ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಹೂ ಮಾರುಕಟ್ಟೆಯ ಸ್ಥಳದ ವಿವಾದ; ರೈತರು-ಅಧಿಕಾರಿಗಳ ಸಭೆಗೆ ಮೀನಮೇಷ

ಹೂ ಮಾರುಕಟ್ಟೆಯ ಸ್ಥಳದ ವಿವಾದ; ಈಡೇರದ ಸಚಿವ ಸುಧಾಕರ್ ಭರವಸೆ
Last Updated 4 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ರೈತರು, ಅಧಿಕಾರಿಗಳು, ವ್ಯಾಪಾರಿಗಳನ್ನು ಒಳಗೊಂಡ ಸಭೆಯನ್ನುಸೋಮವಾರ (ನ.15) ನಡೆಸಲಾಗುವುದು. ಜಿಲ್ಲಾಡಳಿತ ಗುರುತಿಸಿರುವ ಜಮೀನು ಸೂಕ್ತವಲ್ಲ ಎಂದರೆ ನೀವು ಯಾವ ಸರ್ಕಾರಿ ಜಮೀನು ತೋರಿಸುವಿರೊ ಅಲ್ಲಿ ಮಾರುಕಟ್ಟೆಯನ್ನು ನಿರ್ಮಿಸಿಕೊಡಲಾಗುವುದು’– ಇದು 2021ರ ನವೆಂಬರ್ 13ರಂದು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಾ.ಕೆ.ಸುಧಾಕರ್, ಹೂ ವ್ಯಾಪಾರಿಗಳು ಮತ್ತು ರೈತರಿಗೆ ನೀಡಿದ್ದ ಭರವಸೆ.

ಹೀಗೆ ಭರವಸೆ ನೀಡಿ ಎರಡೂವರೆ ತಿಂಗಳಾಯಿತು. ಒಮ್ಮೆಯೂ ರೈತರು, ಹೂ ವ್ಯಾಪಾರಿಗಳು ಮತ್ತು ಅಧಿಕಾರಿಗಳನ್ನು ಒಳಗೊಂಡ ಸಭೆಯನ್ನು ಸಚಿವರು ನಡೆಸಿಲ್ಲ. ಈ ತಾತ್ಸಾರ ವರ್ತಕರು ಮತ್ತು ರೈತರಲ್ಲಿ ಮತ್ತಷ್ಟು ಆಕ್ರೋಶವನ್ನು ಹೆಚ್ಚಿಸಿದೆ.

ನಗರದ ಕೆ.ವಿ.ಕ್ಯಾಂಪಸ್‌ ಬಳಿಯ ಹೂವಿನ ತಾತ್ಕಾಲಿಕ ಮಾರುಕಟ್ಟೆ ಅವ್ಯವಸ್ಥೆಯಿಂದ ಕೂಡಿದೆ. ಎಪಿಎಂಸಿಯಲ್ಲಿ ವಹಿವಾಟಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿನ.13ರಂದು ಹೂ ಬೆಳೆಗಾರರು ಹಾಗೂ ವರ್ತಕರು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿದರು. ಖುದ್ದು ಸ್ಥಳಕ್ಕೆ ಬಂದ ಡಾ.ಕೆ.ಸುಧಾಕರ್, ಭರವಸೆ ಹಿನ್ನೆಲೆಯಲ್ಲಿ ಪ್ರತಿಭಟನೆ ವಾಪಸ್ ಪಡೆದಿದ್ದರು. ಆದರೆ ಅಂದಿನಿಂದ ಇಂದಿನವರೆಗೂ ಸಭೆ ನಡೆಸುವ ಭರವಸೆ ಈಡೇರಿಲ್ಲ!

‘ಎ‍ಪಿಎಂಸಿಯಲ್ಲಿ ಹೂ ವಹಿವಾಟು ನಡೆಸಲು ಅವಕಾಶವಿಲ್ಲ. ಜಾಗ ಕಡಿಮೆ ಇದೆ‘ ಎಂದು ಡಾ.ಕೆ.ಸುಧಾಕರ್ ಹೇಳಿದ್ದರು. ಈ ಎಲ್ಲ ದೃಷ್ಟಿಯಿಂದ ಸಚಿವರ ನೇತೃತ್ವದಲ್ಲಿ ಅಧಿಕಾರಿಗಳು, ರೈತರು ಮತ್ತು ವರ್ತಕರ ‌ಸಭೆ ನಡೆದಿದ್ದರೆ ಹೂ ಮಾರುಕಟ್ಟೆಯ ವಿವಾದ ತಾರ್ಕಿಕ ಅಂತ್ಯ ಕಾಣುವ ಸಾಧ್ಯತೆ ಇತ್ತು. ಆದರೆ ಸಭೆಯೇ ನಡೆಯದಿರುವುದು ದಿನದಿಂದ ದಿನಕ್ಕೆ ಪರಿಸ್ಥಿತಿಯನ್ನು ಜಟಿಲಗೊಳಿಸುತ್ತಿದೆ. ವರ್ತಕರು ಮತ್ತು ರೈತರಲ್ಲಿ ಆಕ್ರೋಶ ಹೆಚ್ಚಿಸುತ್ತಿದೆ.

‘ಹೂ ವ್ಯಾಪಾರಿಗಳ ಮಳಿಗೆಗಳು ಇವೆ. ಎಪಿಎಂಸಿಯಲ್ಲಿ ಅವಕಾಶ ನೀಡುವುದಿಲ್ಲ ಎಂದರೆ ಹೇಗೆ? ನಾವೂ ಹಣ ನೀಡಿಯೇ ಮಳಿಗೆಗಳನ್ನು ಖರೀದಿಸಿದ್ದೇವೆ. ಒಂದು ವರ್ಷದ ಹಿಂದೆ ನಡೆಯುತ್ತಿದ್ದ ವಹಿವಾಟನ್ನು ಬೇರೆಡೆಗೆ ತಾತ್ಕಾಲಿಕವಾಗಿ ಸ್ಥಳಾಂತರಿಸಿದರು. ಹೀಗೆ ಎಪಿಎಂಸಿಯಲ್ಲಿ ಅವಕಾಶ ಇಲ್ಲ ಎಂದರೆ ಹೇಗೆ? ಎಪಿಎಂಸಿಯಲ್ಲಿಯೇ ವಹಿವಾಟಿಗೆಅವಕಾಶ ನೀಡಬೇಕು’ ಎಂದು ಕೆಲವು ಹೂ ವ್ಯಾಪಾರಿಗಳು ಆಗ್ರಹಿಸುವರು.

ಸಮಸ್ಯೆ ಕುರಿತು ಚರ್ಚಿಸಲು ಕೆಲವು ರೈತರು, ವರ್ತಕರು ಡಾ.ಕೆ.ಸುಧಾಕರ್ ಅವರ ಬೆಂಗಳೂರು ನಿವಾಸಕ್ಕೆ ಹೋಗಿದ್ದರು. ಆದರೆ ಸಚಿವರ ಭೇಟಿ ಸಾಧ್ಯವಾಗಲಿಲ್ಲ.ಮೂರನೇ ಅಲೆಯ ಕೋವಿಡ್ ತಗ್ಗಿದೆ. ಈಗಲಾದರೂ ಸಚಿವರು ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು ಎನ್ನುತ್ತಾರೆ ವ್ಯಾಪಾರಿಗಳು.

ಎಪಿಎಂಸಿಗೆ ಹೂ ಮಾರುಕಟ್ಟೆಯನ್ನು ಸ್ಥಳಾಂತರಿಸಬೇಕು ಎಂದು ಆ.30ರಂದು ಸಹ ರೈತರು, ವರ್ತಕರು ಪ್ರತಿಭಟನೆ ನಡೆಸಿದ್ದರು. ಅಧಿಕಾರಿಗಳು ಮತ್ತು ವರ್ತಕರ ನಡುವೆ ಮಾತಿನ ಚಕಮಕಿ ನಡೆದಿತ್ತು.ಹೀಗೆ ಹೂ ಮಾರುಕಟ್ಟೆಯ ವಿಚಾರ ಆಗಾಗ್ಗೆ ಬೀದಿಗೆ ಬರುತ್ತಿದೆ.

‘ರಾಜಕೀಯ ಇಚ್ಛಾಶಕ್ತಿಯ ಕೊರತೆಯ ಕಾರಣದಿಂದ ಸಮಸ್ಯೆ ನನೆಗುದಿಗೆ ಬಿದ್ದಿದೆ’ ಎಂದು ಹೂ ಬೆಳೆಗಾರರು ಮತ್ತು ವ್ಯಾಪಾರಿಗಳು ಆರೋಪಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT