ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡೂರು | ಕೊಬ್ಬರಿ ಬೆಲೆ ಕುಸಿತ: ಎಳನೀರು ಆವಕ

ಕಡೂರು: ತೆಂಗು ಬೆಳೆಗಾರರಿಗೆ ಕಾಡಿದ ಸಮಸ್ಯೆ, ಅಕಾಲಿಕ ಮಳೆಯಿಂದ ಗುಣಮಟ್ಟದ ಕೊರತೆ
Last Updated 16 ಡಿಸೆಂಬರ್ 2022, 5:05 IST
ಅಕ್ಷರ ಗಾತ್ರ

ಕಡೂರು: ತೆಂಗು ಕಡೂರು ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆ. ಸುಮಾರು 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿದೆ. ಬಹುತೇಕ ಬೆಳೆಗಾರರು ಕೊಬ್ಬರಿ ಮಾಡುತ್ತಾರೆ. ಆದರೆ ಈಚೆಗೆ ಕೊಬ್ಬರಿ ಬೆಲೆ ಕುಸಿತ ಕಂಡಿರುವುದು ಬೆಳೆಗಾರರಿಗೆ ಚಿಂತೆ ಮೂಡಿಸಿದೆ.

ಕೆಲವೇ ತಿಂಗಳ ಹಿಂದೆ ಒಂದು ಕ್ವಿಂಟಲ್‌ಗೆ ₹15,000 ಇದ್ದ ಕೊಬ್ಬರಿ ಬೆಲೆಯು ಇದೀಗ ₹11,500ಕ್ಕೆ ಇಳಿದಿದೆ. ಗುಣಮಟ್ಟ ಕಡಿಮೆಯಿದ್ದರೆ ಬೆಲೆ ಇನ್ನೂ ಕಡಿಮೆ. ಸುಮಾರು 700 ಕೊಬ್ಬರಿ ಒಂದು ಕ್ವಿಂಟಲ್ ತೂಗುತ್ತವೆ. ತೆಂಗಿನ ಕಾಯಿಯನ್ನು ದಾಸ್ತಾನು ಮಾಡಿ, ಕನಿಷ್ಠ ಏಳು- ಎಂಟು ತಿಂಗಳು ಒಣಗಿಸಿದ ಬಳಿಕ ಕೊಬ್ಬರಿಯಾಗುತ್ತದೆ. ತೆಂಗಿನಕಾಯಿ ಸುಲಿದು, ಒಡೆದು, ಚೀಲಕ್ಕೆ ತುಂಬಿ ಮಾರುಕಟ್ಟೆಗೆ ಸಾಗಿಸಿದರೆ ಅಲ್ಲಿ ಬೆಲೆ ಕುಸಿತದ ಬಿಸಿ. ಅದೇ ಒಂದು ಸಾವಿರ ತೆಂಗಿನಕಾಯಿಗೆ ₹8,000ದಿಂದ ₹11,500 ಬೆಲೆಯಿದೆ. ಏಳೆಂಟು ತಿಂಗಳು ಕೊಬ್ಬರಿಯಾಗುವವರೆಗೆ ಕಾಯುವ ಬದಲು ತೆಂಗಿನಕಾಯಿ ಮಾರಿದರೆ ಒಳಿತು ಎಂಬ ಅಭಿಪ್ರಾಯ ರೈತರದ್ದು.

ತೆಂಗಿನ ಮರಗಳಿಗೆ ರೋಗಬಾಧೆ, ಸತತ ಬರ ಮುಂತಾದ ಕಾರಣಗಳಿಂದ ತೆಂಗಿನಕಾಯಿಯ ಗುಣಮಟ್ಟ ಕುಸಿದಿದೆ. ಸಹಜವಾಗಿಯೇ ಕೊಬ್ಬರಿಯ ಗುಣಮಟ್ಟವೂ ಕಡಿಮೆಯಾಗುತ್ತದೆ. ಕೊಬ್ಬರಿಯಲ್ಲಿ ತೇವಾಂಶ ಹೆಚ್ಚಾಗಿರುವುದು, ಗಾತ್ರದಲ್ಲಿ ಚಿಕ್ಕದಾಗಿರುವುದೂ ಕೊಬ್ಬರಿ ಬೆಲೆ ಕುಸಿತಕ್ಕೆ ಕಾರಣವಾಗಿದೆ.

ಕಳೆದ ವಾರ ಕಡೂರು ಎಪಿಎಂಸಿಯಲ್ಲಿ 13 ಟನ್ ಕೊಬ್ಬರಿ ಅವಕವಾಗಿದೆ. ಕ್ವಿಂಟಲ್‌ಗೆ ₹12,100 ಬೆಲೆ ಇತ್ತು.

ಈ ವಾರ ಕ್ವಿಂಟಲ್‌ಗೆ ₹11 ಸಾವಿರ ಬೆಲೆ ಇದೆ.

ಕಡೂರು ಪ್ರದೇಶದ ರೈತರು ಹೆಚ್ಚಾಗಿ ಕೊಬ್ಬರಿ ಮಾರಾಟಕ್ಕೆ ಅರಸೀಕೆರೆ ಮತ್ತು ತಿಪಟೂರು ಎಪಿಎಂಸಿ ಯನ್ನು ಅವಲಂಬಿಸಿದ್ದಾರೆ. ಕಡೂರು ಎಪಿಎಂಸಿಯಲ್ಲಿರುವ ಮಂಡಿ ವರ್ತಕರಿಗೆ ಅಲ್ಲಿನ ಬೆಲೆ ಆಧರಿಸಿ ಮಾರಾಟ ಮಾಡುವ ರೈತರೂ ಈ ಭಾಗದಲ್ಲಿ ಗಣನೀಯ ಸಂಖ್ಯೆಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT