ಬುಧವಾರ, 16 ಜುಲೈ 2025
×
ADVERTISEMENT
ADVERTISEMENT

ಚಿಕ್ಕಮಗಳೂರು: ಕಂದಾಯ, ಅರಣ್ಯ ಭೂಮಿ ಗುರುತಿಸುವಲ್ಲಿ ವಿಳಂಬ

'ಅರಣ್ಯ ರೋಧನ'ದಂತಾದ ಸಾವಿರಾರು ಮಂದಿ ಕೃಷಿಕರ ಯತ್ನ
Published : 21 ಜೂನ್ 2025, 6:17 IST
Last Updated : 21 ಜೂನ್ 2025, 6:17 IST
ಫಾಲೋ ಮಾಡಿ
0
ಚಿಕ್ಕಮಗಳೂರು: ಕಂದಾಯ, ಅರಣ್ಯ ಭೂಮಿ ಗುರುತಿಸುವಲ್ಲಿ ವಿಳಂಬ
ಇನೇಶ್

ಕೊಪ್ಪ: ತಾಲ್ಲೂಕಿನಲ್ಲಿ ಉಳುಮೆ ಭೂಮಿಗೆ ಮಂಜೂರಾತಿ ಹಕ್ಕುಪತ್ರ ಪಡೆಯುವಲ್ಲಿ ಕೃಷಿಕರ ಅಳಲು ಕೇಳುವವರಿಲ್ಲದಂತಾಗಿದ್ದು, ಅವರ ಪ್ರಯತ್ನ 'ಅರಣ್ಯ ರೋಧನ'ದಂತಾಗಿದೆ.

ADVERTISEMENT
ADVERTISEMENT

ಭೂಮಿ ಮಂಜೂರಾತಿಗೂ ಮುನ್ನ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಬೇಕು. ಈ ನಿಟ್ಟಿನಲ್ಲಿ ಕಂದಾಯ ಇಲಾಖೆಯಿಂದ, ಅರಣ್ಯ ಇಲಾಖೆಗೆ ರವಾನೆಯಾದ ಕಡತಗಳಿಗೆ ನಿರಾಕ್ಷೇಪಣಾ ಪತ್ರ (ಎನ್ಒಸಿ) ಬರುವುದು ತುಂಬಾ ವಿಳಂಬವಾಗುತ್ತಿದೆ.

ಪಟ್ಟಣ ವ್ಯಾಪ್ತಿಗೆ ಸಂಬಂಧಿಸಿದ 94 ಸಿಸಿ ಅರ್ಜಿ ಬಾಕಿ ಯಾವುದು ಇಲ್ಲ. ಉಳಿದಂತೆ 94 ಸಿ, ನಮೂನೆ 50, 53, 57ರ ಬಹುತೇಕ ಅರ್ಜಿಗಳು ಇತ್ಯರ್ಥವಾಗದೆ ಅರಣ್ಯ ಇಲಾಖೆಯ ನಿರಾಕ್ಷೇಪಣಾ ಪತ್ರಕ್ಕಾಗಿ ಕಾದು ಕುಳಿತಿವೆ. ಈ ಪೈಕಿ ನಮೂನೆ 50ರ ಕೆಲವು ಅರ್ಜಿಗಳು ಕಂದಾಯ ಉಪ ವಿಭಾಗಾಧಿಕಾರಿಗೆ ಮೇಲ್ಮನವಿ ಸಲ್ಲಿಕೆಯಾಗಿದ್ದು, ಇತ್ಯರ್ಥವಾಗಲು ಬಾಕಿ ಉಳಿದಿವೆ.

ವಾಸದ ಮನೆಗೆ 94 ಸಿ ಹಕ್ಕುಪತ್ರ ಪಡೆಯಲು ಸಲ್ಲಿಕೆಯಾದ 10,632 ಅರ್ಜಿಗಳ ಪೈಕಿ 2,286 ಹಕ್ಕುಪತ್ರ ವಿತರಣೆಯಾಗಿದೆ. ಸ್ಪಷ್ಟತೆ ಇರುವ ಒಟ್ಟು ಅರ್ಜಿಗಳ ಪೈಕಿ ಅರಣ್ಯ ಇಲಾಖೆ ಅಭಿಪ್ರಾಯಕ್ಕಾಗಿ 1,205 ಕಡತ ರವಾನೆಯಾಗಿತ್ತು. ಇವುಗಳಲ್ಲಿ 523 ಕಡತಗಳಿಗೆ ಅಭಿಪ್ರಾಯ ಸಿಕ್ಕಿದೆ. ಉಳಿದ ಕಡತಗಳು ಅರಣ್ಯ ಇಲಾಖೆ ಅಧಿಕಾರಿಗಳ ಅಭಿಪ್ರಾಯಕ್ಕೆ ಬಾಕಿ ಇವೆ.

ADVERTISEMENT

ನಮೂನೆ 53 ರಲ್ಲಿ 2,223 ಅರ್ಜಿಗಳು ಸಲ್ಲಿಕೆಯಾಗಿವೆ. ನಮೂನೆ 57 ರಲ್ಲಿ 11,310 ಅರ್ಜಿಗಳು ಸಲ್ಲಿಕೆಯಾಗಿವೆ. ಅರಣ್ಯ ಇಲಾಖೆ ಒಪ್ಪಿಗೆಗೆ ಕಂದಾಯ ಇಲಾಖೆಯಿಂದ 170 ಅರ್ಜಿಗಳು ರವಾನೆಯಾಗಿದ್ದು, ಈ ಪೈಕಿ 115 ಅರ್ಜಿಗಳು ಅರಣ್ಯ ಹಾಗೂ ಕಂದಾಯ ಇಲಾಖೆ ಜಂಟಿ ಸರ್ವೆಗಾಗಿ ಕಾದು ಕುಳಿತಿವೆ. ಉಳಿದ ಅರ್ಜಿಗಳು ಬಾಕಿ ಇವೆ. ಆದ್ದರಿಂದ ಯಾವುದೇ ಹಕ್ಕುಪತ್ರ ವಿತರಣೆಗೆ ಸಿದ್ಧವಿಲ್ಲ.

ಈ ಹಿಂದೆ ವಸತಿ ನಿವೇಶನ ಮಂಜೂರಾಗಿ, ಬಳಿಕ ಅಲ್ಲಿರುವ ಮರ ತೆರವುಗೊಳಿಸುವ ಸಂದರ್ಭದಲ್ಲಿ ಆ ಜಾಗ ಸೆಕ್ಷನ್ 4 ವ್ಯಾಪ್ತಿಗೆ ಒಳಪಟ್ಟಿದೆ ಎಂಬ ಗೊಂದಲ ಮೂಡಿದ್ದೂ ಇದೆ. ಕಂದಾಯ ಜಾಗ ಗುರುತಿಸದಿರುವುದೇ ಗೊಂದಲಕ್ಕೆ ಕಾರಣವಾಗಿದೆ. ಕಂದಾಯ ಜಾಗ ಸ್ಪಷ್ಟ ಇದ್ದಾಗ ಮಾತ್ರ ಸ್ಥಳೀಯ ಪಂಚಾಯಿತಿ ಇ-ಸ್ವತ್ತು ಮಾಡಲು ಸಾಧ್ಯ. ಆದರೆ, ಅಂತಹ ಜಾಗ ಗುರುತಿಸುವುದೇ ವಿಳಂಬವಾಗುತ್ತಿದೆ.

ಈ ಹಿಂದೆ ಅರಣ್ಯ ಇಲಾಖೆಗೆ ಬಿಟ್ಟುಕೊಟ್ಟಿದ್ದ ಕಂದಾಯ ಭೂಮಿ ಮರಳಿ ಪಡೆಯಬೇಕು. ಈ ನಿಟ್ಟಿನಲ್ಲಿ ಸರ್ಕಾರ ಸೂಚಿಸಿರುವ ಹೆಕ್ಟೇರ್ ಪ್ರದೇಶ ಗುರುತಿಸುವ ಕಾರ್ಯದಲ್ಲಿ ಅರಣ್ಯ ವ್ಯವಸ್ಥಾಪನ ಅಧಿಕಾರಿ (ಎಫ್ಎಸ್ಒ) ಮುಖ್ಯವಾಗುತ್ತಾರೆ. ಆ ಕೆಲಸವಾದರೆ ರೈತರ ಸಾಕಷ್ಟು ಸಮಸ್ಯೆ ಬಗೆಹರಿಯಲಿದೆ.
– ಎಚ್.ಎಸ್.ಇನೇಶ್, ಅಧ್ಯಕ್ಷ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಕೊಪ್ಪ

'ಉಳಿಕೆಯಾದ ಜಂಟಿ ಸರ್ವೆ'

ರೈತರು ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಕಂದಾಯ ಇಲಾಖೆಯು ಅರಣ್ಯ ಇಲಾಖೆಗೆ ಕಳುಹಿಸಿದ ಕಡತಗಳಿಗೆ ನಿರಾಕ್ಷೇಪಣಾ ಪತ್ರದ ಬಳಿಕವಷ್ಟೇ ಕಂದಾಯ ಇಲಾಖೆ ಮುಂದಿನ ಹೆಜ್ಜೆ ಇಡಲು ಸಾಧ್ಯ. ಅರಣ್ಯ ಒತ್ತುವರಿ ಎಂಬ ಕಾರಣಕ್ಕೆ ಜಂಟಿ ಸರ್ವೆಗೆ ಅರ್ಜಿಗಳು ಬಾಕಿ ಉಳಿದಿವೆ. ಸರ್ವೆ ನಡೆಸಲು ಟಾಸ್ಕ್ ಫೋರ್ಸ್ ಸಮಿತಿ ರಚನೆಯಾಗದ ಹೊರತು ತಾಲ್ಲೂಕಿನಲ್ಲಿ ಕಂದಾಯ ಭೂಮಿ ಅರಣ್ಯ ಭೂಮಿ ಎಂಬ ಗೊಂದಲ ಬಗೆಹರಿಯಲು ಸಾಧ್ಯವಾಗುತ್ತಿಲ್ಲ. ಇದು ಕೃಷಿಕರನ್ನು ಚಾತಕ ಪಕ್ಷಿಯಂತೆ ಕಾಯುತ್ತ ಕೂರುವಂತೆ ಮಾಡಿದೆ.

ಅರಣ್ಯ ಅಭಿಪ್ರಾಯವೇ ತೊಡಕು

ಪೋಡಿಮುಕ್ತ ಗ್ರಾಮ ಯೋಜನೆ ಅಡಿಯಲ್ಲಿ ಪ್ರತ್ಯೇಕ ಸರ್ವೆ ನಂಬರ್ ಪಹಣಿ ಪಡೆಯುವ ಕೃಷಿಕರ ಪ್ರಯತ್ನಕ್ಕೆ ಅರಣ್ಯ ಅಭಿಪ್ರಾಯವೇ ತೊಡಕಾಗಿದೆ. ತಾಲ್ಲೂಕಿನ 240 ಸರ್ವೆ ನಂಬರ್‌ಗಳಿಂದ ಒಟ್ಟು 2460 ಖಾತೆದಾರರ ಜಮೀನು ಪಕ್ಕಾಪೋಡಿಗೆ ಆನ್‌ಲೈನ್ ಅರ್ಜಿ ಹೋಗಿದ್ದು ಇದರಲ್ಲಿ ಬೇರೆ ಬೇರೆ ಸರ್ವೆ ನಂಬರ್‌ಗಳ 35 ಮಂದಿ ಖಾತೆದಾರರ ಜಮೀನಿಗೆ ಅಭಿಪ್ರಾಯ ಬಂದಿದೆ. ಈ ಪೈಕಿ 9 ಖಾತೆದಾರರ ಜಮೀನು ಪಕ್ಕಾಪೋಡಿಗೆ ಯಾವುದೇ ಅಡ್ಡಿ ಇಲ್ಲ. ಉಳಿದ ಖಾತೆದಾರರ ಜಮೀನು ಅರಣ್ಯ ಬಫರ್ ಜೋನ್ ಸೊಪ್ಪಿನಬೆಟ್ಟ ಮತ್ತಿತರೆ ಕಾರಣಕ್ಕೆ ತಡವಾಗುತ್ತಿದೆ. ಇದೀಗ 1996ಕ್ಕಿಂತ ಮೊದಲು ಮಂಜೂರಾಗಿದ್ದ ಜಮೀನನ್ನು ಪೋಡಿಗೆ ಮೊದಲ ಹಂತದಲ್ಲಿ (1-5) ಪರಿಗಣಿಸಬಹುದು ಎಂದು ಜಿಲ್ಲಾಧಿಕಾರಿ ಆದೇಶ ಬಂದಿದೆ. ಅದು ಸದ್ಯದಲ್ಲೇ ಕಾರ್ಯಗತಗೊಳ್ಳಲಿದೆ ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
Comments0