ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು | ಗಾಳಿಕೆರೆ ಬಳಿ ತ್ಯಾಜ್ಯ ರಾಶಿ: ದತ್ತಪೀಠದ ಬಳಿಯೂ ದುರ್ನಾತ

Published 31 ಮೇ 2024, 4:41 IST
Last Updated 31 ಮೇ 2024, 4:41 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಚಂದ್ರದ್ರೋಣ ಪರ್ವತ ಶ್ರೇಣಿಯು ಗಿರಿ ಕಂದರಗಳು ಅಚ್ಚ ಹಸಿರಿನಿಂದ ಕೂಡಿ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದರೆ, ಶ್ರೀಗುರು ದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾ ಮತ್ತು ಗಾಳಿ ಕೆರೆ ಭಾಗದಲ್ಲಿ ಪ್ಲಾಸ್ಟಿಕ್ ಸಹಿತ ತಾಜ್ಯ ರಾರಾಜಿಸುತ್ತಿದೆ.

ಮಳೆ ಬಿದ್ದ ಬಳಿಕ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಹಸಿರು ಕಂಗೊಳಿಸುತ್ತಿದೆ. ತಣ್ಣನೆಯ ಗಾಳಿ ಮತ್ತು ಪರಿಸರದ ನಡುವೆ ಸಾಗುವ ಪ್ರವಾಸಿಗರು ಅಹ್ಲಾದಕರ ವಾತಾವರಣ ಸವಿಯುತ್ತಿದ್ದಾರೆ. ಆದರೆ, ಶ್ರೀಗುರು ದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾದ ಹಿಂಭಾಗ ಬಂದರೆ ಮೂಗುಮುಚ್ಚಿಕೊಂಡು ಸಾಗಗಬೇಕಾದ ಸ್ಥಿತಿ ಇದೆ.

ದರ್ಗಾಕ್ಕೆ ಭೇಟಿ ನೀಡುವ ಭಕ್ತರು ಎಲ್ಲೆಂದರಲ್ಲಿ ಅಡುಗೆ ತಯಾರಿಸುತ್ತಿದ್ದು, ತ್ಯಾಜ್ಯ ಕೂಟ ಎಲ್ಲೆಂದರಲ್ಲಿ ಬೀಳುತ್ತಿದೆ. ಶೌಚಾಲಯಗಳಿದ್ದರೂ ಬಯಲು ಶೌಚಾಲಯಕ್ಕೆ ಹೋಗುವವರು ಹೆಚ್ಚಾಗಿದ್ದು, ಇದು ಇಡೀ ವಾತಾವರಣವನ್ನು ಹಾಳು ಮಾಡುತ್ತಿದೆ ಎಂದು ಪ್ರವಾಸಿಗರು ಬೇಸರ ವ್ಯಕ್ತಪಡಿಸುತ್ತಾರೆ. 

ಅದೇ ಮಾರ್ಗದಲ್ಲಿ ಮುಂದೆ ಗಾಳಿಕೆರೆ ಕಡೆಗೆ ಸಾಗಿದರೆ ಕೆರೆಯ ಬದಿಯಲ್ಲೇ ಗಾಳಿ ಆಂಜನೇಯಸ್ವಾಮಿ ದೇವಾಲಯ ಇದೆ. ಈ ಗುಡಿಯ ಸುತ್ತಮುತ್ತ ಪ್ಲಾಸ್ಟಿಕ್ ರಾಶಿ ಬಿದ್ದಿದೆ. ಗುಡಿಗೆ ಬರುವ ಭಕ್ತರು ಕೋಳಿ ಮತ್ತು ಕುರಿಗಳನ್ನು ಬಲಿಕೊಟ್ಟು ಇಲ್ಲೇ ಮಾಂಸದೂಟ ತಯಾರಿಸಿ ಊಟ ಮಾಡುವುದು ಪ್ರತೀತಿ. ಕೋಳಿ ಮತ್ತು ಕುರಿ ಮಾಂಸದ ತ್ಯಾಜ್ಯ, ಊಟ ಮಾಡಿದ ತಟ್ಟೆಗಳ ರಾಶಿ, ಪಾಸ್ಟಿಕ್ ಬಾಟಲಿ, ಮದ್ಯದ ಬಾಟಲಿಗಳು ಎಲ್ಲೆಡೆ ಚೆಲ್ಲಾಡಿವೆ.

ಸುತ್ತಮುತ್ತ ಒಳ್ಳೆಯ ಪರಿಸರ ಇದೆ. ಈ ಗುಡಿಯ ಸುತ್ತಮುತ್ತ ಮೂಗುಮುಚ್ಚಿ ತಿರುಗಾಡಬೇಕಾದ ಸ್ಥಿತಿ ಇರುವುದು ನೋವಿನ ಸಂಗತಿ ಎಂದು ಪ್ರವಾಸಿಗ ಶ್ರೀಧರ್ ಬೇಸರ ವ್ಯಕ್ತಪಡಿಸಿದರು.

ಗುಡಿಯ ಸುತ್ತಮುತ್ತ ಮತ್ತು ಕೆರೆಗೆ ಸುತ್ತಲು ಹಾಕಿರುವ ತಂತಿ ಬೇಲಿಗೆ ಕಸದ ತೊಟ್ಟಿಗಳನ್ನು ಅಳವಡಿಸಲಾಗಿದೆ. ಆ ತೊಟ್ಟೆಗಳೆಲ್ಲವೂ ಖಾಲಿ ಇದ್ದು, ಕಸ ಮಾತ್ರ ಪರಿಸರದಲ್ಲಿ ಹರಿದಾಡುತ್ತಿದೆ. ತ್ಯಾಜ್ಯ ಸುರಿಯುವುದನ್ನು ತಪ್ಪಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಶುದ್ಧ ಕುಡಿಯುವ ನೀರಿನ ಘಟಕ ತೆರೆಲಾಗುತ್ತಿದೆ. ಚೆಕ್‌ಪೋಸ್ಟ್‌ ತೆರೆಯಲು ಸಿದ್ಧತೆ ನಡೆಸಲಾಗಿದೆ. ಶೀಘ್ರವೇ ಪ್ಲಾಸ್ಟಿಕ್ ನಿಷೇಧ ಸಂಪೂರ್ಣ ಜಾರಿಯಾಗಲಿದೆ
– ಮೀನಾ ನಾಗರಾಜ್ ಜಿಲ್ಲಾಧಿಕಾರಿ.
ಜಾರಿಯಾಗದ ಪ್ಲಾಸ್ಟಿಕ್ ನಿಷೇಧ
ಗಿರಿಭಾಗದಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಕೊಂಡೊಯ್ಯುವುದನ್ನು ಜಿಲ್ಲಾಡಳಿತ ಸಂಪೂರ್ಣವಾಗಿ ನಿಷೇಧಿಸಿದೆ. ಆದರೆ ಜಾರಿ ಮಾತ್ರ ಇನ್ನೂ ಸಮಪರ್ಕವಾಗಿ ಆಗಿಲ್ಲ. ಪ್ಲಾಸ್ಟಿಕ್ ಬಾಟಲಿ ಸಾಗಣೆ ನಿಷೇಧ ಮಾಡಬೇಕೆಂದರೆ ಅದಕ್ಕೆ ಪೂರಕವಾಗಿ ಗಿರಿಭಾಗದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಆಗಬೇಕಿದೆ. ಸದ್ಯ ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಬಳಿ ಶುದ್ಧ ಕುಡಿಯುವ ನೀರಿನ ಘಟಕ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ.  ನೀರಿನ ಸೌಕರ್ಯ ಕಲ್ಪಿಸದೆ ಪ್ಲಾಸ್ಟಿಕ್ ಬಾಟಲಿ ನಿಷೇಧ ಮಾಡಲು ಆಗುವುದಿಲ್ಲ. ಆದ್ದರಿಂದ ಅಲ್ಲಲ್ಲಿ ಈ ಘಟಕ ತೆರೆಯಲಾಗುತ್ತಿದೆ ಎಂದು ಜಿಲ್ಲಾಡಳಿತ ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT