ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಿಗೆರೆ: 15ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಜಿ.ಹನುನಹಳ್ಳಿ: ಕಲುಷಿತ ನೀರು ಸೇವನೆ ಶಂಕೆ
Last Updated 11 ಜನವರಿ 2020, 14:36 IST
ಅಕ್ಷರ ಗಾತ್ರ

ಮೂಡಿಗೆರೆ: ತಾಲ್ಲೂಕಿನ ಗೋಣಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಿ. ಹನುಮನಹಳ್ಳಿ ಗ್ರಾಮದಲ್ಲಿ ಶನಿವಾರ 15ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದು, ಕಲುಷಿತ ನೀರು ಸೇವನೆಯಿಂದ ಅಸ್ವಸ್ಥತೆ ಉಂಟಾಗಿರಬಹುದು ಎಂದು ಶಂಕಿಸಲಾಗಿದೆ.

ಗ್ರಾಮಸ್ಥರಾದ ಯಶೋಧಾ, ಅಭಿಷೇಕ್, ನಾರಾಯಣ, ಅಜಿತ್, ಗಿರಿಯಪ್ಪ ಸೇರಿದಂತೆ 15 ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದು, ಪಟ್ಟಣದ ಮಹಾತ್ಮಗಾಂಧಿ ಸ್ಮಾರಕ ಸಾರ್ವಜನಿಕ ಆಸ್ಪತ್ರೆಗೆ ಶನಿವಾರ ಬೆಳಿಗ್ಗೆ ದಾಖಲು ಮಾಡಲಾಗಿದೆ.

ಆಸ್ಪತ್ರೆಗೆ ಭೇಟಿ ನೀಡಿದ್ದ ಜಿಲ್ಲಾ ಪಂಚಾಯಿತಿ ಸದಸ್ಯೆ ಅಮಿತಾ ಮುತ್ತಪ್ಪ ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯ ಸುಂದರ್ ಕುಮಾರ್, ಅಸ್ವಸ್ಥಗೊಂಡವರಿಗೆ ಹಣ್ಣುಗಳನ್ನು ವಿತರಿಸಿ ಆರೋಗ್ಯ ವಿಚಾರಿಸಿದರು.

ಈ ವೇಳೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅಮಿತಾ ಮುತ್ತಪ್ಪ, ‘ಜಿ. ಹನುಮನಹಳ್ಳಿ ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಸೌಲಭ್ಯಗಳಿರಲಿಲ್ಲ. ಗ್ರಾಮಸ್ಥರು ಹೇಮಾವತಿ ನದಿಯಿಂದ ಹರಿಯುವ ನೀರನ್ನೇ ನೇರವಾಗಿ ಬಳಕೆ ಮಾಡುತ್ತಿದ್ದರು. ಆದರೆ, ಇತ್ತೀಚೆಗೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ನಿಧಿಗಳಿಂದ ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸಲಾಗಿದೆ’ ಎಂದರು.

‘ಹದಿನೈದಕ್ಕೂ ಹೆಚ್ಚು ಗ್ರಾಮಸ್ಥರು ಅಸ್ವಸ್ಥಗೊಂಡಿರುವುದರಿಂದ ಅಸ್ವಸ್ಥತೆಗೆ ನಿಖರವಾದ ಕಾರಣಗಳು ಪತ್ತೆಯಾಗಿಲ್ಲ. ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾ ಆರೋಗ್ಯಾಧಿಕಾರಿಯೊಂದಿಗೆ ಮಾತನಾಡಿದ್ದು, ಅಸ್ವಸ್ಥತೆಗೊಂಡು ಆಸ್ಪತ್ರೆಗೆ ದಾಖಲಾಗಿರುವವರಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಗ್ರಾಮಕ್ಕೆ ಅಧಿಕಾರಿಗಳು ತೆರಳಿ ನಿಖರವಾದ ಕಾರಣ ಪತ್ತೆ ಮಾಡಬೇಕು ಎಂದು ಸೂಚಿಸಲಾಗಿದ್ದು, ಈಗಾಗಲೇ ಅಧಿಕಾರಿಗಳು ಗ್ರಾಮಕ್ಕೆ ತೆರಳಿದ್ದಾರೆ. ಅಸ್ವಸ್ಥರ ಸಂಖ್ಯೆ ಹೆಚ್ಚಾಗಬಹುದು ಎಂಬ ಹಿನ್ನೆಲೆಯಲ್ಲಿ ಗೋಣಿಬೀಡು ಗ್ರಾಮದಲ್ಲಿರುವ ಸಮುದಾಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ’ ಎಂದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಸುಂದರ್ ಕುಮಾರ್ ಮಾತನಾಡಿ, ‘ವೈದ್ಯಾಧಿಕಾರಿ ಗ್ರಾಮಕ್ಕೆ ತೆರಳಿ ಪ್ರತಿಯೊಬ್ಬ ಗ್ರಾಮಸ್ಥರ ಆರೋಗ್ಯ ತಪಾಸಣೆ ಮಾಡಬೇಕು. ನೀರು ಅಥವಾ ಆಹಾರದಿಂದ ಅಸ್ವಸ್ಥತೆ ಉಂಟಾಗಿರಬಹುದು ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದು, ವೈದ್ಯಾಧಿಕಾರಿಗಳು ನಿಖರವಾದ ಕಾರಣವನ್ನು ಪತ್ತೆ ಮಾಡಬೇಕು’ ಎಂದರು.

ಈ ವೇಳೆ ಗೋಣಿಬೀಡು ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್, ಸ್ಥಳೀಯ ಮುಖಂಡ ಮುತ್ತಪ್ಪ ಹಾಗೂ ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಗಿರಿಜನ ಕಲ್ಯಾಣ ಇಲಾಖೆಯ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT