ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಚುರುಕು: ಮತ್ತಷ್ಟು ಹಾನಿ

ಮೂಡಿಗೆರೆ: ದಿನವಿಡೀ ಸುರಿದ ಮಳೆ
Last Updated 17 ಆಗಸ್ಟ್ 2020, 5:40 IST
ಅಕ್ಷರ ಗಾತ್ರ

ಮೂಡಿಗೆರೆ: ತಾಲ್ಲೂಕಿನಾದ್ಯಂತ ಭಾನುವಾರ ಮಳೆ ಚುರುಕುಗೊಂಡಿದೆ. ಹೊರಟ್ಟಿ, ಕಲ್ಮನೆ ಸೇರಿದಂತೆ ವಿವಿಧ ಭಾಗಗಳಲ್ಲಿ ಮನೆ ಕುಸಿದು ಹಾನಿ ಸಂಭವಿಸಿದೆ.

ಮೂರು ದಿನಗಳ ಕಾಲ ಬಿಡುವು ನೀಡಿದ್ದ ಮಳೆ, ಶನಿವಾರ ತಡರಾತ್ರಿಯಿಂದಲೂ ಸುರಿಯಲು ಪ್ರಾರಂಭಿಸಿದ್ದು, ಭಾನುವಾರ ಬೆಳಗಿನ ಜಾವ ಧಾರಾಕಾರವಾಗಿ ಸುರಿಯಿತು. ಎಂಟು ದಿನಗಳ ಹಿಂದೆ ಸುರಿದ ಮಳೆಗೆ ಕುಸಿಯುವ ಹಂತಕ್ಕೆ ತಲುಪಿದ್ದ ಮನೆಗಳು, ಕಾಫಿ ತೋಟಗಳು ಭಾನುವಾರ ಸುರಿದ ಮಳೆಗೆ ನೆಲಕಚ್ಚಿದವು.

ಮಳೆಯಿಂದ ಬೆಟ್ಟಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊರಟ್ಟಿ ಗ್ರಾಮದ ಸುಂದರ ಪೂಜಾರಿ ಎಂಬುವವರ ಮನೆಯ ಹಿಂಭಾಗ ಸಂಪೂರ್ಣ ಜಖಂ ಗೊಂಡಿದೆ. ಕೂವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಮನೆ ಗ್ರಾಮದ ರತ್ನ ಎಂಬುವವರ ಮನೆಯ ಭಾನುವಾರ ನಸುಕಿನಲ್ಲಿ ಕುಸಿದಿದ್ದು, ಮನೆಯಲ್ಲಿ ನಿದ್ರಿಸುತ್ತಿದ್ದ ರತ್ನ ಅವರಿಗೆ ಗಾಯಗಳಾಗಿದ್ದು, ಬಾಳೆಹೊನ್ನೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಮಳೆ ಹೆಚ್ಚಾಗಿರುವುದರಿಂದ ಚಾರ್ಮಾಡಿ ಘಾಟಿ, ಬಾಳೆಹೊನ್ನೂರು ರಸ್ತೆ, ಕಸ್ಕೇಬೈಲ್, ತತ್ಕೊಳ ರಸ್ತೆಯಲ್ಲಿ ಅಲ್ಪ ಪ್ರಮಾಣದಲ್ಲಿ ಭೂ ಕುಸಿತವಾಗಿದ್ದು, ಮಳೆ ಆರ್ಭಟಿಸಿದರೆ ಇನ್ನಷ್ಟು ಹಾನಿಯಾಗುವ ಅಪಾಯ ಉಂಟಾಗಿದೆ.

ಕಳೆದ ವಾರ ಸುರಿದ ಮಳೆಗೆ ತುಂಬಿ ಹರಿದಿದ್ದ ನದಿಗಳೆಲ್ಲವೂ ಮಳೆ ಬಿಡುವಿನಿಂದ ಸಹಜ ಸ್ಥಿತಿಯತ್ತ ಮರಳುತ್ತಿದ್ದವು. ಆದರೆ, ಭಾನುವಾರ ಒಂದೇ ದಿನ ಸುರಿದ ಮಳೆಗೆ ನದಿಗಳ ನೀರಿನ ಹರಿಯುವ ಮಟ್ಟದಲ್ಲಿ ಗಣನೀಯ ಪ್ರಮಾಣದ ಏರಿಕೆಯುಂಟಾಗಿದ್ದು, ನದಿ ಪಾತ್ರದಲ್ಲಿ ನಾಟಿ ಮಾಡಿದ್ದ ಭತ್ತದ ಗದ್ದೆಯ ರೈತರಿಗೆ ಆತಂಕ ಉಂಟಾಗಿದೆ. ಮಳೆ ಹೆಚ್ಚಾಗಿರುವುದರಿಂದ ಶುಂಠಿ ಗದ್ದೆಗಳಿಗೂ ಹಾನಿಯಾಗಿದ್ದು, ಶುಂಠಿ ಬೆಳೆಗೆ ಕೊಳೆರೋಗ ಬರುವ ಆತಂಕ ಕಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT