ಬುಧವಾರ, ಜುಲೈ 28, 2021
28 °C
ಕೋವಿಡ್‌–19 ಕಾಯಕ: ಗುತ್ತಿಗೆ ಸಿಬ್ಬಂದಿ ಅಳಲು

ಚಿಕ್ಕಮಗಳೂರು: ಕೊರೊನಾ ವಾರಿಯರ್ಸ್‌ಗೆ 3 ತಿಂಗಳ ಪಗಾರ ಬಾಕಿ

ಬಿ.ಜೆ.ಧನ್ಯಪ್ರಸಾದ್ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಕೋವಿಡ್‌–19 ಕಾಯಕಕ್ಕೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಂಡಿರುವ ಸಿಬ್ಬಂದಿಗೆ (ಕೊರೊನಾ ವಾರಿಯರ್ಸ್‌) ಮೂರು ತಿಂಗಳಿನಿಂದ ಪಗಾರ ನೀಡಿಲ್ಲ. ಕೊರೊನಾ ವಾರಿಯರ್ಸ್‌ಗಳು ಪರಿತಪಿಸುವಂತಾಗಿದೆ.

ಕೋವಿಡ್‌ ಕೇಂದ್ರಗಳಲ್ಲಿ ಕಾರ್ಯನಿರ್ವಹಣೆಗಾಗಿಯೇ ಏಪ್ರಿಲ್‌ನಲ್ಲಿ ಸ್ಟಾಫ್‌ ನರ್ಸ್‌– 20, ಪ್ರಯೋಗಾಲಯ ತಂತ್ರಜ್ಞರು– 15 ಹಾಗೂ ಗ್ರೂಪ್‌ ‘ಡಿ’– 10 ಮಂದಿಯನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಸ್ಟಾಫ್‌ ನರ್ಸ್‌ಗೆ ₹ 20,000, ಪ್ರಯೋಗಾಲಯ ನೌಕರಗೆ ₹ 15,000 ಹಾಗೂ ‘ಡಿ’ ಗ್ರೂಪ್‌ ನೌಕರಗೆ ₹ 10,000 ಸಂಬಳ ನಿಗದಿಪಡಿಸಲಾಗಿದೆ. ಗುತ್ತಿಗೆ ಅವಧಿ ಆರು ತಿಂಗಳು ಎಂದು ಷರತ್ತು ವಿಧಿಸಲಾಗಿದೆ.

ಮಧುವನ ಬಡಾವಣೆಯ ಕೆಎಸ್‌ಒಯು ಪ್ರಾದೇಶಿಕ ಕಚೇರಿ ಕಟ್ಟಡದಲ್ಲಿನ ಕೋವಿಡ್‌ ನಿಗಾ ಘಟಕ, ಕೋವಿಡ್‌ ಆಸ್ಪತ್ರೆಗಳಲ್ಲಿ (ಹೆರಿಗೆ ಆಸ್ಪತ್ರೆ, ಮಕ್ಕಳ ವಿಭಾಗ...) ಕಾರ್ಯನಿರ್ವಹಿಸುತ್ತಿದ್ದಾರೆ. ಸಂಬಳಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮೊರೆ ಇಟ್ಟರೂ ಸಮಸ್ಯೆ ಪರಿಹಾರವಾಗಿಲ್ಲ.

‘ಮೂರು ತಿಂಗಳಿನಿಂದ ಸಂಬಳ ಕೊಟ್ಟಿಲ್ಲ. ಮನೆ ಬಾಡಿಗೆ ಕಟ್ಟಿಲ್ಲ. ಸಾಲ ಮಾಡಿ ಮನೆಗೆ ದಿನಸಿ, ಅಗತ್ಯ ವಸ್ತುಗಳನ್ನು ತರುತ್ತಿದ್ದೇವೆ. ಕುಟುಂಬ ನಿರ್ವಹಿಸುವುದು ಬಹಳ ತ್ರಾಸದಾಯವಾಗಿಕೆ. ಸಾಲ ಮಾಡಿರುವ ಅಂಗಡಿಗಳವರ ಕಣ್ಣಿಗೆ ಬೀಳದಂತೆ ಓಡಾಡಬೇಕಾಗಿದೆ’ ಎಂದು ನರ್ಸ್‌ವೊಬ್ಬರು ಸಂಕಷ್ಟ ತೋಡಿಕೊಂಡರು.

‘ಕೊರೊನಾ ಗೂಡಿನಲ್ಲಿ ಕೆಲಸ ಮಾಡುವುದೇ ಸವಾಲು. ಪಿಪಿಇ ಧರಿಸಿ ಎಂಟು ಗಂಟೆ ವಾರ್ಡ್‌ಗಳಲ್ಲಿ ಕೆಲಸ ಮಾಡುವುದೂ ಸುಲಭದ ಮಾತಲ್ಲ. ವಾರದ ರಜೆಯೂ ಇಲ್ಲದಂತೆ ಕೆಲಸ ಮಾಡುತ್ತಿದ್ದೇವೆ. ದುಡಿಸಿಕೊಳ್ಳುತ್ತಿದ್ದಾರೆ. ಆದರೆ ಸಂಬಳ ನೀಡುತ್ತಿಲ್ಲ’ ಬೇಸರ ವ್ಯಕ್ತಪಡಿಸಿದರು.

‘ತಾಂತ್ರಿಕ ಕಾರಣಗಳಿಂದಾಗಿ ಈ ಬಾಬ್ತಿಗೆ ಹಣ ಬಿಡುಗಡೆಯಾಗಿರಲಿಲ್ಲ. ಹೀಗಾಗಿ, ಸಿಬ್ಬಂದಿಗೆ ಸಂಬಳ ಪಾವತಿಸಿಲ್ಲ. ವಿಷಯವನ್ನು ಸಂಬಂಧಪಟ್ಟವರ ಗಮನಕ್ಕೆ ತರಲಾಗಿದೆ. ಶೀಘ್ರದಲ್ಲಿ ಪಾವತಿಯಾಗಲಿದೆ’ ಎಂದು ಜಿಲ್ಲಾಮಟ್ಟದ ವೈದ್ಯಾಧಿಕಾರಿಯೊಬ್ಬರು ತಿಳಿಸಿದರು.

ಈ ಗುತ್ತಿಗೆದಾರ ನೌಕರರ ಪೈಕಿ ಹಲವರು ಪಿಜಿಗಳಲ್ಲಿ ಇದ್ದಾರೆ. ಮತ್ತೆ ಕೆಲವರು ಬಾಡಿಗೆ ಮನೆಗಳಲ್ಲಿ ಇದ್ದಾರೆ. ಸಂಬಳವೇ ಜೀವನ ನಿರ್ವಹಣೆಗೆ ಆಸರೆ. ಕೊರೊನಾ ವಾರಿಯರ್ಸ್‌ಗಳ ಕಾರ್ಯವನ್ನು ಬಾಯಿ ತುಂಬಾ ಕೊಂಡಾಡುತ್ತಾರೆ, ಆದರೆ ಸಂಬಳ ಪಾವತಿಗೆ ತಡ ಏಕೆ ಎಂಬುದು ಅವರ ಪ್ರಶ್ನೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು