ಭ್ರಷ್ಟಾಚಾರ ನಿರ್ಮೂಲನೆಗೆ ಜನಲೋಕಪಾಲ ಜಾರಿಗೆ ಆಗ್ರಹ

7

ಭ್ರಷ್ಟಾಚಾರ ನಿರ್ಮೂಲನೆಗೆ ಜನಲೋಕಪಾಲ ಜಾರಿಗೆ ಆಗ್ರಹ

Published:
Updated:
Deccan Herald

ಚಿಕ್ಕಮಗಳೂರು: ಜನಲೋಕಪಾಲ ಜಾರಿಗೊಳಿಸಬೇಕು, ಭ್ರಷ್ಟರ ಅಕ್ರಮ ಸಂಪತ್ತನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಅಖಿಲ ಭಾರತ ಎರಡನೇ ಸ್ವಾತಂತ್ರ್ಯ ಚಳವಳಿ ಸಂಸ್ಥೆ ಅಧ್ಯಕ್ಷ ಬಿ.ಎ.ಕೃಷ್ಣೇಗೌಡ ಆಗ್ರಹಿಸಿದರು.

‘ಭ್ರಷ್ಟಾಚಾರ ಸಾಕು, ಜನಲೋಕಪಾಲ ಬೇಕು’ ಎಂದು ಹೋರಾಟಗಾರ ಅಣ್ಣಾ ಹಜಾರೆ ಮಹಾರಾಷ್ಟ್ರದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿರುವುದನ್ನು ಬೆಂಬಲಿಸಿ ಸಂಸ್ಥೆ ವತಿಯಿಂದ ನಗರದ ಆಜಾದ್‌ ಪಾರ್ಕ್‌ ವೃತ್ತದಲ್ಲಿ ಮಂಗಳವಾರ ನಡೆದ ಧರಣಿಯಲ್ಲಿ ಮಾತನಾಡಿದರು. ‘ದೇಶಕ್ಕೆ ಭ್ರಷ್ಟಾಚಾರದ ಗೆದ್ದಲು ಹಿಡಿದಿದೆ. ಬಿಗಿಕಾನೂನು ಜಾರಿಗೊಳಿಸಿ ಗೆದ್ದಲನ್ನು ನಿರ್ಮೂಲನೆ ಮಾಡಬೇಕು. ದೇಶವನ್ನು ಭ್ರಷ್ಟಾಚಾರ ಮುಕ್ತಗೊಳಿಸುವುದಾಗಿ ಪ್ರಧಾನಿ ಮೋದಿ ಹೇಳಿದ್ದರು. ಆದರೆ, ಅದನ್ನು ಪರಿಣಾಮಕಾರಿಯಾಗಿ ಮಾಡಿಲ್ಲ’ ಎಂದು ಹೇಳಿದರು.

ಕ್ರಿಮಿನಲ್‌ ಪ್ರಕರಣಗಳ ಹಿನ್ನೆಲೆ ಇರುವವರೂ ಜನಪ್ರತಿನಿಧಿಗಳಾಗಿ ಆಯ್ಕೆಯಾಗಿದ್ದಾರೆ. ಬಲಾಢ್ಯರು, ಜನಪ್ರತಿನಿಧಿಗಳು, ಅಧಿಕಾರಿಗಳು ದೇಶವನ್ನು ಲೂಟಿ ಮಾಡುತ್ತಿದ್ದಾರೆ ಎಂದರು.

ಮುಖಂಡ ಬಿ.ಅಮ್ಜದ್‌ ಮಾತನಾಡಿ, ‘ರಾಜಕಾರಣದಲ್ಲಿ ಸೇವಾ ಮನೋಭಾವ ಮರೆಯಾಗಿದೆ. ಅದು ವ್ಯಾಪಾರ–ಉದ್ಯಮವಾಗಿದೆ. ಮತದಾರರಿಗೆ ಹಣದ ಆಮಿಷವೊಡ್ಡಿ ಮತ ಖರೀದಿಸುತ್ತಾರೆ. ಜನಪ್ರತಿನಿಧಿಯಾಗಿ ಆಯ್ಕೆಯಾದ ನಂತರ ಲೂಟಿಯಲ್ಲಿ ತೊಡಗುತ್ತಾರೆ. ಲಾಭದ ದೃಷ್ಟಿಕೋನದಿಂದಲೇ ಎಲ್ಲವನ್ನೂ ಲೆಕ್ಕಾಚಾರ ಹಾಕುವ ಪರಿಪಾಠ ರೂಢಿಸಿಕೊಂಡಿದ್ದಾರೆ’ ಎಂದು ಕಟಕಿಯಾಡಿದರು.

‘ರಾಜಕಾರಣದಲ್ಲಿ ಹಣಬಲ, ತೋಳ್ಬಲಗಳೇ ಪ್ರಧಾನವಾಗಿವೆ. ಸಂಸದರ ಪೈಕಿ ಶೇ 75ರಷ್ಟು ಆಗರ್ಭ ಶ್ರೀಮಂತರು ಇದ್ದಾರೆ. ಇಂಥವರಿಂದ ದೇಶದ ಸಮಸ್ಯೆಗಳಿಗೆ ಪರಿಹಾರ ನಿರೀಕ್ಷಿಸಲಾಗದು’ ಎಂದರು.

‘ವಜ್ರಾಭರಣ ಉದ್ಯಮಿ ನೀರವ್‌ ಮೋದಿ, ಉದ್ಯಮಿ ವಿಜಯ್‌ ಮಲ್ಯ ಅಂಥವರು ಬ್ಯಾಂಕುಗಳಿಗೆ ಸಹಸ್ರಾರು ಕೋಟಿ ಪಂಗನಾಮ ಹಾಕಿದ್ದಾರೆ. ಭ್ರಷ್ಟಾಚಾರ ನಿರ್ಮೂಲನೆಯಾಗದ ಹೊರತು ದೇಶದ ಅಭಿವೃದ್ಧಿ ಅಸಾಧ್ಯ. ಜನಲೋಕಪಾಲ ಜಾರಿಗೆ ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಬೇಕು’ ಎಂದು ಒತ್ತಾಯಿಸಿದರು.

ಸಂಸ್ಥೆ ಪ್ರಧಾನ ಕಾರ್ಯದರ್ಶಿ ಡಾ.ಕೆ.ಸುಂದರಗೌಡ ಮಾತನಾಡಿ, ಜನಲೋಕಪಾಲ ಮಸೂದೆಯ ರಾಜ್ಯ ಸಮಿತಿ ಸದಸ್ಯರಾಗಿ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಅವರನ್ನು ಸೇರಿಸಬೇಕು ಎಂದು ಒತ್ತಾಯಿಸಿದರು.

ಗಂಗಾಂಧರ, ಮುರುಗೇಶ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !