ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿದ ಕಾಫಿ ಬೆಲೆ: ಕನಿಷ್ಠ ಬೆಂಬಲ ಬೆಲೆ ನಿಗದಿಗೆ ಕೂಗು

ಸವಾಲಾದ ತೋಟ ನಿರ್ವಹಣೆ
Last Updated 8 ಫೆಬ್ರುವರಿ 2021, 2:54 IST
ಅಕ್ಷರ ಗಾತ್ರ

ಕಳಸ: ರೊಬಸ್ಟಾ ಕಾಫಿ ಬೆಲೆ 25 ವರ್ಷದ ಹಿಂದಿನ ಮಟ್ಟಕ್ಕೆ ಕುಸಿದಿದ್ದು, ತೋಟಗಳ ನಿರ್ವಹಣೆ ಬಗ್ಗೆ ಬೆಳೆಗಾರರು ತೀವ್ರ ಚಿಂತಿತರಾಗಿದ್ದಾರೆ.

50 ಕೆ.ಜಿ. ರೊಬಸ್ಟಾ ಚೆರ‍್ರಿ ಚೀಲ ಒಂದಕ್ಕೆ ₹ 3,000-3,050 ಕನಿಷ್ಠ ದರ ಸಿಗುತ್ತಿದ್ದು, ಬೆಳೆಗಾರರ ಪಾಲಿಗೆ ಈ ಮೊತ್ತವು ಅತ್ಯಲ್ಪ ಎನಿಸುತ್ತಿದೆ. ವರ್ಷವಿಡೀ ಕೆಲಸ ನಡೆಯುವ ಕಾಫಿ ತೋಟದಲ್ಲಿ ಎಕರೆಗೆ ₹ 60 ಸಾವಿರ ದಿಂದ ₹ 1 ಲಕ್ಷದ ವರೆಗೆ ಖರ್ಚು ಇದೆ.

ಕನಿಷ್ಠ ಕೆಲಸ ಮಾಡಿಸಿದರೂ ಎಕರೆಗೆ 60 ಸಾವಿರ ಖರ್ಚು ಇದ್ದು, ಎಕರೆಗೆ 20 ಚೀಲ ಕಾಫಿ ಇಳುವರಿ ಬಂದರೆ ಯಾವುದೇ ಲಾಭ ಇಲ್ಲದೆ ತೋಟ ನಡೆಸಬೇಕಾಗುತ್ತದೆ. ಎಕರೆಗೆ ₹ 1 ಲಕ್ಷದವರೆಗೆ ಖರ್ಚು ಮಾಡಿ 40 ಚೀಲ ಇಳುವರಿ ತೆಗೆದರೂ ಎಕರೆಗೆ ₹ 20 ಸಾವಿರ ಕನಿಷ್ಠ ಲಾಭ ಕಾಫಿಯಲ್ಲಿ ಸಿಗುತ್ತಿದೆ.

‘ಲಾಕ್‍ಡೌನ್ ನಂತರ ತೋಟಕ್ಕೆ ಬಹಳ ನಿರೀಕ್ಷೆ ಇಟ್ಟುಕೊಂಡು ಬಂದಿದ್ದೆ. ಆದರೆ, ಕಾಫಿಯ ಕನಿಷ್ಠ ಬೆಲೆ ನೋಡಿ ದರೆ ನಮಗೆ ಇಲ್ಲಿ ಉಳಿಗಾಲ ಇಲ್ಲ ಅನಿ ಸುತ್ತಿದೆ’ ಎಂದು ಬೆಂಗಳೂರು ಬಿಟ್ಟು ಊರಿಗೆ ಮರಳಿದ್ದ ಯುವ ಬೆಳೆಗಾರ ರೊಬ್ಬರು ನಿರಾಶೆಯಿಂದ ಹೇಳುತ್ತಾರೆ.

ಈ ವರ್ಷ ಜನವರಿಯಲ್ಲಿ ಮಳೆ ಸುರಿದ ಪರಿಣಾಮವಾಗಿ ಕಾಫಿ ಕೊಯ್ಲು ಕೂಡ ವಿಳಂಬವಾಯಿತು. ಜೊತೆಗೆ ಕಾರ್ಮಿಕರ ತೀವ್ರ ಕೊರತೆ ಕಾರಣಕ್ಕೆ ಕೊಯ್ಲು ನಿಧಾನವಾಗಿ ಸಾಗಿದೆ. ಒಂದು ಕೆಜಿ ಹಣ್ಣು ಕೊಯ್ಯಲು ಕಾರ್ಮಿಕರು ₹ 4ರಿಂದ ₹ 4.5 ಬೇಡಿಕೆ ಇಡುತ್ತಿದ್ದಾರೆ. ಒಂದು ಮೂಟೆ ಕಾಫಿ ಕೊಯ್ದು ಒಣಗಿಸಿ ಮೂಟೆ ಮಾಡಲು ₹ 700-800 ಖರ್ಚು ಬರುತ್ತಿದೆ.

‘ತೋಟದಲ್ಲಿ ಒಳ್ಳೆ ಬೆಳೆ ಬಂದರೂ ಈ ವರ್ಷ ಬೆಲೆ ಕುಸಿದು ನಮಗೆ ದುರಾದೃಷ್ಟ ಅಂಟಿತು. ತೋಟದ ಕೆಲಸ ಮಾಡಿಸುವುದು ಹೇಗೆ ಎಂಬ ಚಿಂತೆಯೇ ಕಾಡುತ್ತಿದೆ. ಕಾಳುಮೆಣಸು ಕೂಡ ರೋಗಕ್ಕೆ ತುತ್ತಾಗಿ ಉಪ ಆದಾಯವೂ ಇಲ್ಲವಾಗಿದೆ. ತೋಟದಲ್ಲಿ ಅಡಿಕೆ ಇದ್ದವರು ಮಾತ್ರ ತೋಟ ನಡೆಸಬಹುದು’ ಎಂದು ಬೆಳೆಗಾರರು ಬೇಸರದಿಂದ ಹೇಳುತ್ತಾರೆ.

ಬ್ರೆಜಿಲ್‍ನಲ್ಲಿ ಅರೇಬಿಕಾ ಕಾಫಿಗೆ ಪೂರಕ ವಾತಾವರಣ ಇದ್ದು ಬಂಪರ್ ಬೆಳೆಯ ನಿರೀಕ್ಷೆ ಜಾಗತಿಕ ಕಾಫಿ ಬೆಲೆ ಕುಸಿತಕ್ಕೆ ಕಾರಣ ಎನ್ನಲಾಗುತ್ತಿದೆ. ಗರಿಷ್ಠ ಪ್ರಮಾಣದಲ್ಲಿ ರೊಬಸ್ಟಾ ಕಾಫಿ ಬೆಳೆಯುವ ವಿಯೆಟ್ನಾಂನಲ್ಲಿ ಈ ಬಾರಿ ಶೇ 10ರಷ್ಟು ಕಡಿಮೆ ರೊಬಸ್ಟಾ ಇಳುವರಿ ಎಂಬ ಮಾಹಿತಿ ಇದ್ದರೂ ಬ್ರೆಜಿಲ್‍ನ ನಿರೀಕ್ಷೆ ಮೀರಿದ ಬೆಳೆ ಬೆಲೆಯನ್ನು ಪಾತಾಳಕ್ಕೆ ತಳ್ಳುತ್ತಿದೆ.

ಅಡಿಕೆ, ಮೆಣಸಿಗೆ ಹಲವಾರು ರೋಗಗಳು ತಗುಲಿದ ನಂತರ ಬೆಳೆಗಾರರ ಮಟ್ಟಿಗೆ ಆದಾಯದ ಖಾತ್ರಿ ಮೂಡಿಸಿರುವ ಏಕೈಕ ಬೆಳೆ ಕಾಫಿ. ಆದರೆ, ಈಗ ಕುಸಿದಿರುವ ಬೆಲೆ ಅದನ್ನು ನಂಬಿರುವ ಎಲ್ಲ ಆರ್ಥಿಕ ವ್ಯವಹಾರಕ್ಕೂ ಮಗ್ಗುಲ ಮುಳ್ಳೇ ಆಗಿದೆ.
ಕೋಟ್ಯಂತರ ರೂಪಾಯಿ ವಿದೇಶಿ ವಿನಿಮಯ ತಂದು ಕೊಡುವ ಕಾಫಿ ಬೆಳೆಗಾರರಿಗೆ ನೆರವಾಗುವಂತೆ ಗೊಬ್ಬರದ ಸಹಾಯಧನ ಹೆಚ್ಚಿಸಬೇಕು. ಕಾಫಿ ಖರೀದಿಗೂ ಕನಿಷ್ಠ ಬೆಂಬಲ ಬೆಲೆ ನಿಗದಿ ಪಡಿಸಬೇಕು ಎಂಬ ಕೂಗು ಕೇಳಿಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT