ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರೋಣ್ ಮೂಲಕ ಅಡಿಕೆ ಗಿಡಗಳಿಗೆ ಔಷಧಿ ಸಿಂಪರಣೆ ಪ್ರಾತ್ಯಕ್ಷಿಕೆ ಇಂದು

Last Updated 18 ಜುಲೈ 2018, 17:29 IST
ಅಕ್ಷರ ಗಾತ್ರ

ಕೊಪ್ಪ: ಅಡಿಕೆ ಗಿಡಗಳಿಗೆ ಡ್ರೋಣ್ ಮೂಲಕ ಕೊಳೆ ಔಷಧಿ ಸಿಂಪಡಿಸುವ ವಿನೂತನ ವಿಧಾನವನ್ನು ಪರಿಚಯಿಸುವ ಕಾರ್ಯಕ್ರಮ ಇದೇ 19ರ ಗುರುವಾರ ತಾಲ್ಲೂಕಿನ ಹರಿಹರಪುರ ಹೋಬಳಿ ವ್ಯಾಪ್ತಿಯ ಬೇಳೆಗದ್ದೆಯಲ್ಲಿ ನಡೆಯಲಿದೆ.

ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರೂ ಆಗಿರುವ ಬೇಳೆಗದ್ದೆಯ ಪ್ರಗತಿಪರ ಕೃಷಿಕ ಬಿ.ಸಿ. ನರೇಂದ್ರ ಅವರ ಅಡಿಕೆ ತೋಟದಲ್ಲಿ ಮಧ್ಯಾಹ್ನ 2.30ಕ್ಕೆ ಬೆಂಗಳೂರಿನ ಜನರಲ್ ಏರೋನಾಟಿಕ್ಸ್ ಸಂಸ್ಥೆ ಡ್ರೋಣ್ ಮೂಲಕ ಕೊಳೆ ಔಷಧಿ ಸಿಂಪಡಿಸುವ ಪ್ರಾತ್ಯಕ್ಷಿಕೆ ನಡೆಸಿಕೊಡಲಿದೆ.

ಮಲೆನಾಡು ಭಾಗದಲ್ಲಿ ಕಳೆದ ಹಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಬೋರ್ಡೋ ಸಿಂಪರಣೆ ಸಾಧ್ಯವಾಗದೆ ಅಡಿಕೆ ಗಿಡಗಳಿಗೆ ಕೊಳೆ ರೋಗ ಆವರಿಸುವ ಚಿಂತೆ ರೈತರನ್ನು ಕಾಡಿದೆ.

ಹಾಗೊಮ್ಮೆ ಮಳೆ ಬಿಡುವು ನೀಡಿದರೂ ಅಡಿಕೆ ಮರ ಏರುವ ಕಾರ್ಮಿಕರು (ಕೊನೆಕಾರರು) ಸಕಾಲಕ್ಕೆ ಸಿಗದೆ ಔಷಧಿ ಸಿಂಪರಣೆ ಕಾರ್ಯಕ್ಕೆ ತೀವ್ರ ತೊಂದರೆ ಎದುರಾಗುತ್ತಿದೆ. ಕಾರ್ಮಿಕರು ಸಿಕ್ಕರೂ ಮಳೆ ನೀರಿನಿಂದ ತೊಯ್ದು ಪಾಚಿಕಟ್ಟಿ ಜಾರುವ ಅಡಿಕೆ ಮರ ಹತ್ತುವಾಗ ಜಾರಿ ಬಿದ್ದು, ಪ್ರಾಣಾಪಾಯ ಸಂಭವಿಸುವ ಸಾಧ್ಯತೆಗಳೂ ಇರುವುದರಿಂದ ಬಹುತೇಕ ರೈತರು ಸುಡು ಬಿಸಿಲು ಬರುವವರೆಗೆ ಕಾರ್ಮಿಕರನ್ನು ಅಡಿಕೆ ಮರ ಹತ್ತಿಸುವ ದುಸ್ಸಾಹಸಕ್ಕೆ ಮುಂದಾಗುವುದಿಲ್ಲ.

ಇಂತಹ ನೂರೆಂಟು ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಪ್ರಯತ್ನಗಳು, ಸಂಶೋಧನೆಗಳು ಕೃಷಿ ಕ್ಷೇತ್ರದಲ್ಲಿ ನಿರಂತರ ನಡೆಯುತ್ತಲೇ ಇವೆ. ಹರಿಹರಪುರದ ಶ್ರೀನಿವಾಸಮೂರ್ತಿ ಎಂಬವರು ವಿದ್ಯುತ್ ಮೋಟರ್ ಬಳಸಿ ಅಡಿಕೆ ಮರದಷ್ಟು ಎತ್ತರದ ಪಿವಿಸಿ ಪೈಪ್ ಮೂಲಕ ಔಷಧಿ ಸಿಂಪಡಿಸುವ ಸುಲಭ ಸಾಧನ ಸಿದ್ಧಪಡಿಸಿ ರೈತರ ಮೆಚ್ಚುಗೆ ಗಳಿಸಿದ್ದು, ಶೃಂಗೇರಿಯ ಗಣೇಶ್ ಶೆಟ್ಟಿ ಎಂಬವರು ಮಾನವರಹಿತವಾಗಿ ಅಡಿಕೆ ಮರ ಹತ್ತಿ ಔಷಧಿ ಸಿಂಪಡಿಸುವ ರೋಬೋಟ್ ಯಂತ್ರವನ್ನು ನಿರ್ಮಿಸಿ ಯಶಸ್ಸು ಕಂಡಿದ್ದರು.

ಇದೀಗ ಬೆಂಗಳೂರಿನ ಜನರಲ್ ಏರೋನಾಟಿಕ್ಸ್ ಸಂಸ್ಥೆ ಇನ್ನೂ ಒಂದು ಹೆಜ್ಜೆ ಮುಂದೆ ಸಾಗಿ ಹಕ್ಕಿಯಂತೆ ಹಾರುವ ‘ಡ್ರೋಣ್’ ಮೂಲಕ ಕೊಳೆ ಔಷಧಿ ಸಿಂಪಡಿಸುವ ವಿಧಾನವನ್ನು ಕಂಡುಹಿಡಿದು ರೈತರಿಗೆ ಪರಿಚಯಿಸಲು ಮುಂದಾಗಿದೆ.

ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಜನರಲ್ ಏರೋನಾಟಿಕ್ಸ್ ಸಂಸ್ಥೆಯ ಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಭಿಷೇಕ್ ಬರ್ಮನ್ ಭಾಗವಹಿಸಿ ಮಾಹಿತಿ ನೀಡಲಿದ್ದಾರೆ. ಆಸಕ್ತ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಬೇಳೆಗದ್ದೆಯ ಕೃಷಿಕ ಬಿ.ಸಿ. ನರೇಂದ್ರ (94498 63281) ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT