ಮಂಗಳವಾರ, ಮೇ 17, 2022
26 °C
ವಸತಿ ಹಕ್ಕು ಮಂಜೂರು ಮಾಡಲು ಆಗ್ರಹಿಸಿ ನಡೆದ ಪ್ರತಿಭಟನೆ

ರೈತರ ಬದುಕಿನೊಂದಿಗೆ ಸರ್ಕಾರ ಚೆಲ್ಲಾಟ: ಶಾಸಕ ರಾಜೇಗೌಡ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶೃಂಗೇರಿ: ‘ವಿಧಾನಸಭಾ ಕ್ಷೇತ್ರದ ಎಂಟು ಹೋಬಳಿಗಳಲ್ಲಿ ಕಸಬಾ ಹೋಬಳಿಯ ನಾಲ್ಕು ಅಕ್ರಮ-ಸಮಿತಿಯ ಅಧ್ಯಕ್ಷ ಸ್ಥಾನವನ್ನು ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಅವರಿಗೆ ನೀಡಿ ನನ್ನ ಹಕ್ಕು ಚ್ಯುತಿಗೊಳಿಸಲಾಗಿದೆ. ಡಿ.ಎನ್ ಜೀವರಾಜ್ ಶಾಸಕರಾಗಿದ್ದಾಗ ಸಾಗುವಳಿ ಚೀಟಿ ವಿತರಣೆ ಆದವರಿಗೆ ಪಹಣಿ ನೀಡಲು ವಿಫಲರಾಗಿದ್ದರು’ ಎಂದು ಶಾಸಕ ಟಿ.ಡಿ ರಾಜೇಗೌಡ ಆರೋಪಿಸಿದರು.

ಸೊಪ್ಪಿನಬೆಟ್ಟ ಅಧಿಕೃತ ಸಾಗುವಳಿ ಮತ್ತು ವಸತಿ ಹಕ್ಕು ಮಂಜೂರು ಮಾಡಲು ಆಗ್ರಹಿಸಿ ಶೃಂಗೇರಿಯಲ್ಲಿ ಸೋಮವಾರ ಬ್ಲಾಕ್ ಕಾಂಗ್ರೆಸ್ ಆಯೋಜಿಸಿದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ‘ಒಕ್ಕಲು ಎಬ್ಬಿಸುವ ಕಾರ್ಯಕ್ಕೆ ಬಿಜೆಪಿ ಹೊರಟಿದೆ. ಸರ್ಕಾರಗಳ ಎಲ್ಲಾ ಯೋಜನೆಗಳು ನನೆಗುದಿಗೆ ಬಿದ್ದಿವೆ. ಜನರ ಹಿತವನ್ನು ಬಯಸಿ ವಿವಿಧ ಯೋಜನೆಯನ್ನು ರೂಪಿಸಬೇಕು’ ಎಂದರು.

‘ಕೇಂದ್ರ ಸರ್ಕಾರವು ರೈತರ ಹೋರಾಟವನ್ನು ಗಂಭೀರವಾಗಿ ತೆಗೆದುಕೊಳ್ಳದೇ ರೈತರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದೆ. ಈಗಾಗಲೇ ದೆಹಲಿಯಲ್ಲಿ ನೂರಕ್ಕೂ ಅಧಿಕ ರೈತರು ಹೋರಾಟದಲ್ಲಿ ಸಾವನ್ನಪ್ಪಿದ್ದಾರೆ’ ಎಂದು ಹೇಳಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಕೆ.ಪಿ ಅಂಶುಮಂತ್ ಮಾತನಾಡಿ, ‘ತಾಲ್ಲೂಕಿನಲ್ಲಿ ಅರಣ್ಯ ಮತ್ತು ವಿವಿಧ ಪರಿಸರದ ಯೋಜನೆಗಳು ಜನರಿಗೆ ತೊಂದರೆಯಾಗುತ್ತಿದೆ. ಫಾರಂ ನಂಬ್ರ 50, 53 ಮತ್ತು 57 ಕೃಷಿ ಭೂಮಿ ಮಂಜೂರಾತಿ ಆಗುತ್ತಿಲ್ಲ. 94ಸಿ, 94ಸಿಸಿ ಯೋಜನೆಯಡಿ ವಸತಿಗೆ ಸುಮಾರು 5,500 ಅರ್ಜಿಗಳು ಹಾಕಿದ್ದರೂ, ಮಂಜೂರಾತಿಗೆ ಸೊಪ್ಪಿನಬೆಟ್ಟ ಅಡ್ಡಿಯಾಗುತ್ತಿದೆ. ಅದನ್ನು ತೆಗೆಯಲು ಆದೇಶ ನೀಡಲು ಸರ್ಕಾರ ಮೀನಮೇಷ ಎಣಿಸುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಿಜೆಪಿಯದ್ದೇ ಆದರೂ ಸಂಸದೆ ಶೋಭಾ ಕರಂದ್ಲಾಜೆ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್ ಜೀವರಾಜ್ ಮೌನವಾಗಿದ್ದಾರೆ' ಎಂದು ಆರೋಪಿಸಿದರು.

ವಕೀಲ ಬಿ.ಎ.ರಮೇಶ್ ಹೆಗ್ಡೆ ಮಾತನಾಡಿ, ‘ಒತ್ತುವರಿ ಭೂಮಿ ಮಂಜೂರಾತಿಗೆ ಆದೇಶ ನೀಡಬೇಕಾದ ಸರ್ಕಾರ ರೈತರ ಮೇಲೆ ಭೂಕಬಳಿಕೆ ಕಾಯ್ದೆಯನ್ನು ಹಾಕಿ, ರೈತರನ್ನು ಜೈಲಿಗೆ ಕಳುಹಿಸುತ್ತಿದೆ. ರೈತರ ಬದುಕಿಗೆ ಮಾರಕವಾದ ಕಸ್ತೂರಿರಂಗನ್ ವರದಿ, ಹುಲಿ ಯೋಜನೆ, ಎಪಿಎಂಸಿ ಕಾಯ್ದೆ ಜಾರಿ ಮಾಡಿ, ರೈತರನ್ನು ಬಾವಿಗೆ ತಳ್ಳುತ್ತಿದೆ. ಜನಸಾಮಾನ್ಯರ ಜೀವನದೊಂದಿಗೆ ಆಟವಾಡುವರ ವಿರುದ್ಧ  ಧ್ವನಿ ಎತ್ತಬೇಕು’ ಎಂದು ಹೇಳಿದರು.

ಪ್ರತಿಭಟನಾ ಜಾಥಾ ಸಂತೆ ಮಾರ್ಕೆಟ್‍ನಿಂದ ಬಸ್‌ನಿಲ್ದಾಣದ ತನಕ ನಡೆಯಿತು. ತಹಶೀಲ್ದಾರ್ ಅಂಬುಜಾ ಅವರ ಮುಖಾಂತರ ಸರ್ಕಾರಕ್ಕೆ ಕಾಂಗ್ರೆಸ್ ಮುಖಂಡರು ಮನವಿ ಪತ್ರ ಸಲ್ಲಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎಂ.ನಟರಾಜ್, ಕಾಂಗ್ರೆಸ್ ಮುಖಂಡರಾದ ದಿನೇಶ್ ಹೆಗ್ಡೆ, ರಮೇಶ್ ಭಟ್, ಕ್ಷೇತ್ರ ರೈತ ಸಂಘದ ಅಧ್ಯಕ್ಷ ನವೀನ್ ಕರುವಾನೆ, ತಾಲ್ಲೂಕು ಪಂಚಾಯಿತಿ ಸದಸ್ಯ ಕೆ.ಆರ್.ವೆಂಕಟೇಶ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು