ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳಗೋಡಿನಲ್ಲಿ ತೀರದ ದಾಹ: ಗ್ರಾಮಸ್ಥರ ಆಕ್ರೋಶ

Published 1 ಮಾರ್ಚ್ 2024, 6:54 IST
Last Updated 1 ಮಾರ್ಚ್ 2024, 6:54 IST
ಅಕ್ಷರ ಗಾತ್ರ

ಕಳಸ: ‘ಬೇಸಿಗೆ ಆರಂಭದಲ್ಲೇ ಕುಡಿಯುವ ನೀರಿಲ್ಲ ಎಂದರೆ ಮುಂದೆ ಮಾರ್ಚ್, ಏಪ್ರಿಲ್‍ನಲ್ಲಿ ನಮ್ಮ ಕಥೆ ಏನು ಆಗಬಹುದು’ ಎಂದು ಆಳಗೋಡಿನ ಮೀನಾಕ್ಷಿ ಹೇಳುವ ಮಾತು ಆಳುಗೋಡಿನ ಗ್ರಾಮಸ್ಥರ ನೀರಿನ ಸಮಸ್ಯೆಯ ಸ್ಪಷ್ಟ ಚಿತ್ರಣ ಕೊಡುತ್ತದೆ.

‘ನಮ್ಮ ಜನಪ್ರತಿನಿಧಿಗಳೂ ನಮ್ಮ ಊರಿನ ಬಗ್ಗೆ ಉದಾಸೀನ ತೋರಿಸುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮನೆ ಮನೆಗೆ ಬಂದು ಮತ ಕೇಳುತ್ತಾರೆ. ಆ ನಂತರ ನಮ್ಮ ದುಃಸ್ಥಿತಿ ಬಗ್ಗೆ ಯಾರಿಗೂ ಕಾಳಜಿ ಇಲ್ಲ’ ಎಂಬುದು ಆಳಗೋಡಿನ ಗ್ರಾಮಸ್ಥರು ಆಕ್ರೋಶದ ಮಾತುಗಳು.

‘ರಸ್ತೆ, ಕುಡಿಯುವ ನೀರಿನ ಸಮಸ್ಯೆ ಸರಿಪಡಿಸದ ಕಾರಣಕ್ಕೆ ಹಿಂದಿನ ಚುನಾವಣೆ ಬಹಿಷ್ಕಾರ ಮಾಡಿದ್ದೆವು. ಆಗ ಬಂದಿದ್ದ ಅಧಿಕಾರಿಗಳು ಎಲ್ಲ ಸಮಸ್ಯೆಗಳನ್ನು ಆರು ತಿಂಗಳಲ್ಲಿ ಬಗೆಹರಿಸುವ ಭರವಸೆ ಕೊಟ್ಟಿದ್ದರು. ಆದರೆ, ಈವರೆಗೂ ಯಾವ ಸಮಸ್ಯೆ ಕೂಡ ಬಗೆಹರಿದಿಲ್ಲ. ಈ ಬಾರಿ ಮತ್ತೆ ಚುನಾವಣೆ ಬಹಿಷ್ಕಾರ ಮಾಡಬೇಕಾ’ ಎಂದು ಗ್ರಾಮಸ್ಥರಾದ ಶ್ರೀನಿವಾಸ ಪ್ರಶ್ನಿಸುತ್ತಾರೆ.

‘ನಮ್ಮ ಊರಿಗೆ ಕುಡಿಯುವ ನೀರಿಗೆ ಕಟ್ಟಿದ್ದ ಟ್ಯಾಂಕ್ ಜಖಂ ಆಗಿದೆ. ತೊಟ್ಟಿಯಲ್ಲಿ ನೀರು ನಿಲ್ಲುತ್ತಿಲ್ಲ. ಈಗ ಮೂರು ಕಿಲೋ ಮೀಟರ್ ದೂರದಿಂದ ನೀರು ಹೊತ್ತು ತರಬೇಕಾಗಿದೆ. ನಮ್ಮ ಊರಿನ ಜನರಿಗೆ ನೀರಿನ ಸೌಲಭ್ಯ ಕೊಡಲು ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ಕೇಳಿದರೆ ಅನುದಾನ ಇಲ್ಲ ಎನ್ನುತ್ತಾರೆ. ಬೇರೆಲ್ಲ ಊರಲ್ಲೂ ನೀರು, ರಸ್ತೆ ಸೌಲಭ್ಯ ಇದೆ. ಆದರೆ, ನಮ್ಮ ಊರಲ್ಲಿ ನೀರೂ ಇಲ್ಲ, ರಸ್ತೆನೂ ಇಲ್ಲ’ ಎಂದು ಮೀನಾಕ್ಷಿ ಆಕ್ರೋಶದಿಂದ ಹೇಳಿದರು.

‘ಆಸುಪಾಸಿನ ತಾಲ್ಲೂಕುಗಳಿಗೆ ಹೋಲಿಸಿದರೆ ನಮ್ಮ ತಾಲ್ಲೂಕಿನಲ್ಲಿ ಯಾಕೆ ಇಷ್ಟು ಕಡಿಮೆ ಅಭಿವೃದ್ಧಿ ಎಂಬುದೇ ಅರ್ಥ ಆಗುತ್ತಿಲ್ಲ. ಇಲ್ಲಿ ಆನೆ, ಕಾಡುಕೋಣದ ಹಾವಳಿ ಕೂಡ ಹೆಚ್ಚಾಗಿದೆ. ಗುಡ್ಡದಿಂದ ಬರುವ ನೀರಿನ ಪೈಪ್‍ಗಳನ್ನು ಆನೆಗಳು ಪುಡಿ ಮಾಡುತ್ತವೆ. ನಾವು ನೀರು ಕಟ್ಟಿಕೊಂಡು ಬರಲು ಕಾಡಿಗೆ ಹೋಗಲು ಧೈರ್ಯ ಸಾಕಾಗಲ್ಲ’ ಎಂದು ಗ್ರಾಮಸ್ಥರಾದ ಅನಂತ ಆಚಾರ್ ದುಃಖದಿಂದ ಹೇಳುತ್ತಾರೆ.

‘ನಾವು ಸರ್ಕಾರದಿಂದ ಅನ್ನ ಕೇಳಿದ್ದೀವಾ. ನಾವೆಲ್ಲ ಕೂಲಿ ಕಾರ್ಮಿಕರು. ಕೆಲಸ ಮಾಡಿ ಜೀವನ ಮಾಡ್ತೀವಿ. ಆದರೆ, ಈ ವರ್ಷ ಹಳ್ಳದ ನೀರೆಲ್ಲ ಬತ್ತಿ ಹೋಗಿದೆ. ಸರ್ಕಾರ ನೀರು ಕೊಟ್ಟರೆ ಸಾಕು, ಇನ್ನೇನೂ ಕೇಳುವುದಿಲ್ಲ’ ಎಂದು ಬೇಸರದಿಂದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT