ಶನಿವಾರ, ಜುಲೈ 24, 2021
23 °C

ಕೆರೆಕಟ್ಟೆಯಲ್ಲಿ ನಕ್ಸಲ್ ನಿಗ್ರಹ ದಳದ 7 ಸಿಬ್ಬಂದಿಗೆ ಕೋವಿಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶೃಂಗೇರಿ: ಕೆರೆಕಟ್ಟೆಯ ನಕ್ಸಲ್ ನಿಗ್ರಹ ದಳದ ಕ್ಯಾಂಪ್‍ನಲ್ಲಿ ಭಾನುವಾರ 7 ಸಿಬ್ಬಂದಿಗೆ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಯ ಒಂದೂವರೆ ವರ್ಷದ ಮಗುವಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.

‘23, 25 ವರ್ಷದ ಮೂರು ಮಂದಿ, 27, 30, 44 ವರ್ಷದ ಪುರುಷನಿಗೆ ಕೋವಿಡ್ ದೃಢಪಟ್ಟಿದೆ. ಮೂರು ದಿನಗಳ ಹಿಂದೆ ಉತ್ತರ ಕನ್ನಡದಿಂದ ಬಂದು ನಕ್ಸಲ್ ನಿಗ್ರಹ ದಳದ ಸೇರಿಕೊಂಡಿದ್ದ ಚಾಲಕ ಮತ್ತು ಸಿಬ್ಬಂದಿಯಿಂದ ವೈರಸ್ ಹರಡಿದೆ. ಎ.ಎನ್.ಎಫ್ ಸಿಬ್ಬಂದಿಯ ಸಂಪರ್ಕದಿಂದ ಮಗುವಿಗೂ ಸೋಂಕು ಹರಡಿರುವ ಸಾಧ್ಯತೆಯಿದೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಟಿ.ಡಿ.ಮಂಜುನಾಥ್ ತಿಳಿಸಿದ್ದಾರೆ.

ಕೆರೆಕಟ್ಟೆಯಲ್ಲಿ ಸರ್ಕಾರಿ ಆಸ್ಪತ್ರೆಯವರು ರ‍್ಯಾಪಿಡ್ ಟೆಸ್ಟ್ ಮಾಡಿದ್ದಾಗ ಸೋಂಕು ಇರುವುದು ಪತ್ತೆಯಾಗಿದೆ. ಕೂಡಲೇ ಇವರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಲಾಗಿದೆ. ಎ.ಎನ್.ಎಫ್ ಕ್ಯಾಂಪಿನ ಎಲ್ಲ ಸಿಬ್ಬಂದಿಯ ಜತೆ ಸಂಪರ್ಕಕ್ಕೆ ಬಂದವರನ್ನು ಆರೋಗ್ಯ ತಪಾಸಣೆ ನಡೆಸಲಾಗಿದೆ.

ಗ್ರಾಮದಲ್ಲಿ ಆತಂಕ: ‘ಕೆರೆಕಟ್ಟೆಗೆ ಹೊರ ಜಿಲ್ಲೆಗಳಿಂದ ಬರುವ ನಕ್ಸಲ್ ನಿಗ್ರಹ ದಳದ ಸಿಬ್ಬಂದಿ ವಿರಾಮ ವೇಳೆಯಲ್ಲಿ ಸ್ಥಳೀಯ ಅಂಗಡಿ ಮತ್ತು ಹೋಟೆಲ್‍ಗೆ ಹೋಗಿಬರುವುದು ಸಾಮಾನ್ಯವಾಗಿದೆ. ಇದರಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ’ ಎಂದು ಸ್ಥಳೀಯರಾದ ಚಂದ್ರಶೇಖರ್ ಶೆಟ್ಟಿ ಮತ್ತು ಶೇಷಪ್ಪ ಹೇಳಿದ್ದಾರೆ.

ರೊಟೇಷನ್‌ ಪದ್ಧತಿ ಕೈಬಿಡಿ: ‘ಉತ್ತರ ಕನ್ನಡದಿಂದ ಬಂದ ಎಎನ್‌ಎಫ್‌ ಸಿಬ್ಬಂದಿಯಿಂದ ಸೋಂಕು ಹರಡಿರುವ ಸಾಧ್ಯತೆಯಿದೆ. ಹೀಗಾಗಿ, 15 ದಿನಗಳಿಗೊಮ್ಮೆ ಎಎನ್‌ಎಫ್‌ ಸಿಬ್ಬಂದಿಯ ರೊಟೇಷನ್‌ (ಬದಲು ಮಾಡುವ) ಪದ್ಧತಿಯನ್ನು ಕೈಬಿಡಬೇಕು. ಸೋಂಕಿತ ಸಿಬ್ಬಂದಿಯ ಸಂಪರ್ಕದಲ್ಲಿರುವ ಸ್ಥಳೀಯರ ಆರೋಗ್ಯ ತಪಾಸಣೆ ಮಾಡಿ, ಗ್ರಾಮೀಣ ಪ್ರದೇಶವನ್ನು ಸೋಂಕು ರಹಿತ ಪ್ರದೇಶವನ್ನಾಗಿ ಮಾಡಿಕೊಡಬೇಕು’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆರೆಕಟ್ಟೆ ಅರುಣ್‍ಕುಮಾರ್ ಒತ್ತಾಯಿಸಿದ್ದಾರೆ.

ಠಾಣೆ ವಾಪಸ್‌ ಪಡೆಯಿರಿ: ‘ತಾಲ್ಲೂಕಿನಲ್ಲಿ ನಕ್ಸಲರ ಅಸ್ತಿತ್ವವೇ ಇಲ್ಲವಾಗಿರುವುದರಿಂದ ನಕ್ಸಲ್ ನಿಗ್ರಹ ದಳದ ಅವಶ್ಯಕತೆಯೇ ಇಲ್ಲ. ಕೂಡಲೇ ಈ ಠಾಣೆಗಳನ್ನು ಸರ್ಕಾರ ವಾಪಸ್‌ ಪಡೆಯಬೇಕು. ಸೋಂಕು ಕಾಣಿಸಿಕೊಂಡ ಪ್ರದೇಶವನ್ನು ಸೀಲ್‍ಡೌನ್ ಮಾಡಬೇಕು’ ಎಂದು ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ನೆಮ್ಮಾರ್ ದಿನೇಶ್ ಹೆಗ್ಡೆ ಒತ್ತಾಯಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು