ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಡೂರು | ಎಪಿಎಂಸಿ: ಮೂಲಸೌಕರ್ಯದ್ದೇ ಕೊರತೆ

ಮುಖ್ಯ ಪ್ರಾಂಗಣದಲ್ಲಿ ಗೋಡೋನ್‌, ದೊಡ್ಡ ಮತ್ತು ಸಣ್ಣ ಮಳಿಗೆಗಳು ಸೇರಿ ಒಟ್ಟು 120 ಮಳಿಗೆ
ಬಾಲುಮಚ್ಚೇರಿ ಕಡೂರು
Published 8 ಜನವರಿ 2024, 6:41 IST
Last Updated 8 ಜನವರಿ 2024, 6:41 IST
ಅಕ್ಷರ ಗಾತ್ರ

ಕಡೂರು: ಪಟ್ಟಣದ ಎಪಿಎಂಸಿಯ ಪ್ರಮುಖ ಮಾರುಕಟ್ಟೆ, ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ನಿರ್ವಹಣೆ ಕೊರತೆ ಒಂದೆಡೆಯಾದರೆ, ಮುಖ್ಯ ಮಾರುಕಟ್ಟೆಯಲ್ಲಿರುವ ಓವರ್ ಹೆಡ್ ಟ್ಯಾಂಕ್‌ನಿಂದ ನೀರು ಸೋರುತ್ತಾ ಪ್ರಾಂಗಣದಲ್ಲೆಲ್ಲ ನೀರು ನಿಲ್ಲುತ್ತಿರುವುದು ವ್ಯಾಪಾರಿಗಳಿಗೆ, ಸಾರ್ವಜನಿಕರಿಗೆ ತೊಂದರೆಯಾಗಿದೆ.

ಪಟ್ಟಣಕ್ಕೆ ನೀರು ಪೂರೈಸುವ ಭದ್ರಾ ಕುಡಿಯುವ ನೀರಿನ ಯೋಜನೆಯ ಒಂದು ಓವರ್ ಹೆಡ್ ಟ್ಯಾಂಕ್ ಎಪಿಎಂಸಿ ಆವರಣದಲ್ಲಿಯೇ ಇದ್ದರೂ ಈ ಭದ್ರಾ ನೀರಿನ ಸಂಪರ್ಕ ಮಾತ್ರ ಎಪಿಎಂಸಿಗೆ ನೀಡಿಲ್ಲ!. ನೀರು ಸೋರಿಕೆಯಿಂದ ಪ್ರಾಂಗಣದಲ್ಲಿ ನೀರು ನಿಂತು ವರ್ತಕರಿಗೆ, ಸಾರ್ವಜನಿಕರಿಗೆ ತೊಂದರೆಯಾಗಿದೆ. ಈ ಕುರಿತು ಪುರಸಭೆಗೆ ಹಲವಾರು ಬಾರಿ ಮಾಹಿತಿ ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಸದ್ಯ ಎಪಿಎಂಸಿ ಕೊಳವೆಬಾವಿಯ ನೀರನ್ನೆ ನೆಚ್ಚಿಕೊಂಡಿದ್ದು, ಕಳೆದ ಹದಿನೈದು ದಿನಗಳಿಂದ ಕೊಳವೆಬಾವಿ ಕೂಡಾ ಕೆಟ್ಟುಹೋಗಿ ಎಪಿಎಂಸಿಯಲ್ಲಿ ನೀರಿಲ್ಲದೆ ತೊಂದರೆ ಅನುಭವಿಸುವಂತಾಗಿದೆ ಎನ್ನುತ್ತಾರೆ ಅಲ್ಲಿದ್ದ ವರ್ತಕರು.

ಎಪಿಎಂಸಿಯ ಮುಖ್ಯ ಪ್ರಾಂಗಣದಲ್ಲಿ ಗೋಡೋನ್‌ಗಳು, ದೊಡ್ಡ ಮತ್ತು ಸಣ್ಣ ಮಳಿಗೆಗಳು ಸೇರಿ ಒಟ್ಟು 120 ಮಳಿಗೆಗಳಿವೆ. ಬಹುತೇಕ ಎಲ್ಲವೂ ಹಂಚಿಕೆಯಾಗಿದ್ದು, ಅವಧಿ ಮುಗಿದ ಏಳು ಮಳಿಗೆಗಳು ಮಾತ್ರ ಖಾಲಿಯಿವೆ.

ಬಸ್ ನಿಲ್ದಾಣದ ಹಿಂಭಾಗವಿರುವ ಹಳೆ ಎಪಿಎಂಸಿ ಮಾರುಕಟ್ಟೆಯಲ್ಲಿರುವ 26 ಮಳಿಗೆಗಳ ಪೈಕಿ 5ಮಳಿಗೆಗಳನ್ನು ಬಾಡಿಗೆ ಪಡೆದಿದ್ದವರು ಬಾಕಿ ಉಳಿಸಿಕೊಂಡ ಪರಿಣಾಮ 3 ಮಳಿಗೆಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇನ್ನೆರಡು ಮಳಿಗೆಗಳ ಬಾಕಿ ₹50 ಸಾವಿರ ಇದ್ದು, ಅದನ್ನು ಬಾಡಿಗೆಗೆ ಪಡೆದವರಿಗೆ ನೋಟೀಸ್ ನೀಡಿದ್ದರೂ ಪ್ರತಿಕ್ರಿಯಿಸಿಲ್ಲವೆಂಬ ಮಾಹಿತಿಯಿದೆ. ಈ ಪ್ರಾಂಗಣದಲ್ಲಿರುವ ಹರಾಜು ಕಟ್ಟೆ ರಾತ್ರಿ ಹೊತ್ತು ಮದ್ಯಪಾನ ಮಾಡುವವರ, ಭಿಕ್ಷುಕರ ವಿಶ್ರಾಂತಿ ತಾಣವಾಗಿದೆ.

ಮುಖ್ಯ ಮಾರುಕಟ್ಟೆಯಲ್ಲಿರುವ ಹರಾಜು ಕಟ್ಟೆಗಳಲ್ಲಿ ಕೆಲವರು ಎಪಿಎಂಸಿ ಪರವಾನಗಿ ಪಡೆದು ಷರತ್ತಿನ ಮೇಲೆ ತರಕಾರಿ ಮತ್ತಿತರ ಧಾನ್ಯ ವ್ಯಾಪಾರ ಮಾಡುತ್ತಾರೆ. ಇವರೆಲ್ಲರೂ ಬಳಕೆದಾರರ ಶುಲ್ಕವನ್ನು ಎಪಿಎಂಸಿಗೆ ಪಾವತಿಸುತ್ತಾರೆ. ನೆಲಗಡಲೆ, ಈರುಳ್ಳಿ ಮುಂತಾದ ಉತ್ಪನ್ನಗಳ ಹರಾಜು ಪ್ರಕ್ರಿಯೆ ಆರಂಭವಾದರೆ ಇವರೆಲ್ಲ ಜಾಗ ತೆರವು ಮಾಡುವ ಷರತ್ತಿನ ಮೇಲೆ ವಹಿವಾಟಿಗೆ ಅವಕಾಶ ಮಾಡಿಕೊಡಲಾಗಿದೆ. ಆದರೆ ತರಕಾರಿ ಮತ್ತಿತರ ಕಸವನ್ನು ಅಲ್ಲೇ ಹಾಕುವುದರಿಂದ ನೈರ್ಮಲ್ಯ ಸಮಸ್ಯೆ ಎದುರಾಗಿದ್ದು, ಈ ಕುರಿತು ವ್ಯಾಪಾರಿಗಳಿಗೆ ನೋಟೀಸ್ ನೀಡಲಾಗಿದೆ ಎನ್ನುತ್ತಾರೆ ಎಪಿಎಂಸಿ ಅಧಿಕಾರಿಗಳು.

ಎಪಿಎಂಸಿ ಒಳಭಾಗದಲ್ಲಿರುವ ಶೌಚಾಲಯ ನಿರ್ವಹಣೆ ಕೊರತೆಯಿಂದ ಬಳಕೆಯಾಗದೆ, ಮಳಿಗೆಗಳ ಹಿಂಭಾಗಗಳೇ ಶೌಚಾಲಯವಾಗಿ ಮಾರ್ಪಟ್ಟಿದ್ದು, ದುರ್ವಾಸನೆಯಿಂದ ವಾಯುವಿಹಾರಕ್ಕೆ ಬರುವವರಿಗೆ ತೊಂದರೆಯಾಗಿದೆ.

ರೈತರ ಉಪಯೋಗಕ್ಕಾಗಿ ಆರಂಭಿಸಿದ ಎಟಿಎಂ ಕೂಡ ಕಾರ್ಯನಿರ್ವಹಿಸುತ್ತಿಲ್ಲ. ವಸ್ತುಗಳ ಧಾರಣೆ ಮತ್ತು ಮಾರುಕಟ್ಟೆ ಬೆಲೆಯನ್ನು ಪ್ರದರ್ಶಿಸುವ ವ್ಯವಸ್ಥೆಯೂ ಇಲ್ಲಿ ಇಲ್ಲದಂತಾಗಿದೆ. ಒಟ್ಟು 21 ಮಂಜೂರಾದ ಹುದ್ದೆಗಳಲ್ಲಿ 15 ಹುದ್ದೆಗಳು ಖಾಲಿಯಿವೆ. 6 ಜನ ಹೊರಗುತ್ತಿಗೆ ನೌಕರರಿದ್ದಾರೆ.

ಒಟ್ಟಾರೆ ಕಡೂರಿನ ಎಪಿಎಂಸಿ ಪ್ರಾಂಗಣದಲ್ಲಿ ನಿರ್ವಹಣೆಯ ಕೊರತೆಯಿದ್ದು, ಶೀಘ್ರ ಮೂಲ ಸೌಕರ್ಯಗಳನ್ನು ನೀಡಬೇಕಾಗಿದೆ ಎಂಬ ಮಾತು ಸಾರ್ವಜನಿಕರದ್ದಾಗಿದೆ.

ಟ್ಯಾಂಕಿನಿಂದ ಸೋರುವ ನೀರು ಮಾರುಕಟ್ಟೆ ಪ್ರಾಂಗಣದಲ್ಲಿ ನಿಲ್ಲತ್ತದೆ.
ಟ್ಯಾಂಕಿನಿಂದ ಸೋರುವ ನೀರು ಮಾರುಕಟ್ಟೆ ಪ್ರಾಂಗಣದಲ್ಲಿ ನಿಲ್ಲತ್ತದೆ.

ಸ್ವಚ್ಛತೆ ಕಾಪಾಡಿಕೊಳ್ಳುವಂತೆ ವರ್ತಕರಿಗೆ ಮತ್ತು ತರಕಾರಿ ವ್ಯಾಪಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ- ಎಂ‌.ಎಚ್.ಧರ್ಮರಾಜ್ ಕಾರ್ಯದರ್ಶಿ ಎಪಿಎಂಸಿ

- ಬೆಳಗಿನ ಹೊತ್ತು ವಾಯುವಿಹಾರ ಮಾಡಲು ಸೂಕ್ತ ಜಾಗವಿದು. ಆದರೆ ಸ್ವಚ್ಛತೆಯ ಕಡೆ ಅಧಿಕಾರಿಗಳು ಗಮನ ಹರಿಸಿದರೆ ಹಿರಿಯ ನಾಗರಿಕರಿಗೆ ಅನುಕೂಲವಾಗುತ್ತದೆ - ಪರಮೇಶ್ವರಪ್ಪ ಕಡೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT