ಬುಧವಾರ, ಅಕ್ಟೋಬರ್ 23, 2019
27 °C

ಕಾಂಗ್ರೆಸ್ ಕಾಲ್ನಡಿಗೆ ಜಾಥಾ

Published:
Updated:
Prajavani

ಚಿಕ್ಕಮಗಳೂರು:ಮಹಾತ್ಮ ಗಾಂಧೀಜಿ 150ನೇ ಜನ್ಮದಿನೋತ್ಸವದ ನಿಮಿತ್ತ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ‘ಕಾಂಗ್ರೆಸ್ ನಡಿಗೆ, ಗಾಂಧೀಜಿ ಆದರ್ಶದ ಕಡೆಗೆ’ ಘೋಷ ವಾಕ್ಯದೊಂದಿಗೆ ಬುಧವಾರ ಕಾಲ್ನಡಿಗೆ ಜಾಥಾ ನಡೆಸಲಾಯಿತು.

ನಗರದ ತಾಲ್ಲೂಕು ಕಚೇರಿ ಆವರಣದಿಂದ ಜಿಲ್ಲಾ ನ್ಯಾಯಾಲಯ ಕಟ್ಟಡದ ಎದುರಿನ ಮಹಾತ್ಮ ಗಾಂಧಿ ಉದ್ಯಾನದವರೆಗೆ ಕಾರ್ಯಕರ್ತರು ಕಾಲ್ನಡಿಗೆ ಜಾಥಾ ನಡೆಸಿದರು. ಕಾರ್ಯಕರ್ತರು ಶ್ವೇತ ವಸ್ತ್ರಧಾರಿಗಳಾಗಿ ಜಾಥಾದಲ್ಲಿ ಪಾಲ್ಗೊಂಡಿದ್ದರು.
ಜಿಲ್ಲಾಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಡಿ.ಎಲ್.ವಿಜಯಕುಮಾರ್ ಮಾತನಾಡಿ, ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ವಿಭಿನ್ನ ರೀತಿಯಲ್ಲಿ ದೇಶಕ್ಕೆ ಸೇವೆ ಸಲ್ಲಿಸಿದರು. ಗಾಂಧೀಜೀ ಅವರು ಸಮಾನತೆ, ಸ್ವಾತಂತ್ರ್ಯಕ್ಕಾಗಿ ಅಹಿಂಸಾ ಮಾರ್ಗದಲ್ಲಿ ಹೋರಾಟ ನಡೆಸಿದರು. ಅವರ ಜೀವನವೇ ಒಂದು ಸಂದೇಶವಾಗಿದೆ. ಅವರ ಬಗ್ಗೆ ಯುವಪೀಳಿಗೆಗೆ ತಿಳಿಸುವ ಅಗತ್ಯ ಇದೆ ಎಂದರು.

ಗಾಂಧೀ ಹತ್ಯೆ ಮಾಡಿದ ಗೂಡ್ಸೆಯನ್ನು ವೈಭವೀಕರಿಸುವ ಕಾರ್ಯ ಇತ್ತೀಚಿಗೆ ನಡೆಯುತ್ತಿದೆ. ಅವರನ್ನು ಪೂಜ್ಯ ಭಾವದಿಂದ ನೋಡಲಾಗುತ್ತಿದೆ. ರಸ್ತೆಗಳಿಗೆ ಗೂಡ್ಸೆ ಹೆಸರು ಇಡುವ ಮೂಲಕ ಗಾಂಧೀಜಿ ತತ್ವಗಳಿಗೆ ಅಪಚಾರ ಮಾಡಲಾಗುತ್ತಿದೆ. ಅದು ಖಂಡನೀಯವಾದುದು. ಅದರ ವಿರುದ್ಧ ಹೋರಾಟ ನಡೆಸುವ ಅಗತ್ಯ ಇದೆ ಎಂದರು.

ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಪ್ರಧಾನಿಯಾಗಿ ‘ಜೈ ಜವಾನ್ ಜೈ ಕಿಸಾನ್’ ಘೋಷ ವಾಕ್ಯದ ಮೂಲಕ ರೈತರಿಗೆ ಸೈನಿಕರಿಗೆ ಬೆನ್ನೆಲುಬಾಗಿ ನಿಂತಿದ್ದರು. ಜನರು ಮಹಾತ್ಮರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು. ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಅತಿಕ್ ಖೈಸರ್ ಮಾತನಾಡಿ, ಮಹಾತ್ಮ ಗಾಂಧಿ ಒಬ್ಬ ಶಾಂತಿ ಧೂತ. ಅವರ ಆದರ್ಶಗಳನ್ನು ರಾಜಕೀಯ ವ್ಯಕ್ತಿಗಳು ಅಳವಡಿಸಿಕೊಳ್ಳಬೇಕು. ಅವರಂತ ವ್ಯಕ್ತಿಗಳು ಮತ್ತೊಮ್ಮೆ ಜನ್ಮ ತಾಳಬೇಕು ಎಂದರು.

ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ವಿಭಾಗದ ಅಧ್ಯಕ್ಷ ಹೂವಪ್ಪ ಮಾತನಾಡಿ, ದೇಶದಲ್ಲಿ ಬಡತನ, ನಿರುದ್ಯೋಗ ಸಮಸ್ಯೆ ಬಗೆಹರಿದಿಲ್ಲ. ದಲಿತರ ಮೇಲಿನ ಶೋಷಣೆಗಳು ನಿಂತಿಲ್ಲ ಎಂದು ವಿಷಾಧಿಸಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಸಿ.ಶಿವಾನಂದಸ್ವಾಮಿ, ಮುಖಂಡರಾದ ಎ.ಎನ್.ಮಹೇಶ್, ಗಾಯತ್ರಿ ಶಾಂತೇಗೌಡ, ರೇಖಾಹುಲಿಯಪ್ಪಗೌಡ, ಎಚ್.ಪಿ.ಮಂಜೇಗೌಡ, ಶಿವಕುಮಾರ್, ರೂಬೆನ್ ಮೊಸೆಸ್ ಇದ್ದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)