಂದಿರದಲ್ಲಿ ಜರುಗಲಿದೆ. ಹಬ್ಬದ ನಿಟ್ಟಿನಲ್ಲಿ 15 ಸಮಿತಿಗಳನ್ನು ರಚಿಸಲಾಗಿದೆ ಎಂದರು.

ನಾಟಕೋತ್ಸವ, ಸಿನಿಮೋತ್ಸವ, ಸಂಗೀತ, ನೃತ್ಯ, ಜನಪದ ಕಲಾ ಪ್ರದರ್ಶನ ಏರ್ಪಡಿಸಲಾಗುವುದು. ಗ್ರಾಮೀಣ ಕ್ರೀಡೆ, ಹೊರಾಂಗಣ ಮತ್ತು ಒಳಾಂಗಣ ಕ್ರೀಡೆಗಳನ್ನು ಆಯೋಜಿಸಲಾಗಿದೆ. 600ಕಲಾವಿದರ 40 ಜನಪದ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ ಎಂದು ಹೇಳಿದರು.

ಜಿಲ್ಲಾ ಆಟದ ಮೈದಾನದಲ್ಲಿ ಮುಖ್ಯ ವೇದಿಕೆ ನಿರ್ಮಾಣ ಮಾಡಬೇಕು. ಎಲ್‌ಇಡಿ ಪರದೆಗಳನ್ನು ಅಳವಡಿಸಬೇಕು ಎಂದು ವೇದಿಕೆ ಸಮಿತಿಯವರಿಗೆ ಸೂಚನೆ ನೀಡಿದರು.

20 ಕ್ಕೂ ಹೆಚ್ಚು ವಿವಿಧ ಇಲಾಖೆಗಳ ವಸ್ತುಪ್ರದರ್ಶನ ಇರಲಿವೆ. ಸಿರಿಧಾನ್ಯ, ಕೃಷಿ ಉಪಕರಣ, ಕಮ್ಮಾರಿಕೆ, ಕುಂಬಾರಿಕೆ ಪ್ರದರ್ಶನ, ಜಿಲ್ಲೆಯ ಪ್ರವಾಸಿ ತಾಣಗಳ ಕುರಿತ ವಿಡಿಯೋ ತುಣುಕು ಪ್ರದರ್ಶನ ನಡೆಯಲಿದೆ ಎಂದರು.

ನಗರದಲ್ಲಿ ಬಾಳೆ ಗಿಡ, ತಳಿರು ತೋರಣ ಕಟ್ಟಿ ಅಲಂಕಾರಗೊಳಿಸಬೇಕು. ದೀಪಾಲಂಕಾರ ಮಾಡಬೇಕು. ವಿವಿಧ ಬಣ್ಣ ಬಣ್ಣದ ಬಟ್ಟೆಗಳಿಂದ ಅಲಂಕರಿಸಬೇಕು. ನಗರದ ಮುಖ್ಯ ದ್ವಾರಗಳಲ್ಲಿ ಸ್ವಾಗತ ಕಮಾನುಗಳನ್ನು ನಿರ್ಮಿಸಿ ಎಲ್‌ಇಡಿ ಪರದೆ ಅಳವಡಿಸಬೇಕು ಎಂದು ಸೂಚನೆ ನೀಡಿದರು.

ಸಸ್ಯಹಾರ ಹಾಗೂ ಮಾಂಸಹಾರದ ಆಹಾರ ಮೇಳ ಆಯೋಜಿಸಲಾಗಿದೆ. ಸ್ವಚ್ಛತೆಗೆ ಒತ್ತು ನೀಡಬೇಕು. ಎನ್‌ಎಸ್‌ಎಸ್‌, ಎನ್‌ಸಿಸಿ, ಸ್ಕೌಟ್ ಮತ್ತು ಗೈಡ್ಸ್, ಗೃಹರಕ್ಷಕ ದಳದ ಸಹಕಾರ ಪಡೆದುಕೊಳ್ಳಬೇಕು. ಜಿಲ್ಲಾ ಉತ್ಸವಕ್ಕೆ ರಾಜ್ಯದ ವಿವಿಧೆಡೆಯಿಂದ ಜನರು ಬರುವ ನಿರೀಕ್ಷೆ ಇದೆ. ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಬೇಕು ಎಂದು ಸಾರಿಗೆ ಅಧಿಕಾರಿಗಳಿಗೆ ತಿಳಿಸಿದರು.

ಹೆಚ್ಚುವರಿ ಪೊಲೀಸ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್‌.ಎನ್‌.ಶ್ರುತಿ, ಉಪವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜ್ ಇದ್ದರು.

ಫೇಸ್‌ಬುಕ್‌ ಲಿಂಕ್‌: https://www.facebook.com/ckmuthsava/

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT