ಶುಕ್ರವಾರ, ಏಪ್ರಿಲ್ 16, 2021
28 °C
ನಗರಸಭೆ ಬಿಲ್‌ಕಲೆಕ್ಟರ್‌ ಸಹಿತ ಮೂವರ ವಿರುದ್ಧ ದೂರು

ನಕಲಿ ಸೀಲು, ಸಹಿ: ಗೋಲ್‌ಮಾಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ತೆರಿಗೆ ಹಣವನ್ನು ಬ್ಯಾಂಕ್‌ ಖಾತೆಗೆ ಜಮೆ ಮಾಡದೆ, ನಕಲಿ ಸೀಲು– ಸಹಿಯ ರಸೀತಿ ನೀಡಿ ಗೋಲ್‌ಮಾಲ್‌ ಮಾಡಿದ್ದಾರೆ ಎಂದು ನಗರಸಭೆ ಬಿಲ್‌ಕಲೆಕ್ಟರ್‌ ಶಾಮ್‌ ಮತ್ತು ಮಧ್ಯವರ್ತಿಗಳಾದ ಕೇಶವ್‌, ಅಲಿ ಎಂಬವರ ವಿರುದ್ಧ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ನಾಗರಿಕರೊಬ್ಬರು ರಸೀತಿ ಗುಮೂನಿ ಮೂಡಿ ಆಯುಕ್ತ ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್‌ ಗಮನಕ್ಕೆ ತಂದಿದ್ದಾರೆ. ಆಯುಕ್ತರು ಪರಶೀಲನೆ ನಡೆಸಿ ದೂರು ದಾಖಲಿಸಿದ್ದಾರೆ.

‘ನಗರದ ಕೋಟೆ ಬಡಾವಣೆಯ ಬ್ಯಾಂಕ್‌ ಉದ್ಯೋಗಿ ಯೋಗೀಶ್ ಎಂಬವರು ಆಸ್ತಿ ತೆರಿಗೆ ₹10,300 ಮೊತ್ತವನ್ನು ಬಿಲ್‌ಕಲೆಕ್ಟರ್ ಶಾಮ್‌ ಅವರಿಗೆ ನೀಡಿದ್ದಾರೆ. ಒಂದು ವಾರದ ನಂತರ ಅವರು ಚಲನ್‌ ನೀಡಿದ್ದಾರೆ. ಹಣ ನೀಡಿದ್ದಕ್ಕಿಂತ ಮುಂಚಿನ ತಿಂಗಳ ದಿನಾಂಕ ನಮೂದಾಗಿರುವುದನ್ನು ನೋಡಿ ಗಮನಕ್ಕೆ ತಂದರು. ಪರಿಶೀಲಿಸಿದಾಗ ಚಲನ್‌ನಲ್ಲಿ ನಮೂದಾಗಿರುವ ತಾರೀಖು ಹಣ ಜಮೆಯಾಗಿಲ್ಲದಿರುವುದು ಕಂಡುಬಂದಿದೆ’ ಎಂದು ಬಸವರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಣವನ್ನು ಬ್ಯಾಂಕ್‌ಗೆ ಪಾವತಿಸಲು ಮಧ್ಯವರ್ತಿ ಕೇಶವ್‌ ಎಂಬಾತನಿಗೆ ಕೊಟ್ಟಿದ್ದೆ ಎಂದು ಶಾಮ್‌ ಹೇಳಿದ್ದಾರೆ. ಚಲನ್‌ನಲ್ಲಿನ ಸೀಲು, ಸಹಿ ನಕಲಿಯಾಗಿದೆ’ ಎಂದು ತಿಳಿಸಿದರು.

ಮತ್ತೊಂದು ಪ್ರಕರಣ: ನೆಹರುನಗರದ ನಿವಾಸಿ ನಾಸೀರ್‌ಉನ್ನಿಸಾ ಅವರು ₹22 ಸಾವಿರ ತೆರಿಗೆ ಪಾವತಿಸಿದ್ದಾರೆ. ಅವರಿಗೂ ತೆರಿಗೆ ಪಾವತಿಯಾಗಿರುವ ಬಗ್ಗೆ ಬ್ಯಾಂಕ್ ಚಲನ್ ನೀಡಲಾಗಿದೆ. ಬ್ಯಾಂಕ್ ಖಾತೆ ಪರಿಶೀಲಿಸಿದಾಗ ತೆರಿಗೆ ಹಣ ಜಮೆಯಾಗಿಲ್ಲ. ಮಧ್ಯವರ್ತಿ ಅಲಿ ಎಂಬಾತನ ಕೈವಾಡ ಇರುವುದು ಕಂಡು ಬಂದಿದೆ ಎಂದು ಅವರು ತಿಳಿಸಿದರು.

‘ನಕಲಿ ಸೀಲು, ಸಹಿ ಕೃತ್ಯದ ಹಿಂದಿನ ರಹಸ್ಯ, ಎಷ್ಟು ತೆರಿಗೆ ಹಣ ವಂಚಿಸಿದ್ದಾರೆ ಎಂಬುದು ಪತ್ತೆಯಾಗಬೇಕಿದೆ. ತೆರಿಗೆ ಪಾವತಿಸಿರುವ ನಗರಸಭೆಗೆ ಭೇಟಿ ನೀಡಿ ಮತ್ತೊಮ್ಮೆ ಪರಿಶೀಲಿಸಿಕೊಳ್ಳುವುದು ಒಳಿತು’ ಎಂದು ಅವರು ಹೇಳಿದರು.

ವಿಚಾರಣೆ ಶುರು: ನಗರ ಠಾಣೆ ಪೊಲೀಸರು ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಶುರು ಮಾಡಿದ್ದಾರೆ. ಇಬ್ಬರನ್ನು ಕರೆದೊಯ್ದು ವಿಚಾರಣೆ ಮಾಡಿದ್ದಾರೆ. ವಿಚಾರಣೆ ಶುರುವಾಗಿದೆ. ಮಾಹಿತಿ ಕಲೆ ಹಾಕುತ್ತಿದ್ದೇವೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಐಡಿ ತನಿಖೆಗೆ ಒತ್ತಾಯ

ನಗರಸಭೆ ತೆರಿಗೆ ಹಣವನ್ನು ಬ್ಯಾಂಕ್‌ ಖಾತೆಗೆ ಜಮೆ ಮಾಡದೆ ವಂಚಿಸಿರುವ ಪ್ರಕರಣದ ಹಿಂದೆ ದೊಡ್ಡ ಜಾಲವಿದೆ. ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಬೇಕು ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ಒತ್ತಾಯಿಸಿದ್ದಾರೆ.

ನಗರಸಭೆಯಲ್ಲಿ ಈ ಹಿಂದೆಯೂ ಇದೇ ರೀತಿಯ ಪ್ರಕರಣ ಪತ್ತೆಯಾಗಿತ್ತು. ಕೆಲ ಆರೋಪಿಗಳು ರಾಜಕೀಯ ಪ್ರಭಾವ ಬೀರಿ ಪ್ರಕರಣ ಮುಚ್ಚಿಹಾಕಿಸಿದ್ದರು. ಈಗಿನ ಪ್ರಕರಣದಲ್ಲಿ ನಗರಸಭೆ ನೌಕರರು ಶಾಮೀಲಾಗಿರುವ ಬಗ್ಗೆ ಗುಮಾನಿ ಇದೆ. ಈ ಬಗ್ಗೆ ತನಿಖೆಯ ಅಗತ್ಯ ಇದೆ ಆಗ್ರಹಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು