ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

92 ಕಿಲೋ ಮೀಟರ್ ಮಾನವ ಸರಪಳಿ

ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ: ಸಂವಿಧಾನ ಪೀಠಿಕೆ ಪಠಣ
Published : 15 ಸೆಪ್ಟೆಂಬರ್ 2024, 12:58 IST
Last Updated : 15 ಸೆಪ್ಟೆಂಬರ್ 2024, 12:58 IST
ಫಾಲೋ ಮಾಡಿ
Comments

ಚಿಕ್ಕಮಗಳೂರು: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ‌ ದಿನಾಚರಣೆ ಅಂಗವಾಗಿ ಜಿಲ್ಲೆಯಲ್ಲಿ 92 ಕಿಲೋ ಮೀಟರ್ ಮಾನವ ಸರಪಳಿ ನಿರ್ಮಿಸಲಾಯಿತು. ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಮಾನವ ಸರಪಳಿ ನಿರ್ಮಿಸಿ ಚಾಲನೆ ನೀಡಿದರು.

ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ಎಲ್ಲರೂ ಪರಸ್ಪರ ಕೈ ಹಿಡಿದು‌ ಮೇಲಕ್ಕೆತ್ತಿ ಪ್ರಜಾಪ್ರಭುತ್ವ ದಿನವನ್ನು ಸಂಭ್ರಮಿಸಿದರು. ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಯೋಗೀಶ್ ಓದಿದ ಸಂವಿಧಾನ ಪೀಠಿಕೆಯನ್ನು ಎಲ್ಲರೂ ಸಾಮೂಹಿಕವಾಗಿ ಪಠಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಟಿ.ಡಿ.ರಾಜೇಗೌಡ, ‘ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡು ವಿಧಿಸಿಕೊಂಡಿದ್ದೇವೆ. ಬೇರೆ ಬೇರೆ ದೇಶಗಳ ಸಂವಿಧಾನದಲ್ಲಿ ಇದ್ದ ಉತ್ತಮ ಅಂಶಗಳನ್ನು ಗಣನೆಗೆ ತೆಗೆದುಕೊಂಡು 2 ವರ್ಷ, 11 ತಿಂಗಳು, 18 ದಿನಗಳ ಕಾಲ ಅಧ್ಯಯನ ನಡೆಸಿ ಸಂವಿಧಾನ ರಚಿಸಲಾಗಿದೆ. ಇದರಲ್ಲಿ 467 ವಿಧಿಗಳು, 72 ಕಾಯ್ದೆಗಳು, 12 ಅನುಚ್ಛೇದಗಳಿವೆ. ಈ ಸಂವಿಧಾನ ರಚನೆ ಮಾಡಿದ ಕೀರ್ತಿ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ’ ಎಂದರು.

‘ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿಯಾದರೆ, ದೇಶದ ನಾಗರಿಕರಿಗೆ ಸಮಾನ ಅವಕಾಶ ಕಲ್ಪಿಸಿದವರು ಡಾ.ಅಂಬೇಡ್ಕರ್. ಸ್ವತಂತ್ರ್ಯ ನಂತರ ಪ್ರಜಾಪ್ರಭುತ್ವಕ್ಕೆ ಕಾರಣರಾದವರು ಜವಾಹರಲಾಲ್ ನೆಹರು. 1972ರಲ್ಲಿ 42ನೇ ತಿದ್ದುಪಡಿ ಮೂಲಕ ಸಮಾಜವಾದಿ, ಜಾತ್ಯಾತೀತ ಪದವನ್ನು ಸಂವಿಧಾನಕ್ಕೆ ಸೇರ್ಪಡೆ ಮಾಡಿದ ಕೀರ್ತಿ ಇಂದಿರಾ ಗಾಂಧಿ ಅವರಿಗೆ ಸಲ್ಲುತ್ತದೆ’ ಎಂದು ಬಣ್ಣಿಸಿದರು.

‘ಸಮಾನ್ಯ ವ್ಯಕ್ತಿ ಕೂಡ ದೇಶದ ಪ್ರಧಾನಿ, ರಾಷ್ಟ್ರಪತಿಯಾಗಲು ಸಂವಿಧಾನ ಅವಕಾಶ ನೀಡಿದೆ. ಚಹಾ ಮಾರುತ್ತಿದ್ದ ನರೇಂದ್ರ ಮೋದಿ ಅವರು ಪ್ರಧಾನಿಯಾದರು. ಕುರಿ ಕಾಯುತ್ತಿದ್ದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದರು. ಸಾಮಾನ್ಯ ರೈತರ ಮಕ್ಕಳಾದ ನಾನು ಮತ್ತು  ಸಿ.ಟಿ.ರವಿ ಅವರು ಶಾಸಕರಾಗಿದ್ದೇವೆ. ಇದಕ್ಕೆ ಪ್ರಮುಖ ಕಾರಣ ನಮ್ಮ ದೇಶದ ಸಂವಿಧಾನ’ ಎಂದರು.

ಇಂತಹ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗೌರವಿಸಲು ಸರ್ಕಾರ ಕಳೆದ ವರ್ಷದಿಂದ ವಿನೂನತ ಕಾರ್ಯಕ್ರಮ ರೂಪಿಸಿದೆ. ಶಾಲಾ–ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆ ಓದುವ ಕೆಲಸ ಆರಂಭಿಸಿದೆ. ಸಂವಿಧಾನ ಜಾಗೃತಿ ಜಾಥ ನಡೆಸಿದೆ. ಈ ಬಾರಿ ಬೀದರ್‌ನಿಂದ ಚಾಮರಾಜನಗರದ ತನಕ 2500 ಕಿಲೋ ಮೀಟರ್‌ನಲ್ಲಿ 25 ಲಕ್ಷ ಜನರೊಂದಿಗೆ ಮಾನವ ಸರಪಳಿ ನಿರ್ಮಿಸಿ ದಾಖಲೆ ನಿರ್ಮಿಸಿದೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಮಾಗಡಿ ಕೈಮರದಿಂದ ತರೀಕೆರೆ ತಾಲ್ಲೂಕಿನ ಎಂ.ಸಿ.ಹಳ್ಳಿ ಗಡಿ ತನಕ 92 ಕಿಲೋ ಮೀಟರ್ ಮಾನವ ಸರಪಳಿ ನಿರ್ಮಿಸಲಾಗಿದೆ. ಇದು ಹೆಮ್ಮೆಯ ವಿಷಯ. ಕಾರ್ಯಕ್ರಮ ರೂಪಿಸಿದ ಅಧಿಕಾರಿಗಳಿಗೆ ಅಭಿನಂದನೆಗಳು’ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ‘ಕಟ್ಟ ಕಡೆಯ ವ್ಯಕ್ತಿಗೆ ಬಲ ಕೊಡುವುದು ಸಂವಿಧಾನ ಆಶಯ. ಅಭಿಪ್ರಾಯವನ್ನು ಗೌರವಿಸುವುದು ಪ್ರಜಾಪ್ರಭುತ್ವದ ಮೂಲ ತಿರುಳು. ವೈವಿದ್ಯತೆಯಂದ ಕೂಡಿರುವ ನಮ್ಮ ದೇಶದಲ್ಲಿ ಏಕತೆ ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿ’ ಎಂದರು.

‘ವೈವಿದ್ಯತೆಯನ್ನೇ ಅಸ್ತ್ರವಾಗಿ ರೂಪಿಸಿಕೊಂಡು ದೇಶ ಒಡೆಯುವ ತಂತ್ರಗಳನ್ನು ಕೆಲವರು ಮಾಡುತ್ತಿದ್ದರೆ. ಪ್ರಾದೇಶಿಕತೆ, ಭಾಷಾ ವೈವಿದ್ಯತೆಯಲ್ಲೇ ಭಿನ್ನತೆ ಹುಟ್ಟು ಹಾಕಲಾಗುತ್ತಿದೆ. ಏಕತೆಯ ಸೂತ್ರದಲ್ಲಿ ಬಂಧಿಸಿರುವುದು ನಮ್ಮ ಹೆಮ್ಮೆಯ ಸಂವಿಧಾನ. ತುರ್ತು ಪರಿಸ್ಥಿತಿ ರೀತಿಯ ಕಹಿ ನೆನನಪು ಮತ್ತೆಂದೂ ಮರುಕಳಿಸದಂತೆ ನಾವೆಲ್ಲರೂ ಎಚ್ಚರ ವಹಿಸಬೇಕಿದೆ. ಅಂಬೇಡ್ಕರ್ ನೈಜ ಚಿಂತನೆಗಳನ್ನು ಬದುಕಿನಲ್ಲಿ ಎಲ್ಲರೂ ಅಳವಡಿಸಿಕೊಂಡರೆ ಭೀಮನ ಭಾರತ ವಿಶ್ವಗುರು ಭಾರತ ಆಗಲಿದೆ’ ಎಂದರು.

ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್, ಉಪಾಧ್ಯಕ್ಷೆ ಅನು ಮಧುಕರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದಸ್ವಾಮಿ ಭಾಗವಹಿಸಿದ್ದರು.

ಚಿಕ್ಕಮಗಳೂರಿನಲ್ಲಿ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಣೆ ಸಂದರ್ಭದಲ್ಲಿ ಶಾಸಕ ಟಿ.ಡಿ.ರಾಜೇಗೌಡ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು
ಚಿಕ್ಕಮಗಳೂರಿನಲ್ಲಿ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಣೆ ಸಂದರ್ಭದಲ್ಲಿ ಶಾಸಕ ಟಿ.ಡಿ.ರಾಜೇಗೌಡ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು
ಚಿಕ್ಕಮಗಳೂರಿನಲ್ಲಿ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಅಂಗವಾಗಿ ಎಂ.ಜಿ.ರಸ್ತೆಯಲ್ಲಿ ವಿದ್ಯಾರ್ಥಿನಿಯರು ಮಾನವ ಸರಪಳಿ ನಿರ್ಮಿಸಿದರು
ಚಿಕ್ಕಮಗಳೂರಿನಲ್ಲಿ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಅಂಗವಾಗಿ ಎಂ.ಜಿ.ರಸ್ತೆಯಲ್ಲಿ ವಿದ್ಯಾರ್ಥಿನಿಯರು ಮಾನವ ಸರಪಳಿ ನಿರ್ಮಿಸಿದರು
ಚಿಕ್ಕಮಗಳೂರಿನಲ್ಲಿ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಣೆ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೈ ಎತ್ತಿ ಸಂಭ್ರಮಿಸಿದರು
ಚಿಕ್ಕಮಗಳೂರಿನಲ್ಲಿ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಣೆ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೈ ಎತ್ತಿ ಸಂಭ್ರಮಿಸಿದರು

80 ಸಾವಿರ ಜನ ಭಾಗಿ

ಮಾಗಡಿ ಕೈಮರದಿಂದ ಆರಂಭವಾಗಿ ಹಿರೇಮಗಳೂರು ಎಂ.ಜಿ.ರಸ್ತೆ ಸಖರಾಯಪಟ್ಟಣ ಕಡೂರು ಬೀರೂರು ತರೀಕೆರೆ ಮಾರ್ಗವಾಗಿ ಜಿಲ್ಲೆಯ ಗಡಿ ಎಂ.ಸಿ.ಹಳ್ಳಿ ತನಕ ಮಾನವ ಸರಪಳಿ ನಿರ್ಮಿಸಲಾಯಿತು. ವಿದ್ಯಾರ್ಥಿಗಳು ವಿವಿಧ ಸಂಘಟನೆಗಳ ಮುಖಂಡರು ಸ್ವಯಂ ಸೇವಕರು ವಿವಿಧ ಯೋಜನೆಗಳ ಫಲಾನುಭವಿಗಳು ಸರ್ಕಾರಿ ನೌಕರರು ಸೇರಿ ಒಟ್ಟು 80 ಸಾವಿರ ಜನ ಏಕಕಾಲದಲ್ಲಿ ಮಾನವ ಸರಪಳಿ ನಿರ್ಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT