ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಹಕರಿಗೆ ತಾಜಾ ಹಣ್ಣು, ತರಕಾರಿ: ನರಸಿಂಹರಾಜಪುರದಲ್ಲಿ ಹಾಪ್‌ಕಾಮ್ಸ್ ಮಳಿಗೆ

Last Updated 16 ಜೂನ್ 2020, 6:01 IST
ಅಕ್ಷರ ಗಾತ್ರ

ನರಸಿಂಹರಾಜಪುರ: ಹಾಪ್‌ಕಾಮ್ಸ್ ಮಳಿಗೆಯಲ್ಲಿ ಗ್ರಾಹಕರಿಗೆ ಸಾವಯವ ಕೃಷಿಯಲ್ಲಿ ಬೆಳೆಯುವ ಹಣ್ಣು, ತರಕಾರಿ ಲಭ್ಯವಾಗಲಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಆರ್.ಸದಾಶಿವ ತಿಳಿಸಿದರು.

ಇಲ್ಲಿನ ತರಕಾರಿ ಮಾರುಕಟ್ಟೆಯ ಮುಂಭಾಗದ ಪಟ್ಟಣ ಪಂಚಾಯಿತಿ ಮಳಿಗೆಯಲ್ಲಿ ಸೋಮವಾರ ಹಾಪ್‌ಕಾಮ್ಸ್ ಮಳಿಗೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

‘ಹಾಪ್‌ಕಾಮ್ಸ್ ರೈತರಿಂದ ರೈತರಿಗಾಗಿ ಇರುವ ಸಂಸ್ಥೆಯಾಗಿದೆ. ರೈತರು ಬೆಳೆಯುವ ಬೆಳೆಯನ್ನು ಉತ್ತಮ ಬೆಲೆಗೆ ಕೊಂಡು ಗ್ರಾಹಕರಿಗೆ ನ್ಯಾಯಯುತ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತದೆ. 1993– 94ರಿಂದ ಹಾಪ್‌ಕಾಮ್ಸ್ ಕಾರ್ಯ ನಿರ್ವಹಿಸುತ್ತಿದೆ. ಸಾವಯವ ವಿಧಾನದಲ್ಲಿ ಬೆಳೆದ ತರಕಾರಿ ಹಣ್ಣು ಮಾರಾಟ ಮಾಡುವುದರಿಂದ ಗ್ರಾಹರಿಗೆ ರಾಸಾಯನಿಕ ಮುಕ್ತ ಆಹಾರ ಲಭಿಸಲಿದೆ. ರೈತರಿಗೆ ಹಾಗೂ ಗ್ರಾಹಕರಿಗೆ ಇಬ್ಬರಿಗೂ ಉತ್ತಮ ಬೆಲೆ ಸಿಗಬೇಕೆಂಬುದು ಇದರ ಉದ್ದೇಶವಾಗಿದೆ. ಇಲ್ಲಿ ಇಡೀ ರಾಜ್ಯದಲ್ಲಿ ಒಂದೇ ದರ ಇರುತ್ತದೆ. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ತರಕಾರಿಯನ್ನು ಅಧಿಕ ಬೆಲೆಗೆ ಮಾರಾಟ ಮಾಡಿದ್ದರಿಂದ ಗ್ರಾಹಕರಿಗೆ ನಷ್ಟವಾಗಿತ್ತು. ಹಾಪ್‌ಕಾಮ್ಸ್ ಮಳಿಗೆ ಆರಂಭವಾಗಿರುವುದರಿಂದ ಗ್ರಾಹಕರಿಗೆ ಕಡಿಮೆ ಬೆಲೆಗೆ ಉತ್ಪನ್ನ ಲಭ್ಯವಾಗಲಿದೆ’ ಎಂದರು.

ಹಾಪ್‌ಕಾಮ್ಸ್ ಮಳಿಗೆ ಉದ್ಘಾಟಿಸಿ ಮಾತನಾಡಿದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಈ.ಸಿ.ಜಯಶ್ರೀ ಮೋಹನ್, ‘ಹಾಪ್‌ಕಾಮ್ಸ್‌ನಲ್ಲಿ ಗ್ರಾಹಕರಿಗೆ ಕಡಿಮೆ ಬೆಲೆಗೆ ತರಕಾರಿ, ಹಣ್ಣು ಲಭ್ಯವಾಗಲಿದೆ. ರೈತರು ಉತ್ತಮ ಗುಣಮಟ್ಟದ ಉತ್ಪನ್ನ ಮಾರಾಟ ಮಾಡಿದರೂ ಸೂಕ್ತ ಬೆಲೆ ಲಭಿಸಲಿದೆ. ರೈತರು ಹಾಗೂ ಗ್ರಾಹಕರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದರು.

ಹಾಪ್‌ಕಾಮ್ಸ್ ನಿರ್ದೇಶಕ ಎನ್.ಪಿ.ರವಿ ಮಾತನಾಡಿ, ‘ಪ್ರತಿನಿತ್ಯ ದರಪಟ್ಟಿಯನ್ನು ಪ್ರಕಟಿಸಿ ಅದರಂತೆ ತರಕಾರಿ, ಹಣ್ಣು ಮಾರಾಟ ಮಾಡಲಾಗುತ್ತದೆ. ರೈತರು ಗುಣಮಟ್ಟದ ತರಕಾರಿಯನ್ನು ನೀಡಿದರೂ ಖರೀದಿಸಲಾಗುತ್ತದೆ. ಹಾಪ್‌ಕಾಮ್ಸ್‌ನ 175 ಸದಸ್ಯರಿದ್ದಾರೆ. ಎಲ್ಲರೂ ಹಾಪ್‌ಕಾಮ್ಸ್ ಸಂಸ್ಥೆ ಬೆಳೆಯಲು ಸಹಕಾರ ನೀಡಬೇಕು’ ಎಂದರು.

ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎನ್.ನಾಗೇಶ್ ಮಾತನಾಡಿ, ‘ಹಾಪ್ ಕಾಮ್ಸ್ ಮಳಿಗೆ ಆರಂಭಿಸಿರುವ ಬಗ್ಗೆ ರೈತರಿಗೆ ಮಾಹಿತಿ ನೀಡಬೇಕು. ತಾಲ್ಲೂಕು ಪಂಚಾಯಿತಿ ಸಭೆ ಹಾಗೂ ಗ್ರಾಮ ಪಂಚಾಯಿತಿಯ ಗ್ರಾಮ ಸಭೆಗಳನ್ನು ಮಾಹಿತಿ ನೀಡಬೇಕು. ರಾಸಾಯನಿಕ ಮುಕ್ತ ತೋಟಗಾರಿಕಾ ಉತ್ಪನ್ನ ಲಭಿಸುವ ಬಗ್ಗೆ ಅರಿವು ಮೂಡಿಸಬೇಕು. ನಿರಂತರವಾಗಿ ಸಹಕಾರ ನೀಡಲಾಗುವುದು’ ಎಂದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕುರಿಯಾಕೋಸ್, ಪಿಕಾರ್ಡ್ ಬ್ಯಾಂಕ್ ಉಪಾಧ್ಯಕ್ಷ ವೈ.ಎಸ್.ರವಿ, ಪಟ್ಟಣ ಪಂಚಾಯಿತಿ ಸದಸ್ಯ ಪ್ರಶಾಂತ್ ಶೆಟ್ಟಿ,ಎನ್.ಪಿ.ರಮೇಶ್, ಅಬೂಬಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT