ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: 3,500 ಕಾರ್ಮಿಕರಿಗೆ ಅತಂತ್ರ ಸ್ಥಿತಿ?

ಟೀ ಎಸ್ಟೇಟ್‌ಗಳಲ್ಲಿ ನೀರಿನ ಕೊರತೆ: ಬತ್ತಿದ ಝರಿ, ತೊರೆಗಳು
Published 19 ಮಾರ್ಚ್ 2024, 23:43 IST
Last Updated 19 ಮಾರ್ಚ್ 2024, 23:43 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಬಿರು ಬಿಸಿಲಿಗೆ ಜಿಲ್ಲೆಯ ನದಿಗಳು, ಝರಿ, ತೊರೆಗಳು ಬತ್ತಿ ಹೋಗಿದ್ದರೆ, ಅಂತರ್ಜಲ ಪಾತಾಳ ಸೇರಿದೆ. ಟೀ ಉದ್ಯಮದ ಮೇಲೆ ಇದೇ ಮೊದಲ ಬಾರಿಗೆ ಪರಿಣಾಮ ಬೀರಿದ್ದು, 3,500ಕ್ಕೂ ಹೆಚ್ಚು ಕಾರ್ಮಿಕರು ಉದ್ಯೋಗ ಇಲ್ಲದೆ ಅತಂತ್ರರಾಗುವ ಆತಂಕದಲ್ಲಿದ್ದಾರೆ.

ಜಿಲ್ಲೆಯಲ್ಲಿ ಒಂಬತ್ತು ಟೀ ಎಸ್ಟೇಟ್‌ಗಳಿದ್ದು, ಒಟ್ಟಾರೆ 4,500 ಎಕರೆಯಷ್ಟು ಚಹಾ ತೋಟವಿದೆ. ಕೆಲವು ಎಸ್ಟೇಟ್‌ ಗಳಲ್ಲಿ ಒಂದು ಸಾವಿರ ಎಕರೆ ತನಕ ತೋಟವಿದ್ದರೆ, ಸಣ್ಣ ಎಸ್ಟೇಟ್‌ಗಳೆಂದರೆ 500ರಿಂದ 600 ಎಕರೆಯಷ್ಟಿವೆ. ಈ ತೋಟಗಳಲ್ಲಿ ವರ್ಷದ 365 ದಿನವೂ ಕೆಲಸ ಇದ್ದೇ ಇರುತ್ತದೆ. 

ಎಲ್ಲಾ ಎಸ್ಟೇಟ್‌ಗಳಲ್ಲಿ ಅಲ್ಲಿಯೇ ಕಾರ್ಖಾನೆಗಳಿದ್ದು, ಚಹಾ ಪುಡಿ ತಯಾರಿಸಿ ಮಾರುಕಟ್ಟೆಗೆ ಕಳುಹಿಸಲಾಗುತ್ತದೆ. ಟೀ ಎಲೆ ಕೊಯ್ಲಿಗೆ ಮತ್ತು ಚಹಾ ಪುಡಿ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಭಾನುವಾರ ಹೊರತುಪಡಿಸಿ ಉಳೆದೆಲ್ಲಾ ದಿನವೂ ಕೆಲಸ  ಇರುತ್ತದೆ. ಬಲಿತ ಎಲೆಗಳನ್ನು ಕಟಾವು ಮಾಡಲು ಪರಿಣತ ಕಾರ್ಮಿಕರಿದ್ದಾರೆ.

ವಾಡಿಕೆಗಿಂತ ಕಡಿಮೆ ಮಳೆ ಆಗಿರುವುದರಿಂದ ಟೀ ತೋಟಗಳಲ್ಲಿ ನೀರಿಲ್ಲವಾಗಿದೆ. ಝರಿ, ತೊರೆಗಳು, ನದಿಗಳು, ಕೆರೆಗಳೇ ಈ ತೋಟಗಳಿಗೆ ನೀರಿನ ಮೂಲ. ಅಲ್ಲಲ್ಲಿ ಕೊಳವೆ ಬಾವಿಗಳನ್ನು ಕೊರೆದಿದ್ದರೂ ಅಲ್ಲೂ ನೀರಿಲ್ಲವಾಗಿದೆ. ಇನ್ನಷ್ಟು ಆಳಕ್ಕೆ ಇಳಿಸಿ ನೀರೆತ್ತುವ ಪ್ರಯತ್ನಗಳೂ ವಿಫಲವಾಗಿವೆ.

ನೀರು ಸಮೃದ್ಧವಾಗಿದ್ದರೆ ಎಲೆಗಳು ಸಕಾಲಕ್ಕೆ ಚಿಗುರಿ ಟೀ ಸೊಪ್ಪು ಕೊಯ್ಲಿಗೆ ಬರುತ್ತದೆ. ನೀರಿಲ್ಲದಿದ್ದರೆ ಎಲೆಗಳು ಚಿಗುರುವುದಿಲ್ಲ. ಸದ್ಯ ಎರಡು–ಮೂರು ದಿನಕ್ಕೊಮ್ಮೆ ಟೀ ಸೊಪ್ಪು ಕೊಯ್ಲು ಮಾಡಲಾಗುತ್ತಿದೆ. ಇನ್ನೂ ಕೆಲವು ದಿನ ಕಳೆದರೆ ಸಂಪೂರ್ಣ ನಿಲ್ಲಿಸಬೇಕಾದ ಅನಿವಾರ್ಯ ಎದುರಾಗುತ್ತದೆ ಎಂದು ಟೀ ತೋಟಗಳ ಜವಾಬ್ದಾರಿ ನಿರ್ವಹಿಸುವ ಸಿಬ್ಬಂದಿ ಹೇಳುತ್ತಾರೆ.

‘ಟೀ ಎಸ್ಟೇಟ್‌ಗೆ ನಿರಂತರವಾಗಿ ಬರುವ ಕಾರ್ಮಿಕರಿದ್ದಾರೆ. ಎಲೆ ಹೆಚ್ಚಾಗಿ ಚಿಗುರುವ ಸಮಯದಲ್ಲಿ ಕಾರ್ಮಿಕರು ಭಾನುವಾರವೂ ಕೆಲಸ ಮಾಡುತ್ತಾರೆ. ಈಗ ನಾವೇ ರಜೆ ಕೊಡಬೇಕಾಗಿ ಬಂದಿದೆ’ ಎಂದು ಅವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಈ ತೋಟಗಳನ್ನೇ ನಂಬಿರುವ ಕಾರ್ಮಿಕರು ಕೂಲಿ ಇಲ್ಲದೆ ಖಾಲಿ ಕೈ ಆಗುವ ಆತಂಕ ಇದೆ. ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ಹೇಳುತ್ತಿದೆ. ಆದರೆ, ಮಳೆ ಬರುವ ಲಕ್ಷಣ ಕಾಣಿಸುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT