ಗುರುವಾರ , ಆಗಸ್ಟ್ 22, 2019
27 °C
ಜಿಲ್ಲೆಯಲ್ಲಿ ಮುಂಗಾರು ಮಳೆ ದುರ್ಬಲ– ಉತ್ಪಾದನೆ ಇಳಿಮುಖ

ತರಕಾರಿ ತುಟ್ಟಿ: ಗ್ರಾಹಕರಿಗೆ ತಟ್ಟಿದ ಬಿಸಿ

Published:
Updated:
Prajavani

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮುಂಗಾರು ಮಳೆ ದುರ್ಬಲವಾಗಿದೆ. ತರಕಾರಿ ಉತ್ಪಾದನೆ ಕಡಿಮೆಯಾಗಿದ್ದು, ಬೆಲೆ ಏರಿಕೆ ಬಿಸಿ ಗ್ರಾಹಕರಿಗೆ ತಟ್ಟಿದೆ.

ಕೆ.ಜಿಗೆ ಬೀನ್ಸ್ ಕೆಜಿಗೆ ₹ 60, ಕ್ಯಾರೆಟ್ ₹ 60, ಹೀರೇಕಾಯಿ ₹ 40, ಮೂಲಂಗಿ ₹30, ಬದನೆಕಾಯಿ ₹ 30, ನವಿಲುಕೋಸು ₹ 40, ಬೀಟ್‌ರೋಟ್ ₹ 25, ಆಲೂಗಡ್ಡೆ ₹ 20, ಬಟಾಣಿ ₹ 140, ನುಗ್ಗೆಕಾಯಿ ₹ 60, ಜವಳಿಕಾಯಿ ₹ 40, ತೊಂಡೆಕಾಯಿ ₹30, ಟೊಮೊಟೊ₹ 40, ಈರಳ್ಳಿ ₹ 20, ಶುಂಠಿ ₹ 140, ಮೆಣಸಿನಕಾಯಿ ₹30, ಮಂಗಳೂರು ಸೌತೆಕಾಯಿಗೆ ₹ 20ಇದೆ.

ಜನವರಿಯಿಂದ ಜೂನ್ ಅಂತ್ಯದವರೆಗೆ ಜಿಲ್ಲೆಯಲ್ಲಿ ಶೇ 33ರಷ್ಟು ಮಳೆ ಕೊರತೆಯಾಗಿದೆ. ಬಯಲುಸೀಮೆಯಲ್ಲಿ ಮಳೆ ಸುಳಿವು ಇಲ್ಲ. ತರಕಾರಿ ಆವಕ ಕಡಿಮೆಯಾಗಿದೆ.

ಟೊಮೆಟೊ, ಈರುಳ್ಳಿ, ಬೀನ್ಸ್, ಕ್ಯಾರೆಟ್, ಬೀಟ್‌ರೂಟ್, ಆಲೂಗಡ್ಡೆ, ಬಟಾಣಿ ಬೆಲೆ ಕಳೆದ ವಾರಕ್ಕಿಂತ ಶೇ 30 ರಷ್ಟು ಹೆಚ್ಚಾಗಿದೆ. ಸಗಟು ಮತ್ತು ಚಿಲ್ಲರೆ ಮಾರಾಟ ದರಗಳಲ್ಲಿ ವ್ಯತ್ಯಾಸ ಇದೆ.

‘ಮಳೆಗಾಲದಲ್ಲಿ ತರಕಾರಿ ಬೆಲೆ ಕಡಿಮೆ ಇರುತ್ತಿತ್ತು. ಬೀನ್ಸ್ ಕೆ.ಜಿಗೆ ₹ 10ರಿಂದ 20 ಇರುತ್ತಿತ್ತು. ಈಗ ₹ 60ಕ್ಕೆ ಏರಿಕೆಯಾಗಿದೆ. ಕಾಳುಗಳ ಬೆಲೆ ₹100 ಗಡಿ ದಾಟಿದೆ. ತರಕಾರಿಗಳ ಬೆಲೆ ಏರಿಕೆ ಗ್ರಾಹಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ’ ಎಂದು ಗೃಹಿಣಿ ಬನಶಂಕರಿ ಜೋಷಿ ಹೇಳುತ್ತಾರೆ.

‘ತರಕಾರಿ ಬೆಲೆ ಏರಿಕೆ ಜನಸಾಮಾನ್ಯರಿಗೆ ಹೊರೆ. ಈರುಳ್ಳಿ ಹೊರತಾಗಿ ಬೇರೆ ತರಕಾರಿಗಳ ಬೆಲೆ ಕಡಿಮೆಯಾಗಿಲ್ಲ. ಗ್ರಾಹಕರನ್ನು ಸಂಕಷ್ಟಕ್ಕೀಡುಮಾಡಿದೆ’ ಎಂದು ಗೃಹಿಣಿ ಎಚ್.ಎಸ್.ಸವಿತಾ ಹೇಳುತ್ತಾರೆ.

‘ಎರಡು ತಿಂಗಳಿನಿಂದ ತರಕಾರಿಗಳ ಬೆಲೆ ಹೆಚ್ಚಾಗಿದೆ. ಜಿಲ್ಲೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ತರಕಾರಿಗಳು ಮಾರುಕಟ್ಟೆಗೆ ಪೂರೈಕೆಯಾಗುತ್ತಿಲ್ಲ. ಸದ್ಯಕ್ಕೆ ಬೆಲೆ ಇಳಿಕೆಯಾಗುವ ಲಕ್ಷಣ ಕಾಣಿಸುತ್ತಿಲ್ಲ’ ಎಂದು ತರಕಾರಿ ಸಗಟು ವ್ಯಾಪಾರಿ ಎಲ್.ಎಂ.ಮಹೇಶ್ ಹೇಳುತ್ತಾರೆ.

*
ಬೆಲೆ ಏರಿಕೆಯಿಂದ ವ್ಯಾಪಾರ ವಹಿವಾಟು ಕಡಿಮೆಯಾಗಿದೆ. ನಿತ್ಯ ತರಕಾರಿ ಖರೀದಿಸುತ್ತಿದ್ದ ಹೊಟೇಲ್‌ನವರು ಸೊಪ್ಪು ಕೊಳ್ಳುವತ್ತ ಮುಖ ಮಾಡುತ್ತಿದ್ದಾರೆ.
-ಜಾಫರ್, ತರಕಾರಿ ವ್ಯಾಪಾರಿ

Post Comments (+)