ಗುರುವಾರ, 24 ಜುಲೈ 2025
×
ADVERTISEMENT
ADVERTISEMENT

ಚಿಕ್ಕಮಗಳೂರು | ಮಾನವ–ಆನೆ ಸಂಘರ್ಷ ಮತ್ತೆ ಹೆಚ್ಚಳ

ಕಾಡುಬಿಟ್ಟು ನಾಡಿಗೆ ಬರುವ ಆನೆಗಳು
Published : 2 ಡಿಸೆಂಬರ್ 2024, 7:15 IST
Last Updated : 2 ಡಿಸೆಂಬರ್ 2024, 7:15 IST
ಫಾಲೋ ಮಾಡಿ
Comments
ಕಾಡಾನೆಗಳಿಂದ ರೈತರಿಗೆ ತೀವ್ರ ತೊಂದರೆಯಾಗುತ್ತಿದೆ. ಸರ್ಕಾರ ಈ ಬಗ್ಗೆ ಹೆಚ್ಚಿನ ಗಮನ ಹರಿಸಿ ಅರಣ್ಯ ಇಲಾಖೆ ಮೂಲಕ ಆನೆಗಳ ಹಾವಳಿ ನಿಯಂತ್ರಿಸಬೇಕು
–ಬಿ.ಎಸ್.ಸದಾನಂದ ಬೇಳೆಗದ್ದೆ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಕೊಪ್ಪ
ಕಾಡುಕೋಣ ಮತ್ತಿತರೆ ಪ್ರಾಣಿಗಳ ಹಾವಳಿ ಎದುರಿಸುತ್ತಿರುವ ಶೃಂಗೇರಿ ಕ್ಷೇತ್ರದ ಜನರಿಗೆ ಈಗ ಕಾಡಾನೆ ಸಮಸ್ಯೆ ಎದುರಾಗಿದೆ. ಜನರಿಗೆ ರಕ್ಷಣಾತ್ಮಕ ಕ್ರಮ ಕೈಗೊಳ್ಳಲು ವಿಶೇಷ ಕಾರ್ಯಪಡೆ ಆರಂಭಿಸಿ ಆನೆಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು.
ಮಹೇಂದ್ರ ಎಸ್. ವಕೀಲ ಕೊಪ್ಪ.
ಕೊಪ್ಪ ಎನ್.ಆರ್.ಪುರಕ್ಕೂ ವಿಸ್ತರಣೆ
ಕಾಡುಕೋಣ ಹಂದಿ ಮಂಗಗಳ ಉಪಟಳ ಮಾತ್ರ ಎದುರಿಸಿದ್ದ ಎನ್.ಆರ್.ಪುರ ಮತ್ತು ಕೊಪ್ಪ ತಾಲ್ಲೂಕಿನಲ್ಲೂ ಕಾಡಾನೆ ಹಾವಳಿ ಜಾಸ್ತಿಯಾಗಿದೆ. ಎನ್.ಆರ್.ಪುರ ತಾಲ್ಲೂಕಿನ ಸೀತೂರು ಗ್ರಾಮದ ಸಮೀಪ ಕೆರೆಗದ್ದೆಯ ಉಮೇಶ್ ಎಂಬುವರನ್ನು ಆನೆ ತುಳಿದು ಸಾಯಿಸಿದೆ. ಕೊಪ್ಪ ಪಟ್ಟಣ ಸಮೀಪದ ನಂದಿಗೋಡು ಪ್ರದೇಶದಲ್ಲಿ ಭತ್ತದ ಗದ್ದೆ ಅಡಿಕೆ ತೋಟಗಳಲ್ಲಿ ಆನೆ ಲದ್ದಿಯನ್ನು ಕಂಡು ಜನ ಭಯಗೊಂಡಿದ್ದರು. ಭದ್ರಾ ಅಭಯಾರಣ್ಯದಿಂದ ಹೊರ ಬಂದಿರುವ ಆನೆಗಳು ಇಲ್ಲಿ ಸಂಚರಿಸುತ್ತಿರಬಹುದು ಎಂದು ಸ್ಥಳೀಯರು ಹೇಳುತ್ತಾರೆ. ಆನೆಗಳು ಕಂಡಾಗ ಅವುಗಳನ್ನು ಹಿಂಬಾಲಿಸಿ ಓಡಿಸುವ ಪ್ರಯತ್ನ ಮಾಡಿ ಘಾಸಿಗೊಳಿಸಬಾರದು. ಬೆಳೆಹಾನಿಗಿಂತ ಪ್ರಾಣಹಾನಿ ತಡೆಯುವುದು ಮುಖ್ಯ ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳ ಅಭಿಪ್ರಾಯ.
ಬೇಲೂರು ಗಡಿ ದಾಟಿದ ಬೀಟಮ್ಮ
25 ದಿನಗಳಿಂದ ಚಿಕ್ಕಮಗಳೂರಿನಲ್ಲಿ ಬೀಡು ಬಿಟ್ಟಿದ್ದ ಬೀಟಮ್ಮ–3 ತಂಡದ 24ಕ್ಕೂ ಹೆಚ್ಚು ಆನೆಗಳ ಗುಂಪು ಶನಿವಾರ ಮತ್ತೆ ಜಿಲ್ಲೆಯ ಗಡಿ ದಾಟಿ ಹಾಸನ ಜಿಲ್ಲೆಯ ಕಡೆಗೆ ತೆರಳಿವೆ. ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಬಿಕ್ಕೋಡು ಬಳಿ ಇರುವ ಬೀಟಮ್ಮ–1 ಬೀಟಮ್ಮ–2 ಮತ್ತು ಭುವನೇಶ್ವರಿ ತಂಡದಲ್ಲಿ 50ಕ್ಕೂ ಹೆಚ್ಚು ಆನೆಗಳಿದ್ದವು. ಅವುಗಳಿಂದ 23 ಆನೆಗಳು ಬೇರ್ಪಟ್ಟವು. ಮೂಡಿಗೆರೆ ಗಡಿ ಮೂಲಕ ಜಿಲ್ಲೆಗೆ ಪ್ರವೇಶ ಪಡೆದು ಸುತ್ತಮುತ್ತ ಓಡಾಡುತ್ತಿವೆ. ಈ ಪೈಕಿ ಆಲ್ದೂರು ಬಳಿ ಒಂದು ಸಲಗ ವಿದ್ಯುತ್ ತಂತಿ ತಗುಲಿ ಮೃತಪಟ್ಟಿತ್ತು. ಇದಾದ ಬಳಿಕ ಚಿಕ್ಕಮಗಳೂರು ಜಿಲ್ಲೆಯ ಮಾರಿಕಟ್ಟೆ ಬಳಿ ನೆಲೆ ನಿಂತಿದ್ದ ಆನೆಗಳು ಸುತ್ತಮುತ್ತಲ ರೈತರಿಗೆ ತಲೆನೋವಾಗಿ ಕಾಡಿದ್ದವು.  ಇವುಗಳೊಂದಿಗೆ ಒಂಟಿಯಾಗಿದ್ದ ಭೀಮ ಆನೆ ಕೂಡ ಈ ಗುಂಪು ಸೇರಿಕೊಂಡಿತ್ತು. ನಾಲ್ಕೈದು ಮರಿಯಾನೆಗಳಿದ್ದು ಅವುಗಳ ರಕ್ಷಣೆಯಲ್ಲಿ ಉಳಿದ ಆನೆಗಳು ತೊಡಗಿದ್ದವು. ಈಗ ಬೇಲೂರು ಗಡಿಗೆ ಪ್ರವೇಶ ಪಡೆದಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
‘ಸಿದ್ದ ಉತ್ತರ ಬೇರೆ; ಸತ್ಯೆ ಬೇರೆ’
ನರಸಿಂಹರಾಜಪುರ: ‘ಕಾಡು ನಾಶವಾಗಿದೆ ಆನೆ ಇರಬೇಕಾದಲ್ಲಿ ನಾವಿದ್ದೇವೆ ಕಾಡಲ್ಲಿ ಆಹಾರವೇ ಇಲ್ಲ. ಹೀಗೆ ಹಲವು ಸಿದ್ದ ಉತ್ತರದ ನಡುವೆ ಇನ್ನಷ್ಟು ಸತ್ಯದ ವಿಚಾರವೂ ಇವೆ’ ಎಂದು ತೋಟದಗೆರೆ ಕೃಷಿಕ ಎಸ್.ಸುನಿಲ್ ಅಭಿಪ್ರಾಯಪಟ್ಟರು. ‘1950ರ ಆಸುಪಾಸಿನಲ್ಲಿ ನಾವಿರುವ ಯಾವುದೇ ಪ್ರದೇಶ ಆನೆ ಪಥವಲ್ಲ. ಈ ಪ್ರದೇಶದಲ್ಲಿ ಅರ್ಧ ಭಾಗ ಭದ್ರಾ ಹಿನ್ನೀರಾದರೆ ಇನ್ನರ್ಧ ಕೃಷಿ ಭೂಮಿ. 1950ರ ಸಂದರ್ಭದಲ್ಲಿ ಇದ್ದ ಆನೆ ಸಂಖ್ಯೆಗೂ ಈಗಿನ ಸಂಖ್ಯೆಗೂ ಸಾವಿರಾರೂ ಹೆಚ್ಚಳವಾಗಿದೆ’ ಎಂದರು. ‘ಕಾಡಲ್ಲಿ ಅಲೆಯುವ ಬದಲು ಹತ್ತಿರದ ಗ್ರಾಮಕ್ಕೆ ನುಗ್ಗಿದರೆ ತರಹೇವಾರು ಬೆಳೆ ಆಹಾರವಾಗಿ ಸಿಗುವುದರಿಂದ ಆಸೆಗೆ ಬಿದ್ದು ಆನೆಗಳು ಗ್ರಾಮಕ್ಕೆ ನುಗ್ಗುತ್ತಿವೆ. ನಾವು ಕೃಷಿಯನ್ನು ಬಿಟ್ಟರೆ ಅವು ಪಟ್ಟಣಕ್ಕೆ ಬರುತ್ತವೆ’ ಎಂದು ಹೇಳಿದರು. ‘ತಮಿಳುನಾಡು ಮತ್ತು ಮೈಸೂರಿನ ಸೋಲಿಗರ ಹಟ್ಟಿಯಲ್ಲಿ ಶ್ರೀಲಂಕಾದಲ್ಲಿ ಇದು ನಿಜವಾಗಿದೆ. ಆನೆ ನಿಯಂತ್ರಣಕ್ಕೆ ವೈಜ್ಞಾನಿಕವಾಗಿ ಯೋಚಿಸಿ ಅರಣ್ಯ ಇಲಾಖೆಯಲ್ಲಿ ವ್ಯರ್ಥವಾಗುತ್ತಿರುವ ಕೋಟ್ಯಾಂತರ ಹಣವನ್ನು ಗ್ರಾಮದ ಕೃಷಿಕರಿಗೆ ನೀಡಿ ಬೆಳೆದ ಬೆಳೆ ಇಲಾಖೆ ನೀಡಿ ಆನೆಗೆ ಆಹಾರವಾಗಲಿ. ಆನೆ–ಮಾನವ ಸಂಘರ್ಷ ತಪ್ಪಿಸಬಹುದು’ ಎಂದು ಸಲಹೆ ನೀಡಿದರು.
ಕಾಡಿನ ಕಡೆಗೆ ಓಡಿಸಲು ಕ್ರಮ
'ಭದ್ರಾ ಮುತ್ತೋಡಿ ಹೆಬ್ಬೆ ಅಥವಾ ಕೂಸ್ಗಲ್ ಕಡೆಯಿಂದ ಈ ಭಾಗಕ್ಕೆ ಕಾಡಾನೆ ಬಂದಿರಬಹುದು. ಅದು ವಾಪಾಸ್ ಟ್ರ್ಯಾಕ್ ಗೆ ಬರುವ ವರೆಗೆ ಪತ್ತೆ ಹಚ್ಚುವುದು ಕಷ್ಟಸಾಧ್ಯ’ ಎಂದು ಕೊಪ್ಪ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಎಲ್.ನಂದೀಶ್ ತಿಳಿಸಿದರು. ‘ಒಂದು ಗಂಡಾನೆ ಒಂದು ಹೆಣ್ಣಾನೆ ಒಂದು ಮರಿ ಇದೆ ಎಂದು ಹೇಳುತ್ತಿದ್ದಾರೆ. ಸಾಮಾನ್ಯವಾಗಿ ಒಂದು ಗಂಡಾನೆ ಜತೆಗೆ ಒಂದೇ ಹೆಣ್ಣಾನೆ ಇರುವುದಿಲ್ಲ. ಒಂದು ವೇಳೆ ತಂಡದಿಂದ ಹೊರ ಹಾಕಲ್ಪಟ್ಟ ಗಂಡಾನೆ ಇದ್ದರೂ ಇರಬಹುದು. ಒಂದು ವಾರದೊಳಗೆ ಪತ್ತೆ ಹಚ್ಚುತ್ತೇವೆ. ಕಾಡಿನ ಕಡೆಗೆ ಓಡಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದರು.
ಶಾಶ್ವತ ಪರಿಹಾರ ರೂಪಿಸಲಿ
ನರಸಿಂಹರಾಜಪುರ ತಾಲ್ಲೂಕಿನ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಕಳೆದ ಸಾಲಿನಲ್ಲಿ ಜನವರಿ ಫೆಬ್ರುವರಿ ತಿಂಗಳ ನಂತರ ಆನೆ ಹಾವಳಿ ಆರಂಭವಾಗಿತ್ತು. ಈ ವರ್ಷ ಈಗಾಗಲೇ ಆನೆಗಳು ಗ್ರಾಮದ ವ್ಯಾಪ್ತಿಗೆ ಬರಲು ಆರಂಭಿಸಿರುವುದರಿಂದ ಇವುಗಳ ಹಾವಳಿ ತೀವ್ರವಾಗುವ ಸಾಧ್ಯತೆಯಿದೆ ಎಂದು ಮೆಣಸೂರು ಗ್ರಾಮ ಪಂಚಾಯಿತಿ ಸದಸ್ಯ ಎನ್.ಡಿ.ಪ್ರಸಾದ್ ಹೇಳಿದರು. ಅರಣ್ಯ ಅಧಿಕಾರಿಗಳು ಆನೆಗಳನ್ನು ಅವುಗಳ ಮೂಲ ಸ್ಥಾನಕ್ಕೆ ಓಡಿಸುವ ಪ್ರಯತ್ನ ಮಾಡಬೇಕು. ಗ್ರಾಮಸ್ಥರು ಆನೆಗಳನ್ನು ಓಡಿಸಿದಾಗ ಒಂದು ಗ್ರಾಮದಿಂದ ಇನ್ನೊಂದು ಗ್ರಾಮಕ್ಕೆ ಹೋಗುವುದು ಆ ಗ್ರಾಮದವರು ಓಡಿಸಿದಾಗ ಮತ್ತೊಂದು ಗ್ರಾಮಕ್ಕೆ ಹೋಗುವುದರಿಂದ ತೊಂದರೆಯಾಗಲಿದೆ ಎಂದರು. ಇದು ಶಾಶ್ವತ ಪರಿಹಾರಲ್ಲ. ಗ್ರಾಮಸ್ಥರಿಗೆ ಆನೆಗಳನ್ನು ಓಡಿಸುವ ಅನುಭವ ಇಲ್ಲದಿರುವುದರಿಂದ ಅನಾಹುತಗಳು ಸಂಭವಿಸುವ ಸಾಧ್ಯತೆಯೇ ಹೆಚ್ಚು. ರೈಲ್ವೆ ಕಂಬಿಗಳನ್ನು ಅಳವಡಿಸುವ ಮೂಲಕ ಶಾಶ್ವತವಾಗಿ ಅರಣ್ಯದಿಂದ ಆನೆಗಳನ್ನು ಗ್ರಾಮಕ್ಕೆ ಬರುವುದನ್ನು ತಪ್ಪಿಸಬೇಕು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT