ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡೂರಿನ ಎಮ್ಮೆದೊಡ್ಡಿಯಲ್ಲಿ ಸರ್ಕಾರಿ ಗೋಶಾಲೆ ಉದ್ಘಾಟಿಸಿದ ಸಚಿವ ಪ್ರಭು ಚವ್ಹಾಣ್

Last Updated 27 ಜೂನ್ 2022, 10:34 IST
ಅಕ್ಷರ ಗಾತ್ರ

ಕಡೂರು: ಭಾರತದಂತಹ ಕೃಷಿ ಪ್ರಧಾನ ದೇಶದಲ್ಲಿ ಗೋ ಸಂರಕ್ಷಣೆಯೆಂಬುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ತಿಳಿಸಿದರು.

ತಾಲ್ಲೂಕಿನ ಎಮ್ಮೆದೊಡ್ಡಿಯಲ್ಲಿ ‘ಜಿಲ್ಲೆಗೊಂದು ಸರ್ಕಾರಿ ಗೋಶಾಲೆ’ ಯೋಜನೆಯಲ್ಲಿ ನಿರ್ಮಾಣಗೊಂಡಿರುವ ರಾಜ್ಯದ ಪ್ರಥಮ ಗೋಶಾಲೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದ ನಂತರ ಜಿಲ್ಲೆಗೊಂದು ಗೋಶಾಲೆ ಯೋಜನೆ ಜಾರಿಗೆ ಬಂದಿತು. ನಮ್ಮ ಬಂಜಾರ ಸಮುದಾಯದ ಅದಿದೈವ ಸೇವಾಲಾಲ್ ಗೋರಕ್ಷಕರಾಗಿದ್ದರು. ಹಾಗಾಗಿಯೇ ಪಶು ಸಂಗೋಪನಾ ಇಲಾಖೆಯನ್ನೇ ಕೇಳಿ ಪಡೆದಿದ್ದೇನೆ. ಇಲಾಖೆಯ ಮೂಲಕ ಬಹಳಷ್ಟು ಕಾರ್ಯಗಳನ್ನು ಮಾಡಲಾಗಿದೆ. ಪ್ರಾಣಿ ಸಹಾಯ ಕೇಂದ್ರಗಳು ಸ್ಥಾಪನೆಯಾಗಿದೆ. ನಮ್ಮ ಹಸುಗಳ ಸಂರಕ್ಷಣೆಯಾಗಬೇಕು. ಕಸಾಯಿಖಾನೆಗೆ ಹೋಗಬಾರದು. ರೈತರು ತಮ್ಮ ಹಸುಗಳು ಹೊರೆ ಅನ್ನಿಸಿದರೆ ಗೋಶಾಲೆಗೆ ತಂದು ಬಿಡಬಹುದು’ ಎಂದು ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಬೆಳ್ಳಿಪ್ರಕಾಶ್ ಮಾತನಾಡಿ, ‘ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ಪ್ರಮುಖ ಸ್ಥಾನವಿದೆ. ಧಾರ್ಮಿಕವಾಗಿ ಮಹತ್ವದ ಸ್ಥಾನ ಪಡೆದಿರುವ ಗೋವಿನ ಸಂರಕ್ಷಣೆಯಲ್ಲಿ ಸರ್ಕಾರವೇ ಜಿಲ್ಲೆಗೊಂದು ಗೋಶಾಲೆ ಯೋಜನೆಯಲ್ಲಿ ರಾಜ್ಯದಲ್ಲಿಯೇ ಪ್ರಥಮವಾಗಿ ಕಡೂರು ತಾಲ್ಲೂಕಿನಲ್ಲಿ ಉದ್ಘಾಟನೆಗೊಂಡಿದೆ. ಪಶು ಸಂಗೋಪಣಾ ಇಲಾಖೆಗೆ ಸಂಬಂಧಿಸಿದ ಸವಲತ್ತುಗಳನ್ನು ಕಡೂರು ತಾಲ್ಲೂಕಿಗೆ ನೀಡುವಲ್ಲಿ ಆದ್ಯತೆ ನೀಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.

ಪಶು ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕ ಡಾ.ವೀರಭದ್ರಯ್ಯ, ನಿರ್ದೇಶಕ ಮಂಜುನಾಥ್ ಪಾಳೆಗಾರ್, ಉಪ ನಿರ್ದೇಶಕ ಪ್ರಕಾಶ್, ತಾಲ್ಲೂಕು ಸಹಾಯಕ ನಿರ್ದೇಶಕ ಡಾ.ಉಮೇಶ್, ಮುಖ್ಯಪಶು ವೈದ್ಯಾಧಿಕಾರಿ, ಡಾ.ಕಿರಣ್, ಡಾ.ಅರುಣ್, ತಹಶೀಲ್ದಾರ್ ಜೆ.ಉಮೇಶ್, ಇಒ ಡಾ.ದೇವರಾಜ ನಾಯ್ಕ, ಎಮ್ಮೆದೊಡ್ಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾಬಾಯಿ, ಜೈನ ಟ್ರಸ್ಟ್ ಮುಖ್ಯಸ್ಥ ಮಹಾವೀರ್ ಜೈನ್, ಬೀರೂರು ಪುರಸಭಾಧ್ಯಕ್ಷ ಎಂ.ಪಿ.ಸುದರ್ಶನ್, ಬಿಜೆಪಿ ಮುಖಂಡರಾದ ಅಡಿಕೆ ಚಂದ್ರು ಇದ್ದರು.

ಗೋಶಾಲೆ ಉದ್ಘಾಟನೆಗೂ ಮುನ್ನ ಶಾಸಕರ ಕಚೇರಿಗೆ ಬಂದ ಸಚಿವರನ್ನು ಬೆಳ್ಳಿಪ್ರಕಾಶ್ ಸ್ವಾಗತಿಸಿ, ಕ್ಷೇತ್ರದ ಪರವಾಗಿ ಸ್ಮರಣಿಕೆ ನೀಡಿ ಗೌರವಿಸಿದರು. ಬಂಜಾರ ಸಮುದಾಯದ ಮಹಿಳೆಯರು ಬಂಜಾರರ ಸಾಂಪ್ರದಾಯಿಕ ಉಡುಪು ಧರಿಸಿ ನೃತ್ಯದ ಮೂಲಕ ಸಚಿವರನ್ನು ಸ್ವಾಗತಿಸಿದ್ದು ವಿಶೇಷವಾಗಿತ್ತು.

‘ಒಕ್ಕಲೆಬ್ಬಿಸುವ ಪ್ರಸ್ತಾಪ ಇಲ್ಲ’

‘ಗೋ ಸಂರಕ್ಷಣೆಯ ಏಕೈಕ ಉದ್ದೇಶದಿಂದ ಗೋಶಾಲೆ ಆರಂಭವಾಗಿದೆ. ವಿರೋಧಿಗಳು ಇಲ್ಲಿಂದ ರೈತರನ್ನು ಒಕ್ಕಲೆಬ್ಬಿಸುತ್ತಾರೆಂಬ ಸುದ್ದಿ ಹಬ್ಬಿಸಿದ್ದಾರೆ. ಆ ರೀತಿಯ ಯಾವುದೇ ಪ್ರಸ್ತಾಪವಿಲ್ಲ. ಈ ಭಾಗದ ರೈತರ ಬಹುದೊಡ್ಡ ಸಮಸ್ಯೆಯ ಪರಿಹಾರ ಮಾಡುವುದರಲ್ಲಿ ಯಶಸ್ವಿಯಾಗುತ್ತೇನೆ’ ಎಂದು ಬೆಳ್ಳಿಪ್ರಕಾಶ್ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT