ಶನಿವಾರ, ಮೇ 28, 2022
31 °C
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಆರೋಪ

ಸಿ.ಟಿ.ರವಿ ವಿಕೃತ ಸ್ವಭಾವದ ವ್ಯಕ್ತಿ: ಆರ್‌.ಧ್ರುವನಾರಾಯಣ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧ್ರುವನಾರಾಯಣ

ಚಿಕ್ಕಮಗಳೂರು: ‘ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ವಿಕೃತ ಸ್ವಭಾವದ ವ್ಯಕ್ತಿ. ಧರ್ಮ, ದೇವರು, ದತ್ತ ಪೀಠ ಮೆರವಣಿಗೆ ಹೆಸರಿನಲ್ಲಿ ಜನರ ಮನಸ್ಸು ಕೆರಳಿಸಿ ಪರಸ್ಪರ ನಿಂದನೆಯಲ್ಲಿ ತೊಡಗಿರುವಂಥ ಮನುಷ್ಯ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಚಿಕ್ಕಮಗಳೂರು ಕ್ಷೇತ್ರದ ಜನತೆಗೆ ಅಗೌರವ ತರುವಂಥ ಭಾಷೆ ಅವರು ಬಳಸುತ್ತಾರೆ. ನಾಲ್ಕನೇ ಬಾರಿಗೆ ಶಾಸಕರಾಗಿದ್ದರೂ ಕ್ಷೇತ್ರದ ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ತರಲು ಅವರು ವಿಫಲರಾಗಿದ್ದಾರೆ’ ಎಂದು ತಿಳಿಸಿದರು.

‘ರವಿ ಅವರು ನೆಹರೂ, ಇಂದಿರಾ ಗಾಂಧಿ ಬಗ್ಗೆ ಮಾತನಾಡಿದ್ದಾರೆ. ಮತ್ತೊಬ್ಬರ ಬಗ್ಗೆ ಮಾತನಾಡುವಾಗ ತಾನು ಪ್ರಾಮಾಣಿಕನಾಗಿರಬೇಕು. ಸಚ್ಚಾರಿತ್ರ್ಯ ಹೊಂದಿರಬೇಕು. ಸಿ.ಟಿ.ರವಿ ಅವರನ್ನು ಲೂಟಿ ರವಿ ಎಂದು ಇಲ್ಲಿನ ಜನ ಹೇಳುತ್ತಾರೆ’ ಎಂದರು.

‘ಕಾಂಗ್ರೆಸ್‌ನವರದ್ದು ಬೆಂಕಿಹಚ್ಚುವ ಮನಸ್ಥಿತಿ ಎಂದು ರವಿ ಹೇಳಿಕೆ ನೀಡಿದ್ದಾರೆ. ಬಿಜೆಪಿ ಎಂದರೆ ‘ಬೆಂಕಿ ಹಚ್ಚುವ ಜನತಾ ಪಾರ್ಟಿ’ ಎಂದು ನಾನು ಹೇಳುತ್ತೇನೆ. ಅದಕ್ಕೆ ಉದಾಹರಣೆಯನ್ನು ಕೊಡುತ್ತೇನೆ. ಯಡಿಯೂರಪ್ಪ ಮುಖ್ಯಮಂತ್ರಿಯಾದ ನಾಲ್ಕು ತಿಂಗಳಲ್ಲಿ ಬಿಜೆಪಿಯವರ 43 ಪ್ರಕರಣಗಳನ್ನು (ಗಲಭೆ, ಪ್ರಚೋದನೆ, ದಾಂದಲೆ, ಸಾರ್ವಜನಿಕ ಆಸ್ತಿ ನಷ್ಟ...) ವಾಪಸ್‌ ಪಡೆದಿದ್ದರು. ಸಿ.ಟಿ. ರವಿ ಅವರ ಪ್ರಕರಣವನ್ನು ವಾಪಸ್‌ ಪಡೆದಿದ್ದಾರೆ. ರವಿ ಅವರಿಗೆ ಕಾಂಗ್ರೆಸ್‌ ಟೀಕಿಸುವ ನೈತಿಕ ಹಕ್ಕು ಇಲ್ಲ’ ಎಂದು ಹೇಳಿದರು.

‘ರವಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಶಿವಕುಮಾರ್‌ ಅವರು ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರು ಮೊದಲು ಸಚಿವರಾದಾಗ ರವಿ ಇನ್ನು ಶಾಸಕ ಆಗಿರಲಿಲ್ಲ. ‘ಡಿಕೆಶಿ ಜೈಲಿಗೆ ಹೋಗಿದ್ದರು’ ಎಂದು ರವಿ ಹೇಳಿದ್ದಾರೆ. ಬಿಜೆಪಿಯಲ್ಲಿ ಯಾರ್ಯಾರು ಜೈಲಿಗೆ ಹೋಗಿದ್ದರು ಎಂಬುದು ಗೊತ್ತಿಲ್ಲವೆ’ ಎಂದು ಪ್ರಶ್ನಿಸಿದರು.

‘ಆಡಳಿತ ವೈಫಲ್ಯಗಳನ್ನು ಮರೆಮಾಚಲು ವಿಷಯಗಳನ್ನು ತಿರುಚುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಇವರೆಲ್ಲರೂ ಆರ್‌ಎಸ್‌ಎಸ್‌ನ ಕೈಗೊಂಬೆಗಳು’ ಎಂದು ಕಟಕಿಯಾಡಿದರು.

‘ಚಿಕ್ಕಮಗಳೂರು ನಗರದಲ್ಲಿ ರಸ್ತೆ, ಚರಂಡಿ, ಇತರ ಮೂಲಸೌಕರ್ಯಗಳ ಕೊರತೆ ಇದೆ. ಕಾಮಗಾರಿಗಳು ಕಳಪೆಯಾಗಿವೆ. ಈ ಬಾರಿ ನಗರಸಭೆ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಮತದಾರರು ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಬೆಂಬಲಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಬೆಂಕಿ ಹಚ್ಚುವುದನ್ನು ಬಿಜೆಪಿ ನಾಯಕರೇ ಹೇಳಿಕೊಡುತ್ತಾರೆ’

‘ಎಷ್ಟು ಬಸ್‌ಗಳಿಗೆ ಬೆಂಕಿ ಹಚ್ಚಿದ್ದೀರಿ, ಎಷ್ಟು ಗಲಭೆ ಮಾಡಿದ್ದೀರಿ ಎಂದು ಅಮಿತ್‌ ಶಾ ಕೇಳಿದ್ದಾರೆ ಎಂದು ಪ್ರತಾಪ ಸಿಂಹ ಹೇಳಿರುವ ವಿಡಿಯೊವನ್ನು ಫೇಸ್‌ಬುಕ್‌ನಲ್ಲಿ ಹಾಕಿದ್ದರು’ ಎಂದು ಧ್ರುವನಾರಾಯಣ ಹೇಳಿದರು

‘ಅಮಿತ್‌ ಶಾ ರಾಷ್ಟ್ರೀಯ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾಗ ರಾಜ್ಯದ ಬಿಜೆಪಿ ಯುವಮೋರ್ಚಾದ ಅಧ್ಯಕ್ಷರಾಗಿದ್ದ ಪ್ರತಾಪಸಿಂಹ ಅವರಿಗೆ ಹೀಗೆ ಕೇಳಿದ್ದರಂತೆ. ಬೆಂಕಿ ಹಚ್ಚುವುದನ್ನು ಆ ಪಕ್ಷದ ನಾಯಕರೇ ಹೇಳಿಕೊಡುತ್ತಾರೆ’ ಎಂದು ವ್ಯಂಗ್ಯವಾಡಿದರು.

ಮುಖಂಡರಾದ ಹಿರೇಮಗಳೂರು ಪುಟ್ಟಸ್ವಾಮಿ, ಎಂ.ಸಿ.ಶಿವಾನಂದಸ್ವಾಮಿ, ಕೆ.ಪಿ.ಅಂಶುಮಂತ್‌, ಮಂಜೇಗೌಡ, ಎಚ್‌.ಪಿ.ಮಂಜೇಗೌಡ, ಜಿ.ಎಚ್‌.ಶ್ರೀನಿವಾಸ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು