ಕಡೂರು: ತಾಲ್ಲೂಕಿನಲ್ಲಿ ಜವಳಿ ಪಾರ್ಕ್ ನಿರ್ಮಾಣಕ್ಕೆ ಪೂರಕವಾಗಿ ಸರ್ಕಾರ 25 ಎಕರೆ ಜಮೀನು ಮಂಜೂರು ಮಾಡಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ತಾಲ್ಲೂಕಿನ ಚೌಳಹಿರಿಯೂರಿನಲ್ಲಿ ಶನಿವಾರ ನಡೆದ ಜನಸ್ಪಂದನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಲ್ಲೂಕಿನ ಗಡಿಗ್ರಾಮವಾದ ಚೌಳಹಿರಿಯೂರು ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದ್ದು, ಹೋಬಳಿ ಅಭಿವೃದ್ಧಿಗೆ ಸಮಗ್ರ ಚಿಂತನೆ ನಡೆದಿದೆ. ತಾಲ್ಲೂಕಿನಲ್ಲಿ ಜವಳಿ ಪಾರ್ಕ್ ಸ್ಥಾಪಿಸುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಇದಕ್ಕೆ ಸ್ಪಂದಿಸಿದ ಸರ್ಕಾರ 25 ಎಕರೆ ಜಮೀನು ಮಂಜೂರು ಮಾಡಿದೆ ಎಂದರು.
ಈ ಭಾಗದಲ್ಲಿ ನೀರಾವರಿ ಸಮಸ್ಯೆಗೆ ಪರಿಹಾರ ದೊರೆಯಬೇಕಿದ್ದು, ಕುಕ್ಕಸಮುದ್ರ ಕೆರೆಯನ್ನು ಭಧ್ರಾ ನದಿ ನೀರಿನಿಂದ ಸಂಪೂರ್ಣ ಭರ್ತಿ ಮಾಡಲು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಚರ್ಚಿಸಲಾಗಿದೆ. ತೆಂಗು ಬೆಳೆಗಾರರ ಸಮಸ್ಯೆಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಿ ಬೆಂಬಲ ಬೆಲೆ ನೀಡಿ, ಕೊಬ್ಬರಿ ಖರೀದಿ ಕೇಂದ್ರ ತೆರೆಯುವ ಬಗ್ಗೆ ಸರ್ಕಾರವನ್ನು ಒತ್ತಾಯಿಸಿದ್ದೆ. ಅದರ ಫಲವಾಗಿ ತಾಲ್ಲೂಕಿಗೆ ಕೊಬ್ಬರಿ ಖರೀದಿ ಕೇಂದ್ರ ಮಂಜೂರಾಗಿ ನೋಂದಣಿ ಪ್ರಕ್ರಿಯೆಯೂ ಮುಗಿದಿದೆ. ದೂರದ ರೈತರಿಗೆ ತೊಂದರೆಯಾಗಬಾರದೆಂಬ ನಿಟ್ಟಿನಲ್ಲಿ ಪಂಚನಹಳ್ಳಿಯಲ್ಲಿಯೂ ಒಂದು ಉಪ ಕೇಂದ್ರ ಆರಂಭಿಸಲಾಗಿದ್ದು ನೋಂದಣಿ ಪ್ರಕ್ರಿಯೆಯೂ ಮುಗಿದಿದೆ. ಹೋಬಳಿ ಕೇಂದ್ರಗಳ ಸಮಗ್ರ ಅಭಿವೃದ್ಧಿಗಾಗಿ ನಿರಂತರ ಶ್ರಮಿಸುತ್ತೇನೆ ಎಂದರು.
ತಹಶೀಲ್ದಾರ್ ಎಂ.ಪಿ.ಕವಿರಾಜ್, ಇಒ ಸಿ.ಆರ್.ಪ್ರವೀಣ್, ವ್ಯವಸ್ಥಾಪಕ ವಿಜಯ್ ಕುಮಾರ್, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಜಯದೇವ್, ಬಿಇಒ ಸಿದ್ದರಾಜನಾಯ್ಕ, ಹಿರೇನಲ್ಲೂರು ಹೋಬಳಿ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಸದಸ್ಯರು ಇದ್ದರು.