ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು | ಕೋವಿಡ್‌ ಎದುರಿಸಲು ಆಸ್ಪತ್ರೆಗಳು ಸನ್ನದ್ಧ

ಜಿಲ್ಲಾಸ್ಪತ್ರೆ, ತಾಲ್ಲೂಕು ಆಸ್ಪತ್ರೆಗಳಲ್ಲಿ ಸಕಲ ಸಿದ್ಧತೆ
ವಿಜಯಕುಮಾರ್ ಎಸ್.ಕೆ.
Published 25 ಡಿಸೆಂಬರ್ 2023, 8:03 IST
Last Updated 25 ಡಿಸೆಂಬರ್ 2023, 8:03 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಕೋವಿಡ್‌ ಹೊಸ ತಳಿ ಜೆಎನ್‌–1 ಸೋಂಕು ವೇಗವಾಗಿ ಹರಡುತ್ತಿದ್ದು, ಇದರ ವಿರುದ್ಧ ಹೋರಾಡಲು ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಸರ್ವ ಸನ್ನದ್ಧವಾಗಿವೆ.

ಅರಳುಗುಪ್ಪೆ ಮಲ್ಲೇಗೌಡ ಜಿಲ್ಲಾಸ್ಪತ್ರೆ ಸೇರಿ ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲೂ ವಿಶೇಷ ವ್ಯವಸ್ಥೆ ಮಾಡಿಕೊಂಡಿವೆ. ಕೆಲವು ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್‌ಗಳನ್ನು ತೆರೆಯಲಾಗಿದೆ. ಆಮ್ಲಜನಕ, ವೆಂಟಿಲೇಟರ್‌ ವ್ಯವಸ್ಥೆಗಳನ್ನು ಸರಿಪಡಿಸಿಕೊಳ್ಳಲಾಗಿದೆ.

ಜಿಲ್ಲಾಸ್ಪತ್ರೆಯಲ್ಲಿ 6 ಸಾವಿರ ಲೀಟರ್ ಸಾಮರ್ಥ್ಯದ ಲಿಕ್ವಿಡ್‌ ಮೆಡಿಕಲ್ ಆಮ್ಲಜನಕ ಟ್ಯಾಂಕ್ ಇದೆ. 220 ಹಾಸಿಗೆಗಳಿಗೆ ಆಮ್ಲಜನಕ ಸಂಪರ್ಕ ಕಲ್ಪಿಸಲಾಗಿದೆ. ಪ್ರತ್ಯೇಕ ಆಮ್ಲಜನಕ ಉತ್ಪಾದನಾ ಘಟಕ ಕೂಡ ಇದೆ. 43 ವೆಂಟಿಲೇಟರ್‌ಗಳಿದ್ದು, ಐಸಿಯು ಕೂಡ ಸನ್ನದ್ಧವಾಗಿದೆ. ಈ ಬಾರಿ ಕೋವಿಡ್‌ಗೆ ಪ್ರತ್ಯೇಕ ವಾರ್ಡ್‌ಗಳನ್ನು ನಿರ್ಮಿಸುವ ಅಗತ್ಯ ಕಾಣಿಸುತ್ತಿಲ್ಲ ಎನ್ನುತ್ತಾರೆ ಜಿಲ್ಲಾಸ್ಪತ್ರೆ ವೈದ್ಯರು.

ಬೇರೆ ಜ್ವರದ ರೀತಿಯಲ್ಲೇ ಕೋವಿಡ್‌ಗೂ ಚಿಕಿತ್ಸೆ ನೀಡಲಾಗುತ್ತದೆ. ಕೊರೊನಾ ಉಪ ತಳಿಗಳು ಯಾವುವು ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ. ಜನ ಭಯಪಡುವ ಅಗತ್ಯ ಇಲ್ಲ, ಮುನ್ನೆಚ್ಚರಿಕೆ ವಹಿಸುವುದು ಸೂಕ್ತ ಎಂದು ಹೇಳುತ್ತಾರೆ.

ಜಿಲ್ಲೆಯಲ್ಲಿ 103 ಸರ್ಕಾರಿ ಆಸ್ಪತ್ರೆ, 6 ಖಾಸಗಿ ಆಸ್ಪತ್ರೆಗಳಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ 490 ಹಾಸಿಗೆಗಳಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ 202 ಹಾಸಿಗೆಗಳಿವೆ. ಒಟ್ಟು 87 ವೆಂಟಿಲೇಟರ್‌ಗಳಿದ್ದು, 907 ಜಂಬೊ ಸಿಲಿಂಡರ್, 10 ಲೀಟರ್ ಸಾಮರ್ಥ್ಯದ 210 ಸಿಲಿಂಡರ್, ಏಳು ಆಮ್ಲಜನಕ ಘಟಕ ಸೇರಿ ಎಲ್ಲಾ ರೀತಿಯ ಉಪಕರಣಗಳು ಲಭ್ಯ ಇವೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾಹಿತಿ ನೀಡಿದರು.

ಪೂರಕ ಮಾಹಿತಿ: ಬಾಲು ಮಚ್ಚೇರಿ, ರವಿಕುಮಾರ್ ಶೆಟ್ಟಿಹಡ್ಲು, ಕೆ.ವಿ.ನಾಗರಾಜ್, ಎಚ್.ಎಂ.ರಾಜಶೇಖರಯ್ಯ, ಕೆ.ಎನ್.ರಾಘವೇಂದ್ರ.

ಮೂಡಿಗೆರೆಯ ಎಂಜಿಎಂ ಆಸ್ಪತ್ರೆಯಲ್ಲಿ ಸ್ಥಾಪನೆಯಾಗಿ ಎರಡು ವರ್ಷ ಕಳೆದರೂ ಹಸ್ತಾಂತರವಾಗದ ಆಮ್ಲಜನಕ ಘಟಕ
ಮೂಡಿಗೆರೆಯ ಎಂಜಿಎಂ ಆಸ್ಪತ್ರೆಯಲ್ಲಿ ಸ್ಥಾಪನೆಯಾಗಿ ಎರಡು ವರ್ಷ ಕಳೆದರೂ ಹಸ್ತಾಂತರವಾಗದ ಆಮ್ಲಜನಕ ಘಟಕ
ಶೃಂಗೇರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿರ್ಮಾಣವಾಗಿರುವ ಕೋವಿಡ್‌ ವಾರ್ಡ್‌
ಶೃಂಗೇರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿರ್ಮಾಣವಾಗಿರುವ ಕೋವಿಡ್‌ ವಾರ್ಡ್‌
ನರಸಿಂಹರಾಜಪುರದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಸಜ್ಜುಗೊಳಿಸಿರುವ ಐಸಿಯು ಘಟಕ
ನರಸಿಂಹರಾಜಪುರದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಸಜ್ಜುಗೊಳಿಸಿರುವ ಐಸಿಯು ಘಟಕ

ಪ್ರತ್ಯೇಕ ಆಮ್ಲಜನಕ ಘಟಕ ‌ಕಡೂರು: ಕೋವಿಡ್ ಪ್ರಕರಣಗಳು ಹೆಚ್ಚಾದರೆ ಸೋಂಕಿತರಿಗೆ ಚಿಕಿತ್ಸೆ ನೀಡಲು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಸನ್ನದ್ಧವಾಗಿದೆ. ಶೀತ ಕೆಮ್ಮು ಜ್ವರ ಮತ್ತು ಕೊರೊನಾ ಲಕ್ಷಣಗಳಿರುವ ಯಾವುದೇ ಪ್ರಕರಣ ಕಂಡುಬಂದರೆ ಇಎಲ್ಐ (ಇನ್‌ಫ್ಲುಯೆಂಜಾ ಇಲ್‌ನೆಸ್‌) ಅವುಗಳಿಗೆ ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆ ಮಾಡಲಾಗುತ್ತಿದೆ. ಆಸ್ಪತ್ರೆಯಲ್ಲಿ ಸದ್ಯ ಪ್ರತ್ಯೇಕ ಕೋವಿಡ್ ವಾರ್ಡ್ ತೆರೆದಿಲ್ಲ. ಐಸಿಯುನಲ್ಲಿ ಈಗ ಹಲವರು ಚಿಕಿತ್ಸೆ ಪಡೆಯುತ್ತಿರುವುದರಿಂದ ಅಗತ್ಯ ಸಂದರ್ಭದಲ್ಲಿ ತುರ್ತಾಗಿ ಕೋವಿಡ್ ವಾರ್ಡ್ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಆಸ್ಪತ್ರೆಯಲ್ಲಿ ಸದ್ಯ 135 ಜಂಬೊ ಸಿಲಿಂಡರ್‌ 9 ವೆಂಟಿಲೇಟರ್‌ಗಳಿವೆ. 40 ಆಕ್ಸಿಜನ್ ಕಾನ್ಸಂಟ್ರೇಟರ್‌ ಸನ್ನದ್ಧ ಸ್ಥಿತಿಯಲ್ಲಿವೆ. ಒಂದು ನಿಮಿಷಕ್ಕೆ 500 ಲೀಟರ್ ಆಮ್ಲಜನಕ ತಯಾರಿಸುವ ಘಟಕವೂ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. 6 ಕಿಲೋ ಲೀಟರ್ ಸಾಮರ್ಥ್ಯದ ದ್ರವೀಕೃತ ಆಮ್ಲಜನಕ ಘಟಕದ (ಎಲ್‌ಎಂಒ) ಕಾರ್ಯ ಪ್ರಗತಿಯಲ್ಲಿದೆ. ನೂರು ಹಾಸಿಗೆಗಳಿಗೂ ಆಮ್ಲಜನಕ ಪೂರೈಸಲು ಕೊಳವೆ ಅಳವಡಿಸಲಾಗಿದೆ. ಪಿಪಿಇ ಕಿಟ್‌ ಮಾರ್ಗಸೂಚಿಯಲ್ಲಿರುವ ಔಷಧಿಗಳ ದಾಸ್ತಾನು ಮಾಡಲಾಗಿದೆ. ಮೂರು ಆಂಬುಲೆನ್ಸ್‌ಗಳು ಸಿದ್ಧವಾಗಿವೆ ಎಂದು ಆಸ್ಪತ್ರೆ ಆಡಳಿತಾಧಿಕಾರಿ ಡಾ.ಉಮೇಶ್‌ ಮಾಹಿತಿ ನೀಡಿದರು. ಅಯ್ಯಪ್ಪ ಮಾಲಾಧಾರಿಗಳು ಎಚ್ಚರಿಕೆ ವಹಿಸಲಿ: ತಾಲ್ಲೂಕಿನಿಂದ ಸುಮಾರು ಮೂರು ಸಾವಿರ ಮಂದಿ ಅಯ್ಯಪ್ಪ ಮಾಲಾಧಾರಿಗಳು ಪ್ರತಿ ವರ್ಷ ಶಬರಿಮಲೆಗೆ ತೆರಳುತ್ತಾರೆ. ಈಗಾಗಲೇ ಹಲವು ಮಂದಿ ತೆರಳಿದ್ದಾರೆ. ಅವರೂ ಕೇರಳಕ್ಕೆ ಹೋಗುವ ಮುನ್ನ ಎಚ್ಚರಿಕೆ ತೆಗೆದುಕೊಳ್ಳಬೇಕು. ವಾಪಸ್‌ ಬರುವಾಗ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ತಾಲ್ಲೂಕಿನಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು ಅಂಥ ಸಂದರ್ಭದಲ್ಲೂ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವುದು ಉತ್ತಮ ಎಂಬುದು ಸಾರ್ವಜನಿಕರ ಮನವಿ.

ಎರಡು ವರ್ಷ ಆದರೂ ಹಸ್ತಾಂತರವಾಗದ ಆಮ್ಲಜನಕ ಘಟಕ ಮೂಡಿಗೆರೆ: ಪಟ್ಟಣದ ಮಹಾತ್ಮಗಾಂಧಿ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿರ್ಮಿಸಿರುವ ಆಮ್ಲಜನಕ ಘಟಕ ಎರಡು ವರ್ಷವಾದರೂ ಹಸ್ತಾಂತರವಾಗದೆ ಬಳಕೆಯಿಂದ ಹೊರಗುಳಿಯುವಂತಾಗಿದೆ. ಕಳೆದ ಕೋವಿಡ್ ಉಲ್ಬಣದ ವೇಳೆ ಆಮ್ಲಜನಕದ ಸಮಸ್ಯೆ ಎದುರಾಗದಂತೆ ತಾಲ್ಲೂಕು ಆಸ್ಪತ್ರೆಯಲ್ಲಿ ಆಮ್ಲಜನಕ ಘಟಕವನ್ನು ನಿರ್ಮಿಸಲಾಗಿತ್ತು. ಆದರೆ ನಿರ್ಮಾಣಗೊಂಡು ಎರಡು ವರ್ಷ ಕಳೆದರೂ ಇದುವರೆಗೂ ಹಸ್ತಾಂತರವಾಗಿಲ್ಲ. ತಾಲ್ಲೂಕಿನಲ್ಲಿ ಕೋವಿಡ್ ಉಲ್ಬಣಗೊಂಡರೆ ಅದನ್ನು ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರತಿ ದಿನವೂ ಕನಿಷ್ಠ 15 ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು ಇದುವರೆಗೂ ಕೋವಿಡ್ ಪ್ರಕರಣ ಕಂಡು ಬರದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಪ್ರಾರಂಭಗೊಂಡಿಲ್ಲ. ಕೋವಿಡ್ ವಿಭಾಗಕ್ಕೆ ಫಿಜಿಶಿಯನ್ ಡಾ. ಮಾನಸ ಅವರನ್ನು ನಿಯೋಜಿಸಲಾಗಿದ್ದು ಪ್ರಕರಣ ಕಂಡು ಬಂದರೆ ವಿಶೇಷ ವಾರ್ಡ್‌ಗಳನ್ನು ಕೋವಿಡ್ ಚಿಕಿತ್ಸೆಗೆ ಬಳಸಿಕೊಳ್ಳಲು ಏರ್ಪಾಡು ಮಾಡಿಕೊಳ್ಳಲಾಗಿದೆ. ತುರ್ತು ಚಿಕಿತ್ಸಾ ಘಟಕವನ್ನು ಸಹ ಸನದ್ಧಗೊಳಿಸಲಾಗಿದೆ ಎಂದು ವೈದ್ಯರು ಹೇಳುತ್ತಾರೆ. ‘ನೂತನವಾಗಿ ನಿರ್ಮಿಸಿರುವ ಆಮ್ಲಜನಕ ಘಟಕದ ಹಸ್ತಾಂತರಕ್ಕೆ ಮನವಿ ಮಾಡಲಾಗಿದೆ. ಆಸ್ಪತ್ರೆಯಲ್ಲಿ 80 ಆಮ್ಲಜನಕ ಸಿಲಿಂಡರ್‌ಗಳಿದ್ದು ಶೇ 50ರಷ್ಟು ಖಾಲಿಯಾಗುತ್ತಿದ್ದಂತೆ ಅದನ್ನು ಶಿವಮೊಗ್ಗದಿಂದ ತರಿಸಿ ತುಂಬಿಸಿಕೊಳ್ಳುವ ಕೆಲಸ ಮಾಡಲಾಗುತ್ತಿದೆ. ಆಮ್ಲಜನಕದ ಕೊರತೆಯುಂಟಾಗುವುದಿಲ್ಲ’ ಎಂದು ಎಂಜಿಎಂ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಪ್ರಿಯಾಂಕ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಕೋವಿಡ್‌ ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್ ಕೊಪ್ಪ: ಪಟ್ಟಣದಲ್ಲಿರುವ ಎಂ.ಎಸ್.ದ್ಯಾವೇಗೌಡ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಪ್ರತ್ಯೇಕ ವಾರ್ಡ್ ಮೀಸಲಿಟ್ಟು ಕೋವಿಡ್-19(ಜೆಎನ್-1) ಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮಾಸ್ಕ್ ಪಿಪಿಇ ಕಿಟ್ ರ್‍ಯಾಟ್ ಮತ್ತು ಆರ್‌ಟಿಪಿಸಿಆರ್ ಟೆಸ್ಟ್ ಕಿಟ್‌ಗಳ ಅಗತ್ಯವಿದೆ. ಆಮ್ಲಜನಕ ಮಾಸ್ಕ್‌ಗಳಿಗೆ ಬೇಡಿಕೆ ಇದೆ. 50 ಆಮ್ಲಜನಕ ಕಾನ್ಸೆಂಟ್ರೇಟರ್(ಸಾಂದ್ರಕ) 150 ಆಕ್ಸಿಜನ್ ಸಿಲಿಂಡರ್‌ಗಳಿವೆ. ಕಳೆದ ಬಾರಿ ಆಸ್ಪತ್ರೆ ಬಳಿ ನಿರ್ಮಿಸಿದ ಆಮ್ಲಜನಕ ಘಟಕಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ ಘಟಕದಿಂದ ಆಸ್ಪತ್ರೆಗೆ ಆಮ್ಲಜನಕ ಪೈಪ್ ಅಳವಡಿಸಬೇಕಿದೆ. ಬಳಕೆಗೆ ತಾಂತ್ರಿಕ ಸಿಬ್ಬಂದಿಯ ಅವಶ್ಯಕತೆ ಇದೆ. ಸಾಮಾನ್ಯ ವಾರ್ಡನ್ನು ಗರ್ಭಿಣಿ ಬಾಣಂತಿಯರ ವಾರ್ಡ್‌ನಿಂದ ಪ್ರತ್ಯೇಕಿಸಿ ಕೋವಿಡ್ ವಾರ್ಡ್ ಆಗಿ ಪರಿವರ್ತಿಸಲಾಗುತ್ತಿದೆ. ಕೋವಿಡ್ ಸೋಂಕು ಪತ್ತೆಯಾದ ರೋಗಿಗಳು ಕೋವಿಡ್ ವಾರ್ಡ್‌ಗೆ ಬರಲು ಕಳೆದ ಬಾರಿಯಂತೆ ಪ್ರತ್ಯೇಕ ಬಾಗಿಲಿನ ವ್ಯವಸ್ಥೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ವೈದ್ಯಾಧಿಕಾರಿಗಳು ಹೇಳುತ್ತಾರೆ. ಶಾಸಕ ಟಿ.ಡಿ.ರಾಜೇಗೌಡ ಅವರು ಡಿ. 22ರಂದು ಆಸ್ಪತ್ರೆಯಲ್ಲಿ ವೈದ್ಯರು ಆರೋಗ್ಯ ಇಲಾಖೆ ಸಿಬ್ಬಂದಿಯೊಂದಿಗೆ ಸಭೆ ನಡೆಸಿ ಕೋವಿಡ್ ನಿರ್ವಹಣೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ. ಕೋವಿಡ್ ಪರೀಕ್ಷೆ ಆರಂಭಿಸಿಲ್ಲ.

ಕೋವಿಡ್ ನಿಯಂತ್ರಣಕ್ಕೆ ಸಕಲ ಸಿದ್ದತೆ ನರಸಿಂಹರಾಜಪುರ: ಕೋವಿಡ್ ಪ್ರಕರಣಗಳು ಹೆಚ್ಚಾದರೆ ನಿಯಂತ್ರಿಸಲು ತಾಲ್ಲೂಕು ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ 100 ಹಾಸಿಗೆಗಳಿದ್ದು 60 ಹಾಸಿಗೆಗಳಿಗೆ ಆಮ್ಲಜನಕ ಸಂಪರ್ಕ ಕಲ್ಪಿಸಲಾಗಿದೆ. ಏಳು ಐಸಿಯು ಏಳು ವೆಂಟಿಲೇಟರ್ ನಾಲ್ಕು ಅಂಬ್ಯುಲೆನ್ಸ್ 26 ಆಕ್ಸಿಜನ್ ಕಾನ್ಸೆಂಟ್ರೇಟರ್ (ಸಾಂದ್ರಕ) 155 ಆಮ್ಲಜಕನಕ ಸಿಲಿಂಡರ್ ಇದ್ದು ಇದರಲ್ಲಿ 100 ಜಂಬೂ ಸಿಲಿಂಡರ್‌ಗಳಿವೆ. ಆದರೆ ಆಮ್ಲಜನಕ ಉತ್ಪಾದನಾ ಘಟಕವಿದ್ದು ಕಾರ್ಯನಿರ್ವಹಿಸುತ್ತಿಲ್ಲ. ಎನ್–95 ಮಾಸ್ಕ್ 2300 ಮೂರು ಲೇಯರ್ ಮಾಸ್ಕ್ 500 ಪಿಪಿಇ ಕಿಟ್ 850 ಒಂಬತ್ತು ಹಾಸಿಗೆಯ ಕೋವಿಡ್ ಐಸಿಯು‌ ಏಳು ವೆಂಟಿಲೇಟರ್ ಹಾಗೂ 14 ಮಾನಿಟರ್‌ಗಳಿವೆ. ಕೋವಿಡ್ ತಪಾಸಣೆ ಕಿಟ್ ಶೀಘ್ರದಲ್ಲೇ ಆಸ್ಪತ್ರೆಗೆ ಪೂರೈಕೆಯಾಗುತ್ತದೆ. ಆಮ್ಲಜನಕ ಉತ್ಪಾದನಾ ಘಟಕ ಕಾರ್ಯನಿರ್ವಹಿಸದೆ ಇರುವುದರಿಂದ ಅದನ್ನು ದುರಸ್ತಿಪಡಿಸಲು ಎಂಜಿನಿಯರ್‌ಗೆ ಸೂಚಿಸಲಾಗಿದೆ. ಕೋವಿಡ್ ಎದುರಿಸಲು ಸಂಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ವಿಜಯಕುಮಾರ್ ತಿಳಿಸಿದರು.

ಪ್ರತ್ಯೇಕ ಆಮ್ಲಜನಕ ಘಟಕ ತರೀಕೆರೆ: ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಕೋವಿಡ್ ಪ್ರಕರಣಗಳನ್ನು ಎದುರಿಸಲು ಅಗತ್ಯ ಸೌಲಭ್ಯಗಳನ್ನು ಹೊಂದಿದೆ. ಆಸ್ಪತ್ರೆಯಲ್ಲಿ ಆಮ್ಲಕನಕ ಉತ್ಪಾದನಾ ಘಟಕ ಇದೆ.  70 ಹಾಸಿಗೆಗಳಿಗೆ ಆಮ್ಲಜನಕ ಸಂಪರ್ಕ ಕಲ್ಪಿಸಲಾಗಿದೆ. 5 ಹಾಸಿಗೆಯ ಐಸಿಯು ವೆಂಟಿಲೇಟರ್ ವ್ಯವಸ್ಥೆ ಇದೆ. ಆಸ್ಪತ್ರೆಯಲ್ಲಿ ಅಗತ್ಯ ಔಷಧಿ ಕೂಡ ಲಭ್ಯವಿದೆ. ಸಾರ್ವಜನಿಕರು ಭಯಪಡುವುದು ಬೇಡ. ಸಾರ್ವಜನಿಕ ಸಮಾರಂಭ ಹಾಗೂ ಧಾರ್ಮಿಕ ಸಮಾರಂಭಗಳಲ್ಲಿ ಮಾಸ್ಕ್ ಧರಿಸಿ ಕೋವಿಡ್ ನಿಯಮ ಪಾಲಿಸಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಶೇಖರ ತಿಳಿಸಿದರು.

ಪ್ರತ್ಯೇಕ ಐಸಿಯು ಶೃಂಗೇರಿ: ಕೋವಿಡ್ ಪ್ರಕರಣ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ತಾಲ್ಲೂಕು ಆಸ್ಪತ್ರೆಯಲ್ಲಿ ಮೂರು ಹಾಸಿಗೆಗಳ ಐಸಿಯು ನಿರ್ಮಿಸಲಾಗಿದೆ. ವಿದೇಶದಿಂದ ಬಂದಿರುವ 10 ಜನರನ್ನು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷೆ ಮಾಡಿದ್ದಾರೆ. 3 ಹಾಸಿಗೆಗಳಿಗೆ ವೆಂಟಿಲೇಟರ್ ಮತ್ತು ಆಮ್ಲಜನಕ ಅಳವಡಿಸಲಾಗಿದೆ. ಆರೋಗ್ಯದಲ್ಲಿ ಸಮಸ್ಯೆ ಉಂಟಾದರೆ ಕೂಡಲೇ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಶ್ರೀನಿವಾಸ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT