ಸೋಮವಾರ, ನವೆಂಬರ್ 30, 2020
26 °C
ಜನೌಷಧ ಮಳಿಗೆ: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌

ಪ್ರಾಥಮಿಕ, ಸಮುದಾಯ ಆಸ್ಪತ್ರೆಗೆ ವಿಸ್ತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ‘ಜನೌಷಧ ಮಳಿಗೆಗಳನ್ನು ಸಮುದಾಯ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ವಿಸ್ತರಿಸಲು ಉದ್ದೇಶಿಸಲಾಗಿದೆ’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.

‘ಜನೌಷಧ ಮಳಿಗೆಗಳಿಗೆ ಸಂಬಂಧಿಸಿದಂತೆ ಕೆಲ ದೂರುಗಳು ಇವೆ. ಈ ಮಳಿಗೆಗಳಲ್ಲಿ ಜನೌಷಧ ಪಟ್ಟಿಯಲ್ಲಿ ಇಲ್ಲದ ಔಷಧಗಳು ಜಾಸ್ತಿ ಇರುತ್ತವೆ, ಪಟ್ಟಿಯಲ್ಲಿರುವ ಔಷಧಗಳು ಕಡಿಮೆ ಇರುತ್ತವೆ ಎಂಬ ದೂರುಗಳಿವೆ. ಪರಿಹಾರಕ್ಕೆ ಗಮನ ಹರಿಸುತ್ತೇವೆ. ಬಡವರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಔಷಧಗಳು ಲಭಿಸುವಂತೆ ಮಾಡಬೇಕು ಎಂಬುದು ಪ್ರಧಾನಿ ಮೋದಿ ಕನಸು. ಅದನ್ನು ನನಸು ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದೇವೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ರಾಜ್ಯದಲ್ಲಿ 2500 ವೈದ್ಯರ ನೇರ ನೇಮಕಾತಿ ಪ್ರಕ್ರಿಯೆ ಶುರುವಾಗಿದೆ. ಈ ತಿಂಗಳ ಅಂತ್ಯದೊತ್ತಿಗೆ ಪ್ರಕ್ರಿಯೆ ಮುಗಿಯಲಿದೆ’ ಎಂದರು.

‘ಆಯುಷ್ಮಾನ್‌ ಭಾರತ್‌’ ಮತ್ತು ‘ಆರೋಗ್ಯ ಕರ್ನಾಟಕ’ ವಿಮೆಯ ವ್ಯಾಪ್ತಿಗೆ ಹೆಚ್ಚು ಜನರನ್ನು ತರಬೇಕು. ಖಾಸಗಿ ಆಸ್ಪತ್ರೆಗಳಿಗಿಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆಗಳು ಹೆಚ್ಚು ಆಗಬೇಕು. ಸಹಜ ಪ್ರಸವ ಮಾಡಿಸಲು ಆದ್ಯತೆ ನೀಡಬೇಕು ಎಂದು ಆಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದು ತಿಳಿಸಿದರು.

ಹೋಂ ಸ್ಟೇ ವಾಸ್ತವ್ಯ; ನಿಗಾಕ್ಕೆ ಸೂಚನೆ: ‘ಹೋಂ ಸ್ಟೇಗಳನ್ನು ನಡೆಸುವವರ ಸಮಗ್ರ ಮಾಹಿತಿಯನ್ನು ಇದೇ ತಿಂಗಳ ಅಂತ್ಯದೊಳಗೆ ಕಲೆ ಹಾಕುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ. ಹೋಂ ಸ್ಟೇ ವಾಸ್ತವ್ಯಕ್ಕೆ ಸಂಬಂಧಿಸಿದಂತೆ ನಿಗಾ ಇಡಬೇಕು. ಲಕ್ಷಣಗಳಿದ್ದವರಿಗೆ ಪರೀಕ್ಷೆ ಮಾಡಬೇಕು ಎಂದು ತಿಳಿಸಿದ್ದೇನೆ’ ಎಂದರು.

‘ಜಿಲ್ಲೆಯ ಕೋವಿಡ್‌ ನಿರ್ವಹಣೆ ಚಟುವಟಿಕೆ ಬಗ್ಗೆ ತೃಪ್ತಿ ಇದೆ. ಪ್ರತಿದಿನ 1,300 ಮಾದರಿಗಳನ್ನು ಆರ್‌ಟಿಪಿಸಿ ಪರೀಕ್ಷೆ ಮಾಡಲಾಗುತ್ತಿದೆ. ಸೋಂಕಿತರ ಪ್ರಮಾಣ ಕಡಿಮೆಯಾಗಿದೆ. ಕೋವಿಡ್‌ ಸಾವಿನ ಪ್ರಮಾಣ ಕಡಿಮೆಯಾಗಿದೆ. ಶೇ 1.08 ಇದೆ. ಸೋಂಕು ಇಳಿಮುಖವಾಗಿದೆ ಎಂದು ಮೈಮರೆಯಬಾರದು’ ಎಂದರು.

ಮೆಡಿಕಲ್‌ ಕಾಲೇಜು; 69 ಬೋಧಕರ ನೇಮಕಾತಿಗೆ ಅನುಮೋದನೆ’

ಸರ್ಕಾರಿ ವೈದ್ಯಕೀಯ ವಿಜ್ಞಾನ ಕಾಲೇಜು ನಿರ್ಮಾಣಕ್ಕೆ ಟೆಂಡರ್‌ ಪ್ರಕ್ರಿಯೆ ಮುಗಿದಿದೆ. ಕಟ್ಟಡ ವಿನ್ಯಾಸದ ನೀಲನಕ್ಷೆ ರೂಪಿಸಲಾಗಿದೆ. ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೆಲ ಸೂಚನೆ ನೀಡಿದ್ದೇನೆ. ಡಿಸೆಂಬರ್‌ನಲ್ಲಿ ಭೂಮಿಪೂಜೆ ನೆರವೇರಿಸಲು ಉದ್ದೇಶಿಸಲಾಗಿದೆ. ಎರಡೂವರೆ ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಇದೆ’ ಎಂದು ಸುಧಾಕರ್‌ ತಿಳಿಸಿದರು.

‘2021–22ನೇ ಸಾಲಿನಲ್ಲಿ ಕಾಲೇಜು ಆರಂಭವಾಗಲಿದೆ. ತರಗತಿ ನಡೆಸಲು ತಾತ್ಕಾಲಿಕ ಕಟ್ಟಡ ವ್ಯವಸ್ಥೆ ಕಲ್ಪಿಸಲಾಗಿದೆ. ಕಾಲೇಜಿಗೆ 69 ಬೋಧಕ ಸಿಬ್ಬಂದಿ ನೇಮಕಾತಿಗೆ ಅನುಮೋದನೆ ನೀಡಲಾಗಿದೆ. ಜಿಲ್ಲೆಯಲ್ಲಿ ಉಗ್ರಾಣ ಸ್ಥಾಪನೆಗೆ ಟೆಂಡರ್‌ ಆಹ್ವಾನಿಸಲಾಗಿದೆ’ ಎಂದರು.

==

‘ದೂರಿನಲ್ಲಿ ಸತ್ಯಾಂಶವಿಲ್ಲ; ಖಾಸಗಿ ಆಸ್ಪತ್ರೆ ವಿರುದ್ಧ ಕ್ರಮ ಇಲ್ಲ’

‘ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೋವಿಡ್‌ ಚಿಕಿತ್ಸೆಗೆ ಹೆಚ್ಚು ಹಣ ವಸೂಲಿ ಮಾಡಿದ್ದಾರೆ ಎಂಬ ದೂರಿಗೆ ಸಂಬಂಧಿಸಿದಂತೆ ತನಿಖೆ ನಡೆಸಲಾಗಿದೆ. ಜಿಲ್ಲಾಧಿಕಾರಿ ವರದಿ ಕೊಟ್ಟಿದ್ದಾರೆ. ಆರೋಗ್ಯ ಇಲಾಖೆ ಕಾರ್ಯದರ್ಶಿ ಪರಿಶೀಲಿಸಿದ್ದಾರೆ. ದೂರಿನಲ್ಲಿ ದಾಖಲಿಸಿರುವ ಅಂಶಗಳು ಸತ್ಯಕ್ಕೆ ದೂರವಾಗಿವೆ ಎಂದು ವರದಿಯಲ್ಲಿ ದಾಖಲಾಗಿದೆ. ಹೀಗಾಗಿ, ಕ್ರಮ ವಹಿಸಿಲ್ಲ’ ಎಂದು ಸುಧಾಕರ್‌ ಉತ್ತರಿಸಿದರು

ವಿಧಾನ ಪರಿಷತ್‌ ಸದಸ್ಯ ಪ್ರಾಣೇಶ್‌ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.