ಭಾನುವಾರ, ಅಕ್ಟೋಬರ್ 24, 2021
21 °C
ಗಾಂಧೀಜಿ, ಲಾಲ್‌ ಬಹದ್ದೂರ್‌ ಶಾಸ್ತ್ರಿ ಜಯಂತ್ಯುತ್ಸವ

ಚಿಕ್ಕಮಗಳೂರು: ಗ್ಯಾಲರಿ; ಗಾಂಧೀಜಿ ಬದುಕಿನ ಯಾನ ದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ಜಿಲ್ಲಾಧಿಕಾರಿ ಕಚೇರಿ ಒಳಾವರಣದ ರಾಷ್ಟ್ರಿಪಿತ ನೆನಪಿನಂಗಳದಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲ್‌ ಬಹದ್ದೂರ್‌ ಶಾಸ್ತ್ರಿ ಜಯಂತ್ಯುತ್ಸವ ಶನಿವಾರ ನಡೆಯಿತು.

ಜಿಲ್ಲಾಧಿಕಾರಿ ಕಚೇರಿ ಒಳಾವರಣದ ಮೊಗಸಾಲೆ ಗೋಡೆಯಲ್ಲಿ ಅವಳಡಿಸಿರುವ ಮಹಾತ್ಮ ಗಾಂಧಿ ಅವರ ಬದುಕಿನ ಪಯಣದ ಅಪರೂಪದ ಚಿತ್ರಗಳು ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದವು.

ಬಾಪೂಜಿ ಅವರು ನಾಡಿನ ವಿವಿಧೆಡೆಗಳಿಗೆ ಭೇಟಿ ನೀಡಿದ, ವಿವಿಧ ಚಳವಳಿಗಳಲ್ಲಿ ಭಾಗವಹಿಸಿದ, ಭಾಷಣ ಮಾಡಿದ ಮೊದಲಾದ ಚಿತ್ರಗಳು ಇವೆ. ಒಟ್ಟಾರೆ ಗಾಂಧೀಜಿ ಅವರ ಆತ್ಮಕಥೆ ಸಾರುವ ಗ್ಯಾಲರಿ ಇದಾಗಿದೆ.

ಗಾಂಧೀಜಿ ಅವರು ಚಿಕ್ಕಮಗಳೂರು, ಕಡೂರಿಗೆ ಭೇಟಿ ನೀಡಿದ್ದ ಚಿತ್ರಗಳು ಗ್ಯಾಲರಿಯಲ್ಲಿ ಇವೆ. ಜನಪ್ರತಿನಿಧಿಗಳು, ಅಧಿಕಾರಿಗಳು, ನೌಕರರು, ಸಾರ್ವಜನಿಕರು ಈ ಗ್ಯಾಲರಿಯನ್ನು ವೀಕ್ಷಿಸಿದರು.

ವಿಧಾನ ಪರಿಷತ್‌ ಉಪಸಭಾಪತಿ ಎಂ.ಕೆ.ಪ್ರಾಣೇಶ್‌, ಶಾಸಕ ಸಿ.ಟಿ.ರವಿ, ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌.ಭೋಜೇಗೌಡ, ಜಿಲ್ಲಾಧಿಕಾರಿ ರಮೇಶ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಕ್ಷಯ್‌ ಎಂ.ಹಾಕೆ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್‌.ರೂಪಾ, ಉಪವಿಭಾಗಾಧಿಕಾರಿ ಡಾ.ಎಚ್‌.ಎಲ್‌.ನಾಗರಾಜ್‌ ಅವರು ಅಮೃತ ಅಂಗಳ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಗಾಯಕಿ ರೇಖಾ ಪ್ರೇಂಕುಮಾರ್‌ ಮತ್ತು ತಂಡದವರು ಭಜನೆ ನಡೆಸಿಕೊಟ್ಟರು.

ಉಪನ್ಯಾಸಕಿ ನಾಗಶ್ರೀ ಅವರು ‘ಭಗವದ್ಗೀತೆ’, ಮೌಲ್ವಿ ಔರಂಗ್‌ ಪಾಷಾ ಹಜರತ್‌ ಅವರು ‘ಕುರಾನ್‌’ ಹಾಗೂ ಫಾದರ್‌ ವಿನಯಕುಮಾರ್‌ ಅವರು ‘ಬೈಬಲ್‌’ ಪಠಿಸಿದರು.

ಮಹಾತ್ಮ ಗಾಂಧಿ ಅವರ ಭಾಷಣದ ಧ್ವನಿ ಮುದ್ರಿಕೆ ಬಿತ್ತರಿಸಲಾಯಿತು. ನೆಹರು ಯುವ ಕೇಂದ್ರದ ವತಿಯಿಂದ ಸ್ವಚ್ಛ ಭಾರತ ಕಾರ್ಯಕ್ರಮದ ಭಿತ್ತಿ ಪತ್ರ ಬಿಡುಗಡೆಗೊಳಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.