ಬುಧವಾರ, ಮೇ 27, 2020
27 °C
ನಗರಸಭೆ, ಪೊಲೀಸರು, ಸ್ವಯಂಸೇವಕರ ನೆರವಿನ ಹಸ್ತ

ನಿರ್ಗತಿಕರಿಗೆ ಆಹಾರ, ತಾತ್ಕಾಲಿಕ ಗೂಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ನಗರದ ಬಸ್‌–ರೈಲು ನಿಲ್ದಾಣ, ರಸ್ತೆಗಳು, ಪಾದಚಾರಿ ಮಾರ್ಗಗಳು ಇತರೆಡೆಗಳಲ್ಲಿ ಅಲೆದಾಡುತ್ತಿದ್ದ ನಿರ್ಗತಿಕರನ್ನು ಸ್ವಯಂಸೇವಕರು ಕರೆತಂದು ತಂಗಲು ಗೂಡಿನ ವ್ಯವಸ್ಥೆ ಮಾಡಿ, ಆಹಾರ ನೀಡಿ ಮಾನವೀಯ ಮುಖ ತೋರಿದ್ದಾರೆ.

ಕೊರೊನಾ ವೈರಾಣು ಹರಡದಂತೆ ತಡೆ ನಿಟ್ಟಿನಲ್ಲಿ ಲಾಕ್‌ಡೌನ್‌ನಿಂದಾಗಿ ಅಂಗಡಿ, ಮಳಿಗೆ, ಹೋಟೆಲ್‌, ಲಾಡ್ಜ್‌ ಮುಚ್ಚಿದ್ದು ನಗರ ಸ್ತಬ್ಧವಾಗಿದೆ. ಜನರನ್ನು ಕಾಡಿಬೇಡಿ ಬದುಕು ಸಾಗಿಸುವ ಭಿಕ್ಷಕರು, ನಿರ್ಗತಿಕರು ಆಹಾರಕ್ಕಾಗಿ ಪರದಾಡುವಂತಾಗಿದ್ದು, ಸ್ವಯಂಸೇವಕರು ಅವರಿಗೆ ಈಗ ನೆರವಿನ ಹಸ್ತ ಚಾಚಿದ್ದಾರೆ.

ಎಐಟಿ ವೃತ್ತದ ಬಳಿಯ ಅಂಬೇಡ್ಕರ್ ವಸತಿ ಶಾಲೆಯ ಪಡಸಾಲೆ, ಎರಡು ಕೊಠಡಿಗಳಲ್ಲಿ ವಾಸ್ತವ್ಯಕ್ಕೆ ಶುಕ್ರವಾರದಿಂದ ತಾತ್ಕಾಲಿಕ ವ್ಯವಸ್ಥೆ ಮಾಡಿದ್ದಾರೆ. ಇಲ್ಲಿ 30 ಮಂದಿ ಇದ್ದಾರೆ. ಇಲ್ಲಿರುವವರಿಗೆ ಪೊಲೀಸರು ಮುಖಗವುಸು (ಮಾಸ್ಕ್‌) ಒದಗಿಸಿದ್ದಾರೆ.
ನಗರಸಭೆ, ಪೊಲೀಸರು, ದಾನಿಗಳು, ಸ್ವಯಂಸೇವಾ ಸಂಸ್ಥೆಗಳ ನೆರವಿನಲ್ಲಿ ಉಪಹಾರ, ಊಟ, ಹೊದಿಕೆ, ಚಾಪೆ ವ್ಯವಸ್ಥೆ ಮಾಡಲಾಗಿದೆ. ಶೌಚಾಲಯ, ಸ್ನಾನದ ಗೃಹಗಳ ಸೌಲಭ್ಯ ಇದೆ.

ನಿರ್ಗತಿಕರಿಗೆ ತಾತ್ಕಾಲಿಕ ಸೌಲಭ್ಯ ಕಲ್ಪಿಸಲಾಗಿದೆ. ವೈದ್ಯಕೀಯ ತಪಾಸಣೆ ಮಾಡಿಸಲು ಕ್ರಮ ವಹಿಸಿ, ನಿಗಾ ವಹಿಸಲಾಗುವುದು ಎಂದು ನಗರಸಭೆ ಪ್ರಭಾರ ಆಯುಕ್ತ ಚಂದ್ರಶೇಖರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಸ್ವಯಂ ಸೇವಕ ಕಾರ್ತಿಕ್‌ ಚೆಟ್ಟಿಯಾರ್‌, ರೂಬೆನ್‌ ಮೊಸೆಸ್‌ ಸಹಿತ 15 ಸ್ವಯಂ ಸೇವಕರು ನಿರ್ಗತಿಕರ ಮೇಲೆ ನಿಗಾ ವಹಿಸಿದ್ದಾರೆ.
‘ಮಹಿಳೆಯರಿಗೆ, ಪುರಷರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಇದೆ. ಒಬ್ಬರಿಂದ ಒಬ್ಬರಿಗೆ ಅಂತರ ಇರುವಂತೆ ಗಮನ ಹರಿಸಲಾಗಿದೆ. ವಾಸ್ತವ್ಯ, ಉಪಹಾರ, ಊಟಕ್ಕೆ ವ್ಯವಸ್ಥೆ ಮಾಡಲಾಗಿದೆ’ ಎಂದು ರೂಬೆನ್‌ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.