ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಮಗಳೂರು: ಬಿಜೆಪಿ ಕಾರ್ಯಕರ್ತರಿಂದಲೇ ‘ಶೋಭಾ ಗೋ ಬ್ಯಾಕ್’ ಘೋಷಣೆ

Published 10 ಮಾರ್ಚ್ 2024, 23:37 IST
Last Updated 10 ಮಾರ್ಚ್ 2024, 23:37 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಪತ್ರ ಚಳವಳಿ, ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದ್ದ ‘ಗೋ ಬ್ಯಾಕ್ ಶೋಭಕ್ಕ’ ಚಳವಳಿ ಜಿಲ್ಲೆಯಲ್ಲಿ ಈಗ ತೀವ್ರಗೊಂಡಿದ್ದು, ಬಿಜೆಪಿ ಕಾರ್ಯಕರ್ತರು ಪಕ್ಷದ ಕಚೇರಿಯಲ್ಲೇ ಭಾನುವಾರ ಗದ್ದಲ ಎಬ್ಬಿಸಿ ಆಕ್ರೋಶ ವ್ಯಕ್ತಪಡಿಸಿದರು.

ಅಭ್ಯರ್ಥಿ ಆಯ್ಕೆಗೆ ಅಭಿಪ್ರಾಯ ಸಂಗ್ರಹಕ್ಕಾಗಿ ಚುನಾವಣಾ ಉಸ್ತುವಾರಿ ಸಂಚಾಲಕ ಭಾನುಪ್ರಕಾಶ್ ಹಾಗೂ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಚುನಾವಣಾ ನಿರ್ವಹಣಾ ಸಮಿತಿಯ ಸಭೆ ಭಾನುವಾರ ನಡೆಯಿತು. ಆರಂಭದಲ್ಲೇ ವೇದಿಕೆ ಬಳಿಗೆ ಬಂದ ಕಾರ್ಯಕರ್ತರು, ‘ಶೋಭಾ ಕರಂದ್ಲಾಜೆ ಅವರನ್ನು ಅಭ್ಯರ್ಥಿ ಮಾಡಬಾರದು. ಚಿಕ್ಕಮಗಳೂರು ಜಿಲ್ಲೆಯವರಿಗೇ ಟಿಕೆಟ್ ನೀಡಬೇಕು. 10 ವರ್ಷಗಳಿಂದ ಸಂಸದೆಯಾಗಿರುವ ಶೋಭಾ ಅವರಿಗೆ ಪಕ್ಷದ ಬ್ಲಾಕ್ ಸಮಿತಿ ಮುಖಂಡರ ಪರಿಚಯವೇ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಅಭ್ಯರ್ಥಿ ಯಾರು ಎಂಬುದು ಇನ್ನೂ ನಿರ್ಣಯ ಆಗಲಿಲ್ಲ. ಶೋಭಾ ಅವರು 3 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಶೋಭಾ ಅವರೇ ಅಭ್ಯರ್ಥಿ ಎಂಬುದು ಇದರ ಅರ್ಥವಲ್ಲವೇ’ ಎಂದ ಕಾರ್ಯಕರ್ತರು ‘ಗುಂಪುಗಾರಿಕೆಯಿಂದಾಗಿ ವಿಧಾನಸಭೆ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ್ದೇವೆ. ನಗರಸಭೆಯ ಅಧ್ಯಕ್ಷ ಸ್ಥಾನವೂ ಕೈತಪ್ಪಿದೆ. ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಿದರೂ ಗೆದ್ದು ತೋರಿಸುತ್ತೇವೆ. ಕಾರ್ಯಕರ್ತರನ್ನು ಕಡೆಗಣಿಸಿ ಟಿಕೆಟ್ ನೀಡಿದರೆ ಶೋಭಾ ಅವರ ಸೋಲು ಖಚಿತ’ ಎಂದು ಎಚ್ಚರಿಕೆ ನೀಡಿದರು.

ಕಾರ್ಯಕರ್ತರನ್ನು ಸಮಾಧಾನಪಡಿಸಲು ಮುಖಂಡರು ನಡೆಸಿದ ಪ್ರಯತ್ನ ಯಶಸ್ವಿಯಾಗಲಿಲ್ಲ. ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್, ಮುಖಂಡರಾದ ಅನಿಲ್, ಮುತ್ತಯ್ಯ ಮತ್ತಿತರರು ಕಚೇರಿಯಿಂದ ಹೊರ ಬಂದು ಬಾಗಿಲ ಬಳಿ ಧರಣಿ ನಡೆಸಿದರು. ಜಿಲ್ಲಾ ಘಟಕದ ಅಧ್ಯಕ್ಷ ದೇವರಾಜಶೆಟ್ಟಿ, ಟಿ.ರಾಜಶೇಖರ್, ಪ್ರೇಮ್‍ಕುಮಾರ್, ರವೀಂದ್ರ ಬೆಳವಾಡಿ, ಸುಧೀರ್, ಚಿಕ್ಕದೇವನೂರು ರವಿ, ಪುಷ್ಪರಾಜ್ ಸಭೆಯಲ್ಲಿ ಪಾಲ್ಗೊಂಡಿದ್ದರು.

ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆಯಾದಾಗ ಕೇಂದ್ರ ಕೃಷಿ ಖಾತೆ ಸಚಿವೆಯಾಗಿ ಒಮ್ಮೆಯೂ ಭೇಟಿ ಮಾಡಿ ಪರಿಹಾರ ನೀಡಲಿಲ್ಲ. ಪಕ್ಷದ ಕಾರ್ಯಕರ್ತರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಬಿಜೆಪಿ 28 ಕ್ಷೇತ್ರಗಳಲ್ಲಿ ಗೆಲುತ್ತದೆ ಎಂದು ಭವಿಷ್ಯ ಹೇಳುತ್ತಿದ್ದಾರೆ. ಆದರೆ ಶೋಭಾಗೆ ಈ ಕ್ಷೇತ್ರದ ಟಿಕೆಟ್ ನೀಡಿದಲ್ಲಿ ಸೋಲು ನಿಶ್ಚಿತ.
-ಅನಿಲ್‍ಕುಮಾರ್ ಬಿಜೆಪಿ ಮುಖಂಡ
‘ಮೋದಿ ಮತ್ತೆ ಪ್ರಧಾನಿಯಾಗುವುದೇ ಗುರಿ’
‘ಪಕ್ಷದ ಅಭ್ಯರ್ಥಿ ಆದರೂ ನರೇಂದ್ರ ಮೋದಿಯವರೇ ಅಭ್ಯರ್ಥಿ ಎಂದುಕೊಂಡು ಕಾರ್ಯಕರ್ತರು ಕೆಲಸ ಮಾಡಬೇಕು. ನಮ್ಮ ವೈಮನಸ್ಸು ದೇಶಕ್ಕೆ ಆಪತ್ತು ತರಬಾರದು’ ಎಂದು ಬಿಜೆಪಿ ಮುಖಂಡ ಸಿ.ಟಿ ರವಿ ಹೇಳಿದರು. ‘ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬುದು ನಮ್ಮ ಗುರಿ. ಕಾರ್ಯಕರ್ತರಿಗೆ ಚುನಾವಣೆಗೆ ಸಂಬಂಧಿಸಿ ಭಾವನೆ ವ್ಯಕ್ತಪಡಿಸಲು ವೇದಿಕೆ ಕಲ್ಪಿಸಲಾಗಿತ್ತು. ಪಕ್ಷದ ಆಂತರಿಕ ವಿಚಾರಗಳು ಸಾರ್ವಜನಿಕವಾಗಿ ಚರ್ಚೆ ಮಾಡುವುದು ಸರಿಯಲ್ಲ’ ಎಂದರು. ‘ರಾಷ್ಟ್ರ ಹಿತದ ರಾಜಕಾರಣ ಅಗತ್ಯವಿದೆ. ಬಿಜೆಪಿ ಗೆಲ್ಲಿಸಲು ಎಲ್ಲ ವಿಷಯ ಮರೆತು ಒಂದೇ ಧ್ವನಿಯಾಗಿ ಕೆಲಸ ಮಾಡಬೇಕು. ಜೆಡಿಎಸ್ ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆಯಬೇಕು. ನಮ್ಮ ಪಕ್ಷದ ಒಡಕಿನ ಲಾಭ ಕಾಂಗ್ರೆಸ್‍ಗೆ ಆಗದಂತೆ ಎಚ್ಚರ ವಹಿಸಬೇಕು’ ಎಂದು ಹೇಳಿದರು.
‘ನನ್ನ ಗ್ರಹಚಾರ ಸರಿ ಇರಲಿಲ್ಲ ಸೋತೆ’
‘ನನ್ನ ಸೋಲಿಗೆ ಮತ್ತೊಬ್ಬರನ್ನು ಬೊಟ್ಟು ಮಾಡಿ ತೋರಿಸುವುದು ಸರಿಯಲ್ಲ. ಗೆಲ್ಲುವ ಅತಿಯಾದ ವಿಶ್ವಾಸವಿತ್ತು ನನ್ನ ಗ್ರಹಚಾರ ಸರಿ ಇರಲಿಲ್ಲ ಸೋತೆ’ ಎಂದು ಸಿ.ಟಿ.ರವಿ ಹೇಳಿದರು. ಚುನಾವಣೆಯಲ್ಜಿ ಬಿಜೆಪಿ ಪಕ್ಷದಲ್ಲಿ ಹೊಂದಾಣಿಕೆ ರಾಜಕಾರಣ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ‘ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಸಮುದಾಯ ಭವನ ಹೆದ್ದಾರಿ ನಿರ್ಮಾಣ ಸೇರಿ ಅಭಿವೃದ್ಧಿ ಕೆಲಸ ಮಾಡಿದ್ದೆ. ಜನ ಗೆಲ್ಲಿಸುತ್ತಾರೆಂದು ನಂಬಿದ್ದೆ. ಅದೇ ಸೋಲಿಗೆ ಕಾರಣವಾಯಿತು’ ಎಂದರು. ಹೊಂದಾಣಿಕೆ ರಾಜಕಾರಣ ಮಾಡಿಕೊಂಡಿದ್ದಲ್ಲಿ ಅವರ ಕರ್ಮವನ್ನು ಅವರೇ ಅನುಭವಿಸಬೇಕು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT