ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜ್ಜಂಪುರ: ಅಂತರಗಟ್ಟೆ ದುರ್ಗಾಂಬಾದೇವಿ ರಥೋತ್ಸವ

ವಿವಿಧ ಜಿಲ್ಲೆಗಳಿಂದ ಹರಿದುಬಂದ ಭಕ್ತ ಸಮೂಹ
Last Updated 8 ಫೆಬ್ರುವರಿ 2020, 11:40 IST
ಅಕ್ಷರ ಗಾತ್ರ

ಅಜ್ಜಂಪುರ: ಬಯಲು ಸೀಮೆಯ ದೊಡ್ಡ ಜಾತ್ರಾ ಮಹೋತ್ಸವಗಳಲ್ಲಿ ಒಂದಾದ ‘ದುರ್ಗಾಂಬಾ ದೇವಿ’ ರಥೋತ್ಸವ ತಾಲ್ಲೂಕಿನ ಅಂತರಗಟ್ಟೆಯಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ಬೆಳಿಗ್ಗೆ ನೆರವೇರಿತು.

ರಥೋತ್ಸವ ನಡೆಯುತ್ತಿದ್ದಂತೆ ಸ್ಥಳದಲ್ಲಿದ್ದ ಸಾವಿರಾರು ಭಕ್ತರು ಜಯಘೋಷ, ಚಪ್ಪಾಳೆ ಹಾಕಿ ಹರ್ಷೋದ್ಘಾರ ಮಾಡಿದರು. ಬಾಳೆಹಣ್ಣು, ನಿಂಬೆಹಣ್ಣನ್ನು ರಥದ ಕಳಸದತ್ತ ಎಸೆದು ಸಂಭ್ರಮಿಸಿದರು. ಬಳಿಕ ರಥದ ಮೇಲಿದ್ದ ದೇವಿಗೆ ಹೂ-ಹಣ್ಣು ಸಮರ್ಪಿಸಿ, ಭಕ್ತಿ ಮೆರೆದರು.

ಜಾತ್ರಾ ಮಹೋತ್ಸವ ಅಂಗವಾಗಿ ದುರ್ಗಾಂಬೆ, ಮಾರಾಳಮ್ಮ ದೇವಿ, ಮಾತಂಗೆಮ್ಮ, ಗೋಣಿ ಮರದಮ್ಮ ದೇವಿ ಉತ್ಸವ ಮೂರ್ತಿಯನ್ನು ವಿವಿಧ ಹೂವುಗಳಿಂದ ಅಲಂಕರಿಸಿ, ಪೂಜೆ ಸಲ್ಲಿಸಲಾಗಿತ್ತು. ಬಂದಿದ್ದವರು ಸರತಿ ಸಾಲಿನಲ್ಲಿ ದೇವಾಲಯ ಪ್ರವೇಶಿಸಲು ವ್ಯವಸ್ಥೆ ಮಾಡಲಾಗಿತ್ತು.

ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ ಜಿಲ್ಲೆಗಳಿಂದಲೂ ಭಕ್ತರು ಬಂದಿದ್ದರು. ಬಸ್‍ಗಳಲ್ಲದೇ ಸಾವಿರಾರು ಎತ್ತಿನ ಬಂಡಿ, ನೂರಾರು ಟ್ರ್ಯಾಕ್ಟರ್, ಟ್ರಕ್, ಆಟೊಗಳಲ್ಲಿ ಸಾವಿರಾರು ಜನ ಬಂದಿದ್ದರು.

ಉಪವಿಭಾಗಾಧಿಕಾರಿ ರೂಪಾ, ಅಜ್ಜಂಪುರ ತಹಶೀಲ್ದಾರ್‌ ವಿಶ್ವೇಶ್ವರ ರೆಡ್ಡಿ, ಶಾಸಕ ಡಿ.ಎಸ್. ಸುರೇಶ್ ದೇವಾಲಯಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು. ಪೊಲೀಸ್, ಗೃಹ ರಕ್ಷಕ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು. ಇದಕ್ಕೆ ಅಂಗನವಾಡಿ ಕಾರ್ಯಕರ್ತೆಯರ ಸೇವೆಯನ್ನು ಬಳಸಿಕೊಳ್ಳಲಾಗಿತ್ತು.

ಸ್ಥಳೀಯ ಗ್ರಾಮ ಪಂಚಾಯಿತಿಯು ರಸ್ತೆ ದೂಳು ಅಡಗಿಸಲು ಟ್ರ್ಯಾಕ್ಟರ್ ಮೂಲಕ ನೀರು ಪೂರೈಸಲಾಗಿತ್ತು. ಜಾನುವಾರಿಗೆ ತೊಟ್ಟಿಗಳ ಮೂಲಕ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಜನರಿಗೂ ಕುಡಿಯುವ ನೀರಿನ ಕೊರತೆ ಆಗದಂತೆ ಕ್ರಮಕೈಗೊಂಡಿತ್ತು.

ಮುಖ್ಯ ರಸ್ತೆಯಿಂದ ದೇವಾಲಯ ಕಡೆಗೆ ಸಾಗುವ ವಾಹನಗಳಿಗೆ ಪ್ರತ್ಯೇಕ ಮಾರ್ಗ ಕಲ್ಪಿಸದೇ ಇರುವುದರಿಂದ ವಾಹನ, ಜನದಟ್ಟಣೆ ಪರದಾಡುವಂತಾಯಿತು ಎಂದು ಭದ್ರಾವತಿಯ ರವಿಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

ದೇವಾಲಯ ಪ್ರವೇಶಿಸುವ ರಸ್ತೆಯಲ್ಲಿಯೇ ಕೋಳಿ ಅಂಗಡಿ ತೆರೆಯಲಾಗಿದೆ. ಕೋಳಿ ತ್ಯಾಜ್ಯದಿಂದ ಹೊರ ಬರುತ್ತಿದ್ದ ದುರ್ವಾಸನೆ ಮೂಗು ಮುಚ್ಚಿ ಸಾಗುವಂತೆ ಮಾಡಿದೆ. ಮುಂದಿನ ವರ್ಷ, ಕೋಳಿ ಮಾರಾಟಕ್ಕೆ ಮುಖ್ಯರಸ್ತೆಗೆ ಬದಲು ಅನತಿ ದೂರದಲ್ಲಿ ಅವಕಾಶ ಮಾಡಿಕೊಡಬೇಕು ಎಂದು ಸ್ಥಳೀಯ ನಿವಾಸಿ ಹನುಮಂತಪ್ಪ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT