ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಣಂತಿ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ

ಮೃತರ ಸಂಬಂಧಿಕರ ಆಕ್ರೋಶ: ಜಿಲ್ಲಾಧಿಕಾರಿಗೆ ದೂರು
Last Updated 4 ಫೆಬ್ರುವರಿ 2020, 13:18 IST
ಅಕ್ಷರ ಗಾತ್ರ

ಕೊಪ್ಪ: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಗೆ ಎಂದು ದಾಖಲಾಗಿದ್ದ ತಾಲ್ಲೂಕಿನ ನಾರ್ವೆ ಸಮೀಪದ ಹುಲುಗಾರಿನ ಉಷಾ (24) ಸೋಮವಾರ ಮೃತಪಟ್ಟಿದ್ದಾರೆ. ‘ಆಸ್ಪತ್ರೆಯ ವೈದ್ಯರ, ದಾದಿಯರ ನಿರ್ಲಕ್ಷ್ಯವೇ ಮಹಿಳೆಯ ಸಾವಿಗೆ ಕಾರಣ’ ಎಂದು ಆರೋಪಿಸಿ ಮಹಿಳೆಯ ಕುಟುಂಬಸ್ಥರು, ಸಾರ್ವಜನಿಕರು ಮಂಗಳವಾರ ತಾಲ್ಲೂಕು ಕಚೇರಿ ಎದುರು ಆಕ್ರೋಶ ವ್ಯಕ್ತಪಡಿಸಿದರು.

‘ಜ.25ರಂದು ಉಷಾ ಅವರನ್ನು ಚೊಚ್ಚಲ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ರಾತ್ರಿ 9 ಗಂಟೆ ಹೊತ್ತಿಗೆ ಹೆರಿಗೆನೋವು ಪ್ರಾರಂಭವಾದಾಗ, ವೈದ್ಯರಿಗೆ ತಿಳಿಸಿ ತಪಾಸಣೆ ನಡೆಸುವಂತೆ ವಿನಂತಿಸಿದರೂ, ಡಾ.ಬಾಲಕೃಷ್ಣ ಅವರು ಗರ್ಭಿಣಿಯನ್ನು ತಪಾಸಣೆ ನಡೆಸದೇ ನಿರ್ಲಕ್ಷ್ಯ ವಹಿಸಿದ್ದರು’ ಎಂದು ಮೃತರ ಸಂಬಂಧಿ ನಾರಾಯಣ ಅವರು ಆರೋಪಿಸಿದರು.

‘ವೈದ್ಯರು ಆಸ್ಪತ್ರೆಗೆ ಬರದೆ ದಾದಿಯರ ಕೈಯಲ್ಲಿ ಹೆರಿಗೆ ಮಾಡಿಸಿದರು. ಈ ವೇಳೆ ಉಷಾ ಅವರಿಗೆ ರಕ್ತಸ್ರಾವ ಉಂಟಾಗಿತ್ತು. ಅದನ್ನು ನಮಗೆ ತಿಳಿಸದೇ ವಿಷಯ ಮುಚ್ಚಿಟ್ಟರು. ಕೊನೆಯ ಗಳಿಗೆಯಲ್ಲಿ ಉಷಾ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ನಮಗೆ ತಿಳಿಸಿದರು. ಚಿಕಿತ್ಸೆಗೆಂದು ಅಲ್ಲಿಗೆ ಕರೆದೊಯ್ಯುವಾಗ ಮೃತಪಟ್ಟಳು. ಮಗು ಆರೋಗ್ಯವಾಗಿದೆ’ ಎಂದು ಅವರು ಹೇಳಿದ್ದಾರೆ.

ಕ್ರಮಕ್ಕೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ದೂರು

ವೈದ್ಯರ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಸಾರ್ವಜನಿಕರು, ಮೃತ ಉಷಾ ಅವರ ಕುಟುಂಬಸ್ಥರು ಪಟ್ಟಣದಿಂದ ತಾಲ್ಲೂಕು ಕಚೇರಿವರೆಗೆ ಪಾದಯಾತ್ರೆ ನಡೆಸಿದರು. ನಂತರ ತಾಲ್ಲೂಕು ಕಚೇರಿಯಲ್ಲಿ ಶಿರಸ್ತೇದಾರ್ ಶೇಷಮೂರ್ತಿ ಅವರ ಮೂಲಕ ಜಿಲ್ಲಾಧಿಕಾರಿಗೆ ದೂರು ನೀಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಶೇಷಮೂರ್ತಿ, ‘ಮನವಿ ಪತ್ರವನ್ನು ಇಂದೇ ಜಿಲ್ಲಾಧಿಕಾರಿಗೆ ಕಳುಹಿಸಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಅವರು ಕ್ರಮ ಜರುಗಿಸುತ್ತಾರೆ’ ಎಂದರು.

‘ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆಗೆ ಎಂದು ದಾಖಲಾಗಿದ್ದ ಉಷಾ ಅವರ ಸಾವಿಗೆ ವೈದ್ಯ ಡಾ.ಬಾಲಕೃಷ್ಣ ಹಾಗೂ ರಾತ್ರಿ ಪಾಳಿಯಲ್ಲಿದ್ದ ದಾದಿಯರು ಕಾರಣ. ವೈದ್ಯರು ಗರ್ಭಿಣಿಯನ್ನು ತಪಾಸಣೆ ನಡೆಸದೇ ನಿರ್ಲಕ್ಷ್ಯ ತೋರಿದ್ದರು. ಈ ಹಿಂದೆಯೂ ವೈದ್ಯರ ನಿರ್ಲಕ್ಷ್ಯತನದಿಂದ ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಹಲವಾರು ಪ್ರಕರಣಗಳು ನಡೆದಿದ್ದು, ಈ ಬಗ್ಗೆ ಇಲಾಖೆ ವತಿಯಿಂದ ತನಿಖೆಯೂ ನಡೆಯುತ್ತಿದೆ. ಆದ್ದರಿಂದ ಆ ವೈದ್ಯರನ್ನು ಅಮಾನತಿನಲ್ಲಿಟ್ಟು, ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT