ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: 2 ಕಡೆ ಮೇವು ಬ್ಯಾಂಕ್‌ ಆರಂಭಕ್ಕೆ ಸಿದ್ಧತೆ

ಟೆಂಡರ್‌ ಪ್ರಕ್ರಿಯೆ ಮುಕ್ತಾಯ: ಎಪಿಎಂಸಿ ಪ್ರಾಂಗಣ, ಬಸವಕೋಡಿಯ ಸ್ಥಳ ಪರಿಶೀಲನೆ
Last Updated 15 ಜುಲೈ 2019, 20:00 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ತಾಲ್ಲೂಕಿನಲ್ಲಿ ಮೇವು ಬ್ಯಾಂಕ್‌ ತೆರೆಯಲು ಟೆಂಡರ್‌ ಪ್ರಕ್ರಿಯೆ ಮುಗಿದು, ಎರಡು ಕಡೆ ಆರಂಭಿಸಲು ಸಿದ್ಧತೆ ನಡೆದಿದೆ.

ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಪ್ರಾಂಗಣ ಮತ್ತು ಲಕ್ಯಾ ಹೋಬಳಿಯ ಈಶ್ವರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವಕೋಡಿಯಲ್ಲಿ ಮೇವು ಬ್ಯಾಂಕ್‌ ಆರಂಭಿಸಲು ಉದ್ದೇಶಿಸಲಾಗಿದೆ. ತಹಶೀಲ್ದಾರ್‌ ನಂದಕುಮಾರ್‌ ಮತ್ತು ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಸಿ.ರಮೇಶ್‌ ಸ್ಥಳ ಪರಿಶೀಲನೆ ಮಾಡಿದ್ದಾರೆ.

‘ಜಿಲ್ಲೆಯಲ್ಲಿ ಮೇವು ಸದ್ಯಕ್ಕೆ ಇದೆ. ಅಭಾವ ತಲೆದೋರುವ ಸೂಚನೆ ಇರುವ ಕಡೆಗಳಲ್ಲಿ ಮೇವು ಬ್ಯಾಂಕ್‌ ತೆರೆಯಲು ಸನ್ನದ್ಧರಾಗಿದ್ದೇವೆ’ ಎಂದು ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಮಲ್ಲಿಕಾರ್ಜುನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲೆಯ ಮಲೆನಾಡು ಭಾಗದಲ್ಲೂ ವಾಡಿಕೆಗಿಂತ ಬಹಳ ಕಡಿಮೆ ಮಳೆಯಾಗಿದೆ. ಚಿಕ್ಕಮಗಳೂರು ತಾಲ್ಲೂಕಿನ ಬಯಲುಸೀಮೆಯ ಹೋಬಳಿಗಳು, ಕಡೂರು, ತರೀಕೆರೆ, ಅಜ್ಜಂಪುರ ಭಾಗದಲ್ಲಿ ಮಳೆ ಇಲ್ಲ. ಈ ಭಾಗದಲ್ಲಿ ಬಹುತೇಕ ಕೆರೆಕಟ್ಟೆಗಳು ಬರಿದಾಗಿವೆ. ಜಾನುವಾರುಗಳಿಗೆ ನೀರು, ಮೇವು ಹೊಂದಿಸುವುದು ರೈತರಿಗೆ ಕಷ್ಟವಾಗಿದೆ.

ಜಿಲ್ಲೆಯಲ್ಲಿ 13 ವಾರಗಳಿಗೆ ಸಾಕಾಗುವಷ್ಟು ಮೇವು ಲಭ್ಯ ಇದೆ. ಕಡೂರು ತಾಲ್ಲೂಕಿನಲ್ಲಿ ಒಂದು ವಾರಕ್ಕೆ ಆಗುವಷ್ಟು ಲಭ್ಯ ಇದೆ.

ಮೇವಿನ ಕೊರತೆಯಾಗದಂತೆ ನಿಭಾಯಿಸಲು ಇಲಾಖೆ ಮುಂದಾಗಿದೆ. ‘ಎಟಿಎಂ’, ‘ಸೋರ್ಗಂ’, ‘ಸೂಡಾಚಾರಿ’ ತಳಿಯ ಬೀಜಗಳ 44,662 ಮಿನಿ ಕಿಟ್‌ಗಳನ್ನು ವಿತರಿಸಲಾಗಿದೆ.

‘ಮೇವು ಬ್ಯಾಂಕ್‌ ತೆರೆಯುವ ನಿಟ್ಟಿನಲ್ಲಿ ಸಭೆ ಮಾಡಲಾಗಿದೆ. ಟೆಂಡರ್‌ ಪ್ರಕ್ರಿಯೆ ಮುಗಿದಿದೆ. ಎಪಿಎಂಸಿ ಪ್ರಾಂಗಣ, ಬಸವಕೋಡಿ ಸ್ಥಳ ಗುರುತಿಸಲಾಗಿದೆ. ಅತಿ ಶೀಘ್ರದಲ್ಲಿ ಆರಂಭಿಸಲಾಗುವುದು’ ಎಂದು ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಸಿ.ರಮೇಶ್‌ ತಿಳಿಸಿದರು.

‘ಸ್ಥಳ ಪರಿಶೀಲನೆ ಮಾಡಲಾಗಿದೆ. ಪಶುಪಾಲನಾ ಇಲಾಖೆಯವರು ಮೇವು ಬ್ಯಾಂಕ್‌ ನಿರ್ವಹಣೆ ಮಾಡುತ್ತಾರೆ. ಸಿಬ್ಬಂದಿ ಒದಗಿಸಲಾಗುವುದು’ ಎಂದು ತಹಶೀಲ್ದಾರ್‌ ನಂದಕುಮಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT