ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ದಿನಕ್ಕೆ 1 ಸಾವಿರ ಮಾದರಿ ಪರೀಕ್ಷೆ ಸಾಮರ್ಥ್ಯ

₹ 1.48 ಕೋಟಿ ವೆಚ್ಚದ ಕೋವಿಡ್‌ ಪ್ರಯೋಗಾಲಯಕ್ಕೆ ಚಾಲನೆ
Last Updated 1 ಆಗಸ್ಟ್ 2020, 16:06 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಕೊರೊನಾ ವೈರಾಣು ಪತ್ತೆ ನಿಟ್ಟಿನಲ್ಲಿ ಮಾದರಿ (ಗಂಟಲು, ಮೂಗಿನ ದ್ರವ) ಪರೀಕ್ಷೆಗೆ ಸ್ಥಾಪಿಸಿರುವ ಕೋವಿಡ್‌ ಪ್ರಯೋಗಾಲಯಕ್ಕೆ ಶನಿವಾರ ಚಾಲನೆ ನೀಡಲಾಯಿತು.

ವಿಧಾನ ಪರಿಷತ್ತಿನ ಉಪಸಭಾಪತಿ ಎಸ್‌.ಎಲ್‌.ಧರ್ಮೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಉದ್ಘಾಟನೆ ನೆರವೇರಿಸಿದರು.

₹ 1.48 ಕೋಟಿ ವೆಚ್ಚದಲ್ಲಿ ಪ್ರಯೋಗಾಲಯ ಸಜ್ಜುಗೊಳಿಸಲಾಗಿದೆ. ಪ್ರಯೋಗಾಲಯದಲ್ಲಿ ಕಾರ್ಯನಿರ್ವಹಿಸಲು ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಹಾಸನ ವೈದ್ಯಕೀಯವಿಜ್ಞಾನ ಕಾಲೇಜಿನ ಮೈಕ್ರೊಬಯಾಲಜಿಸ್ಟ್‌ ಒಬ್ಬರನ್ನು ಪ್ರಯೋಗಾಲಯಕ್ಕೆ ನಿಯೋಜಿಸಲಾಗಿದೆ. ದಿನಕ್ಕೆ 600ರಿಂದ 1000 ಮಾದರಿಗಳನ್ನು ಇಲ್ಲಿ ಪರೀಕ್ಷಿಸಬಹುದಾಗಿದೆ.

ಯುರೋಪಿಯನ್‌ ಮಾದರಿಯ ಬಯೋಸೆಪ್ಟಿ ಕ್ಯಾಬಿನೆಟ್‌, ರಿಯಲ್‌ ಟೈಮ್‌ ಆರ್‌ಟಿಪಿಸಿಆರ್‌ (ರಿವರ್ಸ್‌ ಟ್ರಾನ್ಸ್‌ಸ್ಕ್ರಿಪ್ಶನ್‌ ಪಾಲಿಮರೇಸ್‌ ಚೈನ್‌ ರಿಯಾಕ್ಷನ್‌) ಯಂತ್ರ, ವರ್ಟಿಕಲ್‌ ಆಟೋಕ್ಲೇವ್‌, ರೆಫ್ರಿಜರೇಟೆಡ್‌ ಹೈಸ್ಪೀಡ್‌ ಸೆಂಟ್ರಿ ಫ್ಯೂಜ್‌, ಜಲಶುದ್ಧೀಕರಣ ಘಟಕ ಹಾಗೂ –80 ಡಿಗ್ರಿ ವರ್ಟಿಕಲ್‌ ಅಲ್ಟ್ರಾ ಲೋ ಫ್ರೀಜರ್‌ ಅಳವಡಿಸಲಾಗಿದೆ.

ವಿಧಾನ ಪರಿಷತ್ತಿನ ಸದಸ್ಯ ಎಸ್.ಎಲ್.ಧರ್ಮೇಗೌಡ, ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತ ಕೃಷ್ಣಪ್ಪ, ಉಪಾಧ್ಯಕ್ಷ ಸೋಮಶೇಖರ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶುಭಾ ಸತ್ಯಮೂರ್ತಿ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲಾ ಪಂಚಾಯಿತಿ ಸಿಇಒ ಎಸ್. ಪೂವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಉಮೇಶ್, ಜಿಲ್ಲಾ ಶಸ್ತ್ರಚಿಕತ್ಸಕ ಡಾ.ಸಿ.ಮೋಹನಕುಮಾರ್‌ ಇದ್ದರು.

‘ಮಾದರಿ ಪರೀಕ್ಷೆ; ತ್ವರಿತವಾಗಿ ಫಲಿತಾಂಶ’
‘ಕೋವಿಡ್‌ ಪ್ರಯೋಗಾಲಯದಲ್ಲಿ ನಿತ್ಯ ಎರಡು ಪಾಳಿಯಲ್ಲಿ ಕಾರ್ಯನಿರ್ವಹಿಸುವಷ್ಟು ಸಿಬ್ಬಂದಿ ನೇಮಿಸಲಾಗಿದೆ. ಮಾದರಿಗಳ ಫಲಿತಾಂಶ ವಿಳಂಬವಾಗಲ್ಲ. ನಾಲ್ಕೈದು ಗಂಟೆಯೊಳಗೆ ಫಲಿತಾಂಶ ಲಭಿಸುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಾದರಿಗಳನ್ನು ಪರೀಕ್ಷೆಗೆ ಶಿವಮೊಗ್ಗ, ಹಾಸನ, ಬೆಂಗಳೂರಿಗೆ ಕಳಿಸುವ ಇರಾದೆ ಈಗ ಇಲ್ಲ. ಉಪಕರಣಗಳು ಇಂಗ್ಲೆಂಡ್‌ನಿಂದ ಆಮದಾಗುವುದು ತಡವಾಗಿದ್ದರಿಂದ ಪ್ರಯೋಗಾಲಯ ಆರಂಭ 15 ದಿನ ವಿಳಂಬವಾಯಿತು’ ಎಂದರು

‘ಗೌರಿ ಕಾಲುವೆಯ ನಫಿಯಾಗೆ ಚಿಕಿತ್ಸೆ ನೀಡುವ ವಿಚಾರದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಲೋಪ ಆಗಿಲ್ಲ. ಕೋವಿಡ್‌ ಕೇಂದ್ರಗಳಲ್ಲಿ ಇರುವವರಿಗೆ ಆಹಾರ ಪೂರೈಕೆಯಲ್ಲಿ ಸಮಸ್ಯೆ ಇಲ್ಲ’ ಎಂದು ಪ್ರತಿಕ್ರಿಯಿಸಿದರು.

‘ಚಿತಾಗಾರದಲ್ಲಿ ಅಂತ್ಯಕ್ರಿಯೆಗೆ ನಿರ್ದಿಷ್ಟ ಶುಲ್ಕ ಪಡೆಯುತ್ತಾರೆ. ಕೋವಿಡ್‌ ಸಾವು ಪ್ರಕರಣಗಳಲ್ಲಿ, ಶುಲ್ಕ ಭರಿಸಲು ಸಾಧ್ಯವಾಗದ ಬಡಕುಟುಂಬ ಇದ್ದರೆ ಜಿಲ್ಲಾಡಳಿತ ಅದನ್ನು ಭರಿಸುತ್ತದೆ. ಗೌರವಯುತ ಶವಸಂಸ್ಕಾರ ನಿಟ್ಟಿನಲ್ಲಿ ಈಗಾಗಲೇ ತಂಡವನ್ನು ರಚಿಸಿದ್ದೇವೆ’ ಎಂದು ಉತ್ತರಿಸಿದರು.

‘ಯುದ್ಧ ಸಂದರ್ಭದಲ್ಲಿ ಸೈನಿಕರು ಚಳವಳಿ ಕೂರುವುದು ಸರಿಯಲ್ಲ. ಹಾಗೆಯೇ, ಆರೋಗ್ಯ ವಾರಿಯರ್ಸ್‌ ಈ ಸಂದರ್ಭದಲ್ಲಿ ಚಳವಳಿ ಮಾಡಿದರೆ ಸಮಸ್ಯೆಯಾಗುತ್ತದೆ’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT