ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಭೂ ಮಂಜೂರಾತಿ ಪ್ರಕರಣ: ಸಾವಿರ ಎಕರೆ ಸರ್ಕಾರಕ್ಕೆ ವಾಪಸ್

ಅಕ್ರಮ ಭೂ ಮಂಜೂರಾತಿ 270 ಅಕ್ರಮ ಪ್ರಕರಣ ರದ್ದು: ಉಪವಿಭಾಗಾಧಿಕಾರಿ ಎಚ್.ಡಿ. ರಾಜೇಶ್‌ ಮಾಹಿತಿ
Published 7 ಜನವರಿ 2024, 6:53 IST
Last Updated 7 ಜನವರಿ 2024, 6:53 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘2019ರಿಂದ 2021ರ ನಡುವಿನ ಅವಧಿಯಲ್ಲಿ ನಡೆದಿದ್ದ ಅಕ್ರಮ ಭೂ ಮಂಜೂರಾತಿ ಪ್ರಕರಣಗಳಲ್ಲಿ 270 ಪ್ರಕರಣಗಳನ್ನು ರದ್ದುಪಡಿಸಲಾಗಿದ್ದು, 1 ಸಾವಿರ ಎಕರೆಯಷ್ಟು ಜಾಗವನ್ನು ಸರ್ಕಾರದ ಹೆಸರಿಗೆ ವಾಪಸ್ ಪಹಣಿ ಮಾಡಲಾಗಿದೆ’ ಎಂದು ವರ್ಗಾವಣೆಗೊಂಡಿರುವ ಚಿಕ್ಕಮಗಳೂರು ಉಪವಿಭಾಗಾಧಿಕಾರಿ ಎಚ್.ಡಿ.ರಾಜೇಶ್ ಹೇಳಿದರು.

ಚಿಕ್ಕಮಗಳೂರು ಪ್ರೆಸ್‌ಕ್ಲಬ್ ವತಿಯಿಂದ ಆಯೋಜಿಸಿದ್ದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಹಿಂದಿನ ಜಿಲ್ಲಾಧಿಕಾರಿ ಅವರ ಆದೇಶದಂತೆ ಒಟ್ಟು 611 ಭೂಮಂಜೂರಾತಿ ಪ್ರಕರಣಗಳನ್ನು ವಿಚಾರಣೆ ನಡೆಸಲಾಯಿತು. ಅವುಗಳ ಪೈಕಿ 472 ಪ್ರಕರಣಗಳಲ್ಲಿ ಖಾಸಗಿಯವರಿಗೆ ಭೂಮಂಜೂರಾತಿಯಾಗಿದೆ. ಅವುಗಳಲ್ಲಿ 270 ಪ್ರಕರಣಗಳ ವಿಚಾರಣೆ ಪೂರ್ಣಗೊಳಿಸಲಾಗಿದೆ’ ಎಂದು ಹೇಳಿದರು.

‘ಕೇವಲ ಒಂದೆರೆಡು ಪ್ರಕರಣ ಹೊರತುಪಡಿಸಿ ಉಳಿದೆಲ್ಲಾ ಪ್ರಕರಣಗಳಲ್ಲೂ ಭೂಕಂದಾಯ ಕಾಯ್ದೆ ಉಲ್ಲಂಘಿಸಿಯೇ ಭೂಮಂಜೂರಾತಿ ಮಾಡಲಾಗಿದೆ. ಅವುಗಳೆಲ್ಲವನ್ನೂ ರದ್ದುಗೊಳಿಸಿ ಆದೇಶಿಸಲಾಗಿದೆ. ಒಂದು ಸಾವಿರ ಎಕರೆಯಷ್ಟು ಜಾಗವನ್ನು ಸರ್ಕಾರಕ್ಕೆ ಉಳಿಸಿಕೊಟ್ಟಿರುವ ಆತ್ಮತೃಪ್ತಿ ಇದೆ’ ಎಂದು ತಿಳಿಸಿದರು.

‘ನಮೂನೆ 50, 53 ಮತ್ತು 57ರ ಅಡಿಯಲ್ಲಿ ಅರ್ಜಿ ಸಲ್ಲಿಸಿರುವ ರೈತರು ಮಧ್ಯವರ್ತಿಗಳ ಮೂಲಕ ಅಡ್ಡದಾರಿಯಲ್ಲಿ ಮಂಜೂರಾತಿ ಪಡೆಯುವ ಪ್ರಯತ್ನ ಮಾಡಿದರೆ ಮುಂದಿನ ದಿನಗಳಲ್ಲಿ ಮಂಜೂರಾತಿ ರದ್ದಾಗುವ ಸಾಧ್ಯತೆ ಇದೆ ಎಂಬುದಕ್ಕೆ ಈ ಪ್ರಕರಣಗಳು ಉದಾಹರಣೆ’ ಎಂದರು.

ನಮೂನೆ 50, 53 ಮತ್ತು 57ರಲ್ಲಿ ಭೂಮಂಜೂರಾತಿ ಕೋರಿರುವವರು ಕಾಲಮಿತಿಯೊಳಗೆ ಅರ್ಜಿ ಸಲ್ಲಿಸಿರಬೇಕು. ಅಷ್ಟರಲ್ಲಿ ಅರ್ಜಿದಾರನಿಗೆ 18 ವರ್ಷ ಪೂರ್ಣಗೊಂಡಿರಬೇಕು, ಸ್ವಯಂ ಸಾಗುವಳಿ ಮಾಡುತ್ತಿರಬೇಕು. ಕುಟುಂಬದ ಆಸ್ತಿ 4 ಎಕರೆ 38 ಗುಂಟೆ ಮೀರಿರಬಾರದು ಎಂಬ ನಿಯಮಗಳಿವೆ. ಬಗರ್ ಹುಕುಂ ಸಮಿತಿ ಬಯೋಮೆಟ್ರಿಕ್ ಹಾಜರಾತಿ, ಸಭೆಯ ಪೋಟೊ, ಸಾಗುವಳಿ ಜಾಗದ ಚಿತ್ರಗಳನ್ನು ಆ್ಯಪ್‍ನಲ್ಲಿ ಅಪಲೋಡ್ ಮಾಡಬೇಕು. ನಂತರ ಸ್ಥಳ ಪರಿಶೀಲನೆ ನಡೆಸಿ ಜಾಗ ಮಂಜೂರಾತಿ ಮಾಡಲಾಗುತ್ತಿದೆ. ಈ ನಿಯಮ ಪಾಲನೆಯಾಗದಿದ್ದರೆ ಮಂಜೂರಾತಿ ರದ್ದಾಗುವ ಸಾಧ್ಯತೆ ಇರುತ್ತದೆ. ರೈತರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಪ್ರೆಸ್‍ಕ್ಲಬ್ ಅಧ್ಯಕ್ಷ ಪಿ.ರಾಜೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ತಾರಾನಾಥ್, ಖಜಾಂಚಿ ಎನ್.ಕೆ.ಗೋಪಿ ಇದ್ದರು.

‘ಸಾರಗೋಡು ನಿರಾಶ್ರಿತರಿಗೆ ಭೂಮಿ’

‘ಸಾರಗೋಡು ನಿರಾಶ್ರಿತರಿಗೆ ಭೂಮಿ ಗುರುತಿಸಿದ್ದು ಕೆಲವೇ ದಿನಗಳಲ್ಲಿ ಅವರಿಗೆ ಪುರ್ನವಸತಿ ಕಲ್ಪಿಸುವ ಕಾರ್ಯವನ್ನು ಜಿಲ್ಲಾಡಳಿತ ಮಾಡಲಿದೆ’ ಎಂದು ರಾಜೇಶ್ ಹೇಳಿದರು. ಮೂಡಿಗೆರೆ ತಾ‌ಲ್ಲೂಕಿನ ಸಾರಗೋಡು ಗ್ರಾಮದ 18 ಕುಟುಂಬಗಳು ನಿರಾಶ್ರಿತರಾಗಿದ್ದರು. ಸರ್ಕಾರಿ ಭೂಮಿ ಗುರುತಿಸಿ ಅವರಿಗೆ ಪುರ್ನವಸತಿ ಕಲ್ಪಿಸುವ ಪ್ರಯತ್ನ ಹಿಂದಿನಿಂದಲೂ ನಡೆಯುತ್ತಿತ್ತು. ಇದಕ್ಕಾಗಿ ವಿಶೇಷ ತಂಡ ರಚಿಸಿ ಜಮೀನು ಗುರುತಿಸಲಾಗಿದೆ. ಅವರಿಗೆ ಜಮೀನು ಹಸ್ತಾಂತರಿಸುವ ಕಾರ್ಯ ಶೀಘ್ರದಲ್ಲಿ ನಡೆಯಲಿದೆ ಎಂದರು. ‘ಅತೀವೃಷ್ಟಿಯಿಂದ ಮನೆ ಜಮೀನು ಕಳೆದುಕೊಂಡ ಕಳಸ ತಾಲ್ಲೂಕಿನ ಮಲೆಮನೆ ಮಧುಗುಣಿ ಮೇಗೂರು ಗ್ರಾಮದ 10 ರಿಂದ 12 ಕುಟುಂಬಗಳಿಗೆ ಜಮೀನು ಗುರುತಿಸಲಾಗಿದೆ. ಈ ಎರಡು ಕಾರ್ಯಗಳು ನನ್ನ ಮನಸ್ಸಿನಲ್ಲಿ ಅಚ್ಚಳಿಯಂತೆ ಉಳಿಯುವ ಕೆಲಸಗಳಾಗಿವೆ’ ಎಂದು ಹೇಳಿದರು.

‘ದಾರಿ ಬಿಡದಿದ್ದರೂ ಮಂಜೂರಾತಿ ರದ್ದು’

‘ಸರ್ಕಾರಿ ಜಾಗ ಮಂಜೂರಾತಿ ಪಡೆದುಕೊಂಡವರು ಮುಂದೆ ಜಮೀನು ಇರುವವರಿಗೆ ದಾರಿ ಬಿಡದಿದ್ದರೂ ಮಂಜೂರಾತಿ ರದ್ದು ಮಾಡಲು ಕಂದಾಯ ಕಾಯ್ದೆಯಲ್ಲಿ ಅಧಿಕಾರ ಇದೆ’ ಎಂದು ಉಪವಿಭಾಗಾಧಿಕಾರಿ ರಾಜೇಶ್ ತಿಳಿಸಿದರು. ‘ನಕಾಶೆಯಲ್ಲಿ ದಾರಿ ಇದ್ದರೆ ಯಾವುದೇ ಕಾರಣಕ್ಕೂ ಪಕ್ಕದ ಜಮೀನಿನವರು ವಶಪಡಿಸಿಕೊಳ್ಳಲು ಆಗುವುದಿಲ್ಲ. ನಕಾಶೆಯಲ್ಲಿ ಇಲ್ಲದಿದ್ದರೂ ಹಲವು ವರ್ಷಗಳಿಂದ ದಾರಿ ಇದ್ದು ಪಕ್ಕದವರು ಬೇಲಿ ಹಾಕಿಕೊಂಡರೆ ಬಿಡಿಸಿಕೊಡಲು ಅವಕಾಶ ಇದೆ. ಒಪ್ಪದಿದ್ದರೆ ಮಂಜೂರಾತಿಯನ್ನೇ ರದ್ದುಗೊಳಿಸಿ ದಾರಿ ಮಾಡಿಕೊಡಬಹುದಾಗಿದೆ. ಚಿಕ್ಕಮಗಳೂರು ಉಪವಿಭಾಗ ವ್ಯಾಪ್ತಿಯಲ್ಲಿ ನಾಲ್ಕೈದು ಪ್ರಕರಣಗಳಲ್ಲಿ ಮಂಜೂರಾತಿ ರದ್ದು ಮಾಡಿದ್ದೇನೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT